ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ| ಹೆಸರು ಕೇಳಿ ಹಲ್ಲೆ ನಡೆಸಿದರು ದುಷ್ಕರ್ಮಿಗಳು

ಕ್ರೌರ್ಯಕ್ಕೆ ನಲುಗಿದ ಈಶಾನ್ಯ ದೆಹಲಿ...ರಸ್ತೆಗಳ ತುಂಬಾ ಇಟ್ಟಿಗೆ ರಾಶಿ...ಗಲಭೆ ಪೀಡಿತ ಪ್ರದೇಶ ತೊರೆದು ಊರಿನತ್ತ ಜನ
Last Updated 27 ಫೆಬ್ರುವರಿ 2020, 19:42 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಭಾನುವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ಹೊತ್ತಿ ಉರಿದಿರುವ ಈಶಾನ್ಯ ದೆಹಲಿಯಲ್ಲಿ ಗುರುವಾರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಗಲಭೆ ಮತ್ತೆ ಭುಗಿಲೇಳಬಹುದು ಎಂಬ ಭಯ ಮಾತ್ರ ಜನರಿಂದ ದೂರವಾಗಿಲ್ಲ.

ಸದಾ ಜನರು ಮತ್ತು ವಾಹನಗಳಿಂದ ಗಿಜಿಗುಡುತ್ತಿದ್ದ ಇಲ್ಲಿನ ರಸ್ತೆಗಳು ಬಿಕೋ ಎನ್ನುತ್ತಿವೆ. ಹಿಂಸಾಚಾರದಲ್ಲಿ ಉಭಯ ಕೋಮುಗಳ ಜನರು ಘಾಸಿಗೊಳಗಾಗಿದ್ದಾರೆ. ನೂರಾರು ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಗಂಭೀರವಾಗಿ ಗಾಯಗೊಂಡವರ ಸಂಬಂಧಿಗಳಲ್ಲಿ ಆತಂಕ ಮಡುಗಟ್ಟಿದೆ.

ಈಶಾನ್ಯ ದೆಹಲಿಯ ಚಾಂದ್‌ಬಾಗ್‌, ಶಿವಪುರಿ, ಮೌಜ್‌ಪುರ, ಜಾಫರಾಬಾದ್‌, ಭಜನ್‌ಪುರ್‌, ಗೋಕುಲ್‌ಪುರಿ, ಭಾಗೀರಥಿ ವಿಹಾರ್‌, ಬಾಬರ್‌ಪುರ, ಸೀಲಂಪುರ್‌, ಖಜೂರಿಖಾಸ್‌, ಶಿವ್‌ವಿಹಾರ್‌, ಮುಸ್ತಫಾಬಾದ್‌ ಮತ್ತಿತರ ಪ್ರದೇಶಗಳಲ್ಲಿ ಈಗಲೂ ಬೂದಿ ಮೆಚ್ಚಿದ ಕೆಂಡದಂತಹ ಸ್ಥಿತಿ ಇದೆ.

‘ಭಾನುವಾರ ಸಂಜೆ ಅಲ್ಲೆಲ್ಲೋ ಗಲಾಟೆ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಎದೆ ನಡುಗಿತ್ತು. ಸೋಮವಾರ ಮಧ್ಯಾಹ್ನ ಆ ಗಲಾಟೆ ನಮ್ಮಲ್ಲೇ ಶುರುವಾಯಿತು. ಅಂಗಡಿ ಮುಂದೆ ವ್ಯಾಪಾರಕ್ಕೆಂದು ಕುಂತಿದ್ದವರ ಮೇಲೆ ದಿಢೀರ್‌ ಬಂದ ಗುಂಪು ಕ್ರೌರ್ಯ ಮೆರೆಯಿತು. ಕೈಗೆ ಸಿಕ್ಕವರನ್ನು ಎಳೆದೆಳೆದು ಬಡಿದು ಪರಾರಿಯಾಯಿತು’ ಎಂದು ಚಾಂದ್‌ಬಾಗ್‌ನ ಮುಖ್ಯರಸ್ತೆಯಲ್ಲಿ ಹಣ್ಣಿನ ವ್ಯಾಪಾರ ನಡೆಸುವ ಯುವಕರ ತಂಡ ಅಳಲು ತೋಡಿಕೊಂಡಿತು.

‘ನೋಡನೋಡುತ್ತಿದ್ದಂತೆಯೇ ಕೆಲವರು ಕಲ್ಲು ಎಸೆದರು. ನಮ್ಮನ್ನು ಬಡಿಗೆಗಳಿಂದ ಬಡಿದರು. ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಮನೆಗಳ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆಯಲಾಯಿತು. ಹಲ್ಲೆಕೋರರು ಹೆಸರು ಕೇಳಿ ಬಡಿಯುತ್ತಿದ್ದರು. ಗಂಟೆಗಳ ನಂತರ ಪೊಲೀಸರು ಬಂದು ನಮ್ಮನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದು ಲೋಕನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರಬಂದಿರುವ ಕೆಲವರು ಹೇಳಿದರು.

ರಸ್ತೆಯಲ್ಲಿ ಇಟ್ಟಿಗೆಗಳ ರಾಶಿ: ದಾಳಿ ನಡೆಸುವ ವ್ಯವಸ್ಥಿತ ಯೋಜನೆಯೊಂದಿಗೆ ಬಂದವರು ತಳ್ಳು ಗಾಡಿಗಳಲ್ಲಿ ಇಟ್ಟಿಗೆ ತುಂಬಿಕೊಂಡು ಬಂದಿದ್ದರು. ಅವರು ಎಸೆದಿರುವ ಇಟ್ಟಿಗೆಗಳ ರಾಶಿ ಇಲ್ಲಿನ ಜಾಫರಾಬಾದ್‌, ಚಾಂದ್‌ಬಾಗ್‌ ಮತ್ತಿತರ ಪ್ರದೇಶಗಳ ಮುಖ್ಯರಸ್ತೆಗಳಲ್ಲಿ ಕಂಡುಬರುತ್ತಿವೆ.

ಊರಿಗೆ ಮರಳುತ್ತಿರುವ ಕಾರ್ಮಿಕರು: ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಅನೇಕ ಕಾರ್ಮಿಕರು ಗಲಭೆಪೀಡಿತ ಪ್ರದೇಶ ತೊರೆದು ತಮ್ಮ ಊರುಗಳತ್ತ ಮರಳುತ್ತಿದ್ದಾರೆ.

‘ನಾವಂತೂ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ, ಎನ್‌ಪಿಆರ್‌ಯ ಪರವೂ ಇಲ್ಲ. ವಿರೋಧವನ್ನೂ ವ್ಯಕ್ತಪಡಿಸಿಲ್ಲ. ಆದರೂ ನಾವಿರುವ ಪ್ರದೇಶದಲ್ಲಿ ಹಲವು ಗುಂಪುಗಳು ತೀವ್ರ ದಾಳಿ ನಡೆಸಿದವು’ ಎಂದು ಊರಿಗೆ ಮರಳುತ್ತಿರುವ ಬಡ ಜನರು ಗೋಳು ತೋಡಿಕೊಂಡರು.

*****

ಗಲಭೆಯ ಕುರಿತು ಸುಪ್ರಿಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು
ಮಾಯಾವತಿ, ಮುಖ್ಯಸ್ಥೆ ಬಿಎಸ್‌ಪಿ

ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ದೆಹಲಿಯಲ್ಲಿ ಶಾಂತಿ ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು
ಸುರೇಶ್‌ ಭಯ್ಯಾಜಿ ಜೋಷಿ, ಪ್ರಧಾನ ಕಾರ್ಯದರ್ಶಿ, ಆರ್‌ಎಸ್‌ಎಸ್‌

ಅಲ್ಪಸಂಖ್ಯಾತರ ಜೀವ ಹಾಗೂ ಆಸ್ತಿಗೆ ರಕ್ಷಣೆ ನೀಡುವಲ್ಲಿ ದೆಹಲಿ ಪೊಲೀಸರು ತೋರಿರುವ ನಿಷ್ಕ್ರಿಯತೆ 1984ರ ಸಿಖ್‌ ವಿರೋಧಿ ಗಲಭೆಯನ್ನು ನೆನಪಿಸಿದೆ
-ನರೇಶ್‌ ಗುಜ್ರಾಲ್‌ ಸಂಸದ, ಶಿರೋಮಣಿ ಅಕಾಲಿದಳ

******

‘3 ದಿನಗಳಾದರೂ ಅಂತ್ಯಸಂಸ್ಕಾರವಿಲ್ಲ’

ಹಿಂಸಾಚಾರದಲ್ಲಿ ಸಾವಿಗೀಡಾದವರ ಶವಗಳು ಈ ಪ್ರದೇಶದಲ್ಲಿರುವ ಗುರು ತೇಜ್‌ ಬಹದ್ದೂರ್‌ ಆಸ್ಪತ್ರೆಯ ಶವಾಗಾರದಲ್ಲಿವೆ. ಕೆಲವರು ಪ್ರಾಣ ಕಳೆದುಕೊಂಡು ಎರಡು, ಮೂರು ದಿನಗಳು ಕಳೆದಿದ್ದರೂ ಸಂಬಂಧಿಗಳಿಗೆ ಶವವನ್ನು ಹಸ್ತಾಂತರಿಸಲಾಗಿಲ್ಲ.‘ಮರಣೋತ್ತರ ಪರೀಕ್ಷೆ, ಗಲಭೆ ಪೀಡಿತ ಪ್ರದೇಶಗಳು ನಿಯಂತ್ರಣಕ್ಕೆ ಬಂದಿಲ್ಲ ಎಂಬ ಕಾರಣ ನೀಡಿ ಶವಗಳನ್ನು ನೀಡುತ್ತಿಲ್ಲ. ಈಗ ಪರಿಸ್ಥಿತಿ ಶಾಂತವಾಗಿದೆ. ಇಂದಾದರೂ ನಮ್ಮ ಸುಪರ್ದಿಗೆ ಶವಗಳನ್ನು ವಹಿಸಬಹುದು ಎಂಬ ನಿರೀಕ್ಷೆ ಇದೆ’ ಎಂದು ಆಪ್ತರೊಬ್ಬರನ್ನು ಕಳೆದುಕೊಂಡಿರುವ ಚಾಂದ್‌ಬಾಗ್‌ ನಿವಾಸಿಯೊಬ್ಬರು ತಿಳಿಸಿದರು.

**

ಬೆಂಕಿ:ಮನೆಯೊಳಗೆ ಸಿಲುಕಿ ವೃದ್ಧೆ ಸಾವು

ಈಶಾನ್ಯ ದೆಹಲಿಯಲ್ಲಿ ಗಲಭೆ ವೇಳೆ ಗುಂಪೊಂದು ಬೆಂಕಿ ಹಚ್ಚಿದ್ದ ಮನೆಯೊಳಗೆ ಸಿಲುಕಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಅಕ್ಬರಿ (85) ಮೃತಪಟ್ಟಿರುವ ಮಹಿಳೆ.

ಕಟ್ಟಡದಿಂದ ಹೊರ ಬರಲು ಸಾಧ್ಯವಾಗದೆ ಅಕ್ಬರಿ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅವರ ಕೈಗಳಿಗೆ ಸುಟ್ಟ ಗಾಯಗಳಾಗಿತ್ತು. ಸುಮಾರು10 ಗಂಟೆಗಳಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು
ಮೂಲಗಳು ತಿಳಿಸಿವೆ.

‘ಹಾಲು ತರಲೆಂದು ನಾನು ಹೊರ ಹೋಗಿದ್ದೆ. ಮರಳಿ ಬರುವಾಗ ಮಕ್ಕಳು ಕರೆ ಮಾಡಿ, 150ರಿಂದ 200 ಮಂದಿ ಮನೆಗೆ ನುಗ್ಗಿ ಬೆಂಕಿ ಹಚ್ಚಿರುವುದಾಗಿ ತಿಳಿಸಿದ್ದರು’ ಎಂದು ಅಕ್ಬರಿ ಅವರ ಮಗ ಮೊಹಮ್ಮದ್‌ ಸಯೀದ್‌ ಸಲ್ಮಾನಿ ತಿಳಿಸಿದ್ದಾರೆ.

****

ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ

ನವದೆಹಲಿ (ಪಿಟಿಐ): ಹಿಂಸೆಯಿಂದ ನಲುಗಿರುವ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 38ಕ್ಕೇರಿದೆ. ರಾಜಕೀಯ ನಾಯಕರ ಆರೋಪ–ಪ್ರತ್ಯಾರೋಪಗಳ ನಡುವೆಯೇ, ಮಾನವೀಯ ನೆಲೆಯಲ್ಲಿ, ಸಂತ್ರಸ್ತರಿಗೆ ನೆರವು ನೀಡುತ್ತಿರುವಂತಹ ಘಟನೆಗಳೂ ವರದಿಯಾಗಿವೆ.

ಪರಿಹಾರ: ಗಲಭೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ, ತೀವ್ರವಾಗಿ ಗಾಯಗೊಂಡಿರುವವರಿಗೆ ತಲಾ ₹ 2ಲಕ್ಷ ಪರಿಹಾರ ನೀಡುವುದಾಗಿ ಹಾಗೂ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಘೋಷಿಸಿದ್ದಾರೆ.ಹಿಂಸಾಚಾರದ ವೇಳೆ ದಾಖಲೆಗಳು ಸುಟ್ಟು ಹೋಗಿರುವವರಿಗೆ ದಾಖಲೆಗಳನ್ನು ನೀಡುವ ಸಲುವಾಗಿ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

ರಕ್ತದಾನ: ಗಾಯಾಳುಗಳನ್ನು ದಾಖಲಿಸಿರುವ ಜಿಟಿಬಿ ಆಸ್ಪತ್ರೆಯಲ್ಲಿ 34 ಸಿಆರ್‌ಪಿಎಫ್‌ ಯೋಧರು ರಕ್ತದಾನ ಮಾಡಿದ್ದಾರೆ.

ಮತ್ತೊಮ್ಮೆ ಪರೀಕ್ಷೆ: ಗಲಭೆಯ ಕಾರಣ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಮತ್ತೊಮ್ಮೆ ಪರೀಕ್ಷೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

****

ಗುರುದ್ವಾರಗಳಲ್ಲಿ ಆಶ್ರಯ

ಗಲಭೆಪೀಡಿತ ಪ್ರದೇಶಗಳಲ್ಲಿ ಮನೆ– ಮಠ ಕಳೆದುಕೊಂಡಿರುವ ಕುಟುಂಬಗಳಿಗೆ ಆಶ್ರಯಕ್ಕಾಗಿ ಇಲ್ಲಿನ ಗುರುದ್ವಾರಗಳು ಮುಕ್ತ ಆಹ್ವಾನ ನೀಡಿವೆ.

‘ನಿಮ್ಮ ಕಷ್ಟದಲ್ಲಿ ನಾವೂ ಭಾಗಿಯಾಗುತ್ತೇವೆ. ಗಲಭೆ ಪಿಡಿತ ಪ್ರದೇಶಗಳಲ್ಲಿ ಆದಷ್ಟು ಬೇಗ ಶಾಂತಿ ನೆಲೆಗೊಳ್ಳಲಿ. ಯಾವುದೇ ಧರ್ಮ, ವರ್ಣ, ಜಾತಿಯವರಿರಲಿ ಎಲ್ಲರೂ ಗುರುದ್ವಾರ ಗಳಿಗೆ ಬಂದು ಆಶ್ರಯ ಪಡೆದುಕೊಳ್ಳಿ’ ಎಂದು ದೆಹಲಿ ಸಿಖ್‌ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಂಜಿಂದರ್‌ ಸಿಂಗ್‌ ಸಿರ್ಸಾ ಹಾಗೂ ಗುರುದ್ವಾರ ಬಂಗ್ಲಾ ಸಾಹಿಬ್‌ ಅಧ್ಯಕ್ಷ ಪರಮ್‌ಜಿತ್‌ ಸಿಂಗ್‌ ಚಂಡೋಕ್‌ ಆಹ್ವಾನ ನೀಡಿದ್ದಾರೆ.

***

ಸಮಾಜಮುಖಿ ನ್ಯಾಯಮೂರ್ತಿಮುರಳೀಧರ್

ನವದೆಹಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರನ್ನು ಬುಧವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ, ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌.ಮುರಳೀಧರ್ ಅವರು ನಾಗರಿಕ ಹಕ್ಕುಗಳ ಪರ ನ್ಯಾಯಮೂರ್ತಿ ಎಂದೇ ಖ್ಯಾತರು. ನಾಗರಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳ ಪರವಾಗಿ ತೀರ್ಪು ನೀಡಲು ಅವರು ಎಂದೂ ಹಿಂದೇಟು ಹಾಕಿದ್ದೇ ಇಲ್ಲ.

ದೆಹಲಿ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಲ್ಲಿ ಮೂರನೆಯವರಾದ ಮುರಳೀಧರ್ ಅವರು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗವಾಗಿದ್ದಾರೆ. ಕೆಲವೇ ತಿಂಗಳಲ್ಲಿ ಆ ಹೈಕೋರ್ಟ್‌ನ ಮುಖ್ಯ
ನ್ಯಾಯಮೂರ್ತಿ ಆಗಲಿದ್ದಾರೆ.

ಈ ಹಿಂದೆ, ಅವರು ಹಲವು ಪ್ರಕರಣಗಳಲ್ಲಿ ನೀಡಿದ್ದ ತೀರ್ಪುಗಳು ಮಹತ್ವದ್ದಾಗಿವೆ. ನಾಜ್‌ ಫೌಂಡೇಶನ್ ಪ್ರಕರಣದಲ್ಲಿ, ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸಿದ್ದರು. 1986ರಲ್ಲಿ ಮೀರಠ್‌ನಲ್ಲಿ 42 ಜನರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶ ಸಶಸ್ತ್ರ ಪೊಲೀಸ್ ಪಡೆಯ 16 ಸಿಬ್ಬಂದಿಗೆ ಶಿಕ್ಷೆ ವಿಧಿಸಿದ್ದರು. 1984ರ ಸಿಖ್ಖರ ಹತ್ಯಾಕಾಂಡ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ಸಜ್ಜನ್ ಕುಮಾರ್‌ ಅವರು ತಪ್ಪಿತಸ್ಥರೆಂದು ತೀರ್ಪು ನೀಡಿದ್ದರು.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಂಧಿಸಿದಂತೆ ಎಲ್ಗಾರ್ ಪರಿಷದ್‌ ಪ್ರಕರಣದಲ್ಲಿ ನಾಗರಿಕ ಹೋರಾಟಗಾರ ಗೌತಮ್ ನವಲಖಾ ಅವರ ವಿರುದ್ಧ ಹೊರಡಿಸಲಾಗಿದ್ದ ವಾರಂಟ್‌ಗೆ ತಡೆ ನೀಡಿದ್ದರು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳೂ ತಮ್ಮ ಆಸ್ತಿ ವಿವರ ಬಹಿರಂಗಪಡಿಸಬೇಕು ಎಂಬ ತೀರ್ಪು ನೀಡಿದ್ದ ಪೀಠದಲ್ಲಿ ಮುರಳೀಧರ್ ಇದ್ದರು.

ತಮಿಳುನಾಡಿನವರಾದ ನ್ಯಾಯಮೂರ್ತಿ ಮುರಳೀಧರ್ ಅವರು, 1984ರಲ್ಲಿ ಚೆನ್ನೈನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು. ನಂತರದ ಮೂರೇ ವರ್ಷಗಳಲ್ಲಿ ದೆಹಲಿಗೆ ತಮ್ಮ ಕಾರ್ಯಸ್ಥಾನ ಬದಲಿಸಿದ್ದರು. ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಪರ ವಕಾಲತ್ತು ವಹಿಸಿದ್ದರು. ಭೋಪಾಲ್ ಅನಿಲ ದುರಂತದ ಸಂತ್ರಸ್ತರು ಮತ್ತು ನರ್ಮದಾ ಅಣೆಕಟ್ಟಿ ನಿಂದ ನಿರಾಶ್ರಿತರಾದವರ ಪರ ಉಚಿತವಾಗಿ ವಾದ ಮಂಡಿಸಿದ್ದರು. 2006ರಲ್ಲಿ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾದರು. ಆಧಾರ್ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದ ಸಾಮಾಜಿಕ ಕಾರ್ಯಕರ್ತೆ ಉಷಾ ರಾಮನಾಥನ್ ಅವರು ಮುರಳೀಧರ್ ಅವರ ಪತ್ನಿ.

ನ್ಯಾಯಮೂರ್ತಿ ಮುರಳೀಧರ್ ಅವರನ್ನು ಪಂಜಾಬ್–ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ ಬೆನ್ನಲ್ಲೇ, ದೆಹಲಿ ಹೈಕೋರ್ಟ್‌ ವಕೀಲರ ಸಂಘಟನೆ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ವಕೀಲರು ದಿನದಮಟ್ಟಿಗೆ ಕೆಲಸವನ್ನು ಬಹಿಷ್ಕರಿಸಿದ್ದಾರೆ.

***

‘ಶಾ ರಾಜೀನಾಮೆ ಪಡೆಯಲು ಆಗ್ರಹ’

ನವದೆಹಲಿ (ಪಿಟಿಐ): ‘ದೆಹಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆ ಪಡೆಯಬೇಕು’ ಎಂದು ಕಾಂಗ್ರೆಸ್‌ ನಿಯೋಗ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಒತ್ತಾಯಿಸಿದೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿಯಾದ ನಿಯೋಗ, ‘ಕೇಂದ್ರ ಸರ್ಕಾರಕ್ಕೆ ರಾಜ ಧರ್ಮ ಪಾಲಿಸುವಂತೆ ಸೂಚಿಸಬೇಕು’ ಎಂದು ಕೋರಿತು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮಾತನಾಡಿ, ‘ಹಿಂಸಾಚಾರ ನಿಯಂತ್ರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಯಿತು’ ಎಂದರು.

ತಾಹಿರ್‌ ಹುಸೇನ್‌ ವಿರುದ್ಧ ಎಫ್‌ಐಆರ್‌: ಗುಪ್ತಚರ ವಿಭಾಗದ (ಐಬಿ) ಅಧಿಕಾರಿ ಅಂಕಿತ್‌ ಶರ್ಮಾ ಅವರ ಹತ್ಯೆಗೆ ಸಂಬಂಧಿಸಿ ಎಎಪಿಯ ಕೌನ್ಸಿಲರ್‌ ತಾಹಿರ್‌ ಹುಸೇನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹತ್ಯೆಯ ಹಿಂದೆ ತಾಹಿರ್‌ ಕೈವಾಡ ಇದೆ ಎಂದು ಅಂಕಿತ್‌ ಅವರ ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದಾರೆ. ತಾಹಿರ್‌ ಮಾಲೀಕತ್ವದ ಕಟ್ಟಡದ ತಾರಸಿಯಿಂದ ಕಲ್ಲು ಮತ್ತು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಸ್ಥಳೀಯರೂ ಹೇಳಿದ್ದಾರೆ.

ವಿಶ್ವಸಂಸ್ಥೆ ಖಂಡನೆ

ವಿಶ್ವಸಂಸ್ಥೆ (ಪಿಟಿಐ): ದೆಹಲಿಯಲ್ಲಿ ನಡೆದಿರುವ ಸಾವು–ನೋವುಗಳ ಕುರಿತು ವಿಶ್ವಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್‌) ತೀವ್ರವಾಗಿ ಖಂಡಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌, ಹಿಂಸಾಚಾರ ಹತ್ತಿಕ್ಕಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ’ ಎಂದು ಅವರ ವಕ್ತಾರ ಸ್ಟೀಫನ್‌ ದುಜಾರ್ರಿಕ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT