ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ‘ನಿಸರ್ಗ’ ಭೀತಿ | ಕೋವಿಡ್ ಬಿಕ್ಕಟ್ಟಿನ ಮಧ್ಯೆ ಚಂಡಮಾರುತದ ಸವಾಲು

Last Updated 3 ಜೂನ್ 2020, 10:07 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು:‌ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ನಿಸರ್ಗ’ ಚಂಡಮಾರುತವು, ಮಂಗಳವಾರ ಮಧ್ಯಾಹ್ನ ತೀವ್ರ ಚಂಡಮಾರುತದ ಸ್ವರೂಪ ಪಡೆದಿದೆ. ಚಂಡಮಾರುತವು ಬುಧವಾರ ಬೆಳಗ್ಗೆ ಮಹಾರಾಷ್ಟ್ರದಲ್ಲಿ ನೆಲಕ್ಕೆ ಅಪ್ಪಳಿಸಲಿದೆ. ‌ಚಂಡಮಾರುತವು ಹಾದುಹೋಗುವ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಗುಜರಾತ್‌ನ ಕರಾವಳಿ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಉತ್ತರ ಮಹಾರಾಷ್ಟ್ರ ಮತ್ತು ಆಗ್ನೇಯ ಗುಜರಾತ್‌ನ ಮಧ್ಯಭಾಗವನ್ನು ಚಂಡಮಾರುತವು ಹಾದುಹೋಗಲಿದೆ. ಈ ಎರಡು ರಾಜ್ಯಗಳಲ್ಲದೆ,ಗೋವಾ ಮತ್ತು ಕರ್ನಾಟಕದ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಕರಾವಳಿಯಲ್ಲಿ ಭಾರಿ ಉಬ್ಬರವಿಳಿತ ಇರಲಿದೆ. 100 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೋಮವಾರವೇ ಸೂಚನೆ ನೀಡಲಾಗಿದೆ.

ಮಂಗಳವಾರ ಮಧ್ಯಾಹ್ನ ಮುಂಬೈನಿಂದ ದಕ್ಷಿಣಕ್ಕೆ 430 ಕಿ.ಮೀ. ದೂರದಲ್ಲಿ ಚಂಡಮಾರುತದ ಕೇಂದ್ರಬಿಂದುವಿತ್ತು. ಈ ಮೊದಲು ಚಂಡಮಾರುತವು ಮುಂಬೈಗೆ ನೇರವಾಗಿ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಮಂಗಳವಾರ ಬೆಳಗ್ಗೆ ‘ನಿಸರ್ಗ’ವು ತನ್ನ ದಿಕ್ಕು ಬದಲಿಸಿದ್ದು, ಮುಂಬೈನಿಂದ ದಕ್ಷಿಣದಲ್ಲಿ ನೆಲಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂಬೈನಿಂದ ದಕ್ಷಿಣಕ್ಕೆ 94 ಕಿ.ಮೀ. ದೂರದಲ್ಲಿ ಇರುವ ಆಲಿಬಾಗ್‌ನಲ್ಲಿ ಚಂಡಮಾರುತವು ಭೂಪ್ರದೇಶಕ್ಕೆ ಪ್ರವೇಶಿಸಲಿದೆ. ಆದರೆ ಮುಂಬೈ, ಪಾಲ್ಘರ್‌‌, ರಾಯಗಡ, ಠಾಣೆ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಬಿರುಗಾಳಿಯು 110–120 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ಶತಮಾನದ ನಂತರ ಮುಂಬೈಗೆ ಚಂಡಮಾರುತ
129 ವರ್ಷಗಳಲ್ಲಿ ಮುಂಬೈಗೆ ಅಪ್ಪಳಿಸುತ್ತಿರುವ ಮೊದಲ ಚಂಡಮಾರುತ‘ನಿಸರ್ಗ’. ಹಿಂದಿನ ಭಾರಿ ತೀವ್ರ ಸ್ವರೂಪದ ಚಂಡಮಾರುತವು ಮುಂಬೈಗೆ ಅಪ್ಪಳಿಸಿದ್ದು 1891ರಲ್ಲಿ. ನಂತರ ಅರಬ್ಬಿ ಸಮುದ್ರದಲ್ಲಿ ಹಲವು ಚಂಡಮಾರುತಗಳು ರೂಪುಗೊಂಡಿದ್ದವು. ಆದರೆ, ಆವು ಯಾವುವೂ ಮುಂಬೈಗೆ ಅಪ್ಪಳಿಸಿರಲಿಲ್ಲ. ನಿಸರ್ಗ ಚಂಡಮಾರುತದ ಹಾದಿಯ ಕೇಂದ್ರಭಾಗವು ಮುಂಬೈ ಗಡಿಯನ್ನು ಸವರಿಕೊಂಡು ಹೋಗಲಿದೆ. ಮುಂಬೈಯಲ್ಲಿ ಭಾರಿ ಮಳೆ ಸುರಿಯಲಿದೆ.

ಭಾರಿ ಸಿದ್ಧತೆ
ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳು ಭಾರಿ ಸಿದ್ಧತೆ ನಡೆಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದಾರೆ.ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 30 ತಂಡಗಳನ್ನು ಎರಡೂ ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ.

* ಮುಂಬೈನ ತಗ್ಗು ಪ್ರದೇಶಗಳು ಮತ್ತು ಕೊಳೆಗೇರಿಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

* ಕೋವಿಡ್ ಚಿಕಿತ್ಸಾ ಪಟ್ಟಿಯಲ್ಲಿ ಇಲ್ಲದ ಆಸ್ಪತ್ರೆಗಳನ್ನು ಚಂಡಮಾರುತದ ಸಂತ್ರಸ್ತರ ಚಿಕಿತ್ಸೆಗೆ ಸಜ್ಜು ಮಾಡಿಕೊಳ್ಳಲಾಗಿದೆ.

* ತುರ್ತುಸ್ಥಿತಿಯನ್ನು ಎದುರಿಸುವ ಉದ್ದೇಶದಿಂದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಹಲವು ತುಕಡಿಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ.

* ಕೇಂದ್ರ ಸರ್ಕಾರವು ಕಳುಹಿಸಿರುವ ಎನ್‌ಡಿಆರ್‌ಎಫ್ ತಂಡಗಳನ್ನು, ಜನರನ್ನು ತೆರವು ಮಾಡಲು ನಿಯೋಜನೆ ಮಾಡಲಾಗಿದೆ.

* ಚಂಡಮಾರುತ ಪೀಡಿತ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಕಚ್ಚಾ ಮನೆಗಳಲ್ಲಿ ವಾಸವಿರುವವರನ್ನು ಈಗಾಗಲೇ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ.

* ಪಾಲ್ಘರ್‌‌ ಜಿಲ್ಲೆಯಲ್ಲಿರುವ ಅಣುವಿದ್ಯುತ್ ಸ್ಥಾವರಕ್ಕೆ ಹಾನಿಯಾಗದಂತೆ ಮತ್ತು ಒಂದೊಮ್ಮೆ ಹಾನಿಯಾದರೆ ಅದನ್ನು ನಿಯಂತ್ರಿಸಲು ತಜ್ಞರ ತಂಡವನ್ನು ನಿಯೋಜನೆ ಮಾಡಲಾಗಿದೆ.

* ಗುಜರಾತ್‌ನ ವಲಸಾಡ್ ಮತ್ತು ನವಸಾರಿ ಜಿಲ್ಲೆಗಳ ಕರಾವಳಿಯ 47 ಗ್ರಾಮಗಳ 20 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

30: ಎರಡೂ ರಾಜ್ಯಗಳಲ್ಲಿ ನಿಯೋಜನೆ ಮಾಡಲಾಗಿರುವ ಎನ್‌ಡಿಆರ್‌ಎಫ್ ತಂಡಗಳು

45 ಜನ: ಎನ್‌ಡಿಆರ್‌ಎಫ್‌ನ ಒಂದು ತಂಡದಲ್ಲಿ ಇರುವ ಸಿಬ್ಬಂದಿ ಸಂಖ್ಯೆ

16: ತಂಡಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗಿದೆ

10: ತಂಡಗಳನ್ನು ಮಹಾರಾಷ್ಟ್ರವು ಈಗಾಗಲೇ ನಿಯೋಜನೆ ಮಾಡಿದೆ

6: ತಂಡಗಳನ್ನು ಮಹಾರಾಷ್ಟ್ರವು ಸನ್ನದ್ಧವಾಗಿ ಇರಿಸಿಕೊಂಡಿದೆ

14: ತಂಡಗಳನ್ನು ಗುಜರಾತ್‌ಗೆ ಕಳುಹಿಸಲಾಗಿದೆ

9: ತಂಡಗಳನ್ನು ಗುಜರಾತ್ ಈಗಾಗಲೇ ನಿಯೋಜನೆ ಮಾಡಿದೆ

5: ತಂಡಗಳನ್ನು ಗುಜರಾತ್ ಸಜ್ಜಾಗಿ ಇರಿಸಿಕೊಂಡಿದೆ

2: ಹೆಚ್ಚುವರಿ ತಂಡಗಳನ್ನು ನಿಯೋಜನೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಗುಜರಾತ್ ಕೇಳಿಕೊಂಡಿದೆ.

ಚಂಡಮಾರುತದ ಪರಿಣಾಮ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗಿದೆ. ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ, ದಕ್ಷಿಣ ಕನ್ನಡ ಜಿಲ್ಲೆಯಕೆಲವೆಡೆ ಮತ್ತು ಕೊಡಗಿನಲ್ಲಿ ಭಾರಿ ಮಳೆಯಾಗಿದೆ.

ಕಲಬುರ್ಗಿ, ಬೀದರ್‌, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.ಉತ್ತರ ಕನ್ನಡ ಕರಾವಳಿಯಲ್ಲಿ ತಾಸಿಗೆ 60–70 ಕಿ.ಮೀ. ವೇಗದಲ್ಲಿಮಂಗಳವಾರ ಗಾಳಿ ಬೀಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿಯಲ್ಲಿ ಬುಧವಾರ ಇಷ್ಟೇ ವೇಗದಲ್ಲಿ ಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಕರಾವಳಿಯಲ್ಲಿ ಇನ್ನೂ 2–3 ದಿನ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT