ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಾಮುದ್ದೀನ್ ಮಸೀದಿಯಲ್ಲಿದ್ದರು ಕರ್ನಾಟಕದ 45 ಜನ: ಈಗಾಗಲೇ ಶಿರಾದ ವ್ಯಕ್ತಿ ಸಾವು

ಕೋವಿಡ್‌–19 ಆತಂಕ
Last Updated 31 ಮಾರ್ಚ್ 2020, 10:07 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿಯ ನಿಜಾಮುದ್ದೀನ್‌ ಜಮಾಅತ್‌ ಮಸೀದಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದವರ ಪೈಕಿ ಕೊರೊನಾ ವೈರಸ್‌ ಸೋಂಕಿನಿಂದಾಗಿ ಈಗಾಗಲೇ 7 ಮಂದಿ ಸಾವಿಗೀಡಾಗಿದ್ದು, ಕನಿಷ್ಠ 24 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಮಾರ್ಚ್‌ 10ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿದ್ದರು ಎಂಬ ಅಂಶ ಇದೀಗ ಬಹಿರಂಗ ಗೊಂಡಿದೆ.

ಮರ್ಕಜ್ ನಿಜಾಮುದ್ದೀನ್‌ ಮಸೀದೆಯಲ್ಲಿ ಭಾಗಿಯಾಗಿದ್ದವರ ಪೈಕಿ ಅನೇಕರು ಕರ್ನಾಟಕ, ತೆಲಂಗಾಣ, ಒಡಿಶಾ ಹಾಗೂ ಬಿಹಾರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಂಚರಿಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿತ್ತು. ಆದರೆ, ಕರ್ನಾಟಕದಿಂದಲೇ ಸುಮಾರು 45 ಮಂದಿ ಭಾಗಿಯಾಗಿದ್ದಾರೆ ಎಂಬುದು ಆರೋಗ್ಯ ಸಚಿವ ಶ್ರೀರಾಮುಲು ಅವರ ಟ್ವೀಟ್‌ನಿಂದ ತಿಳಿದು ಬಂದಿದೆ.

ಕೊರೊನಾ ಸೋಂಕಿನಿಂದ ಮಾರ್ಚ್‌ 27ರಂದು ಶಿರಾ ನಗರದಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ಅವರೂ ಸಹ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ತುಮಕೂರು ಹಾಗೂ ತಿಪಟೂರಿನಿಂದ ಒಟ್ಟು 13 ಮಂದಿ ಕಾರ್ಯಕ್ರಮಕ್ಕೆ ತೆರಳಿದ್ದರು.

'ಪ್ರಾರ್ಥನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಹಾಗಾಗಿ ಇವರನ್ನು ಪತ್ತೆ ಮಾಡಿ, ಕ್ವಾರಂಟೈನ್‌ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಇವರಲ್ಲಿ ಈಗಾಗಲೇ 13 ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ನಿಗಾವಹಿಸಲಾಗಿದೆ' ಎಂದು ಶ್ರೀರಾಮುಲು ತಿಳಿಸಿದ್ದಾರೆ.

'ಅಲ್ಲಿನ ಧಾರ್ಮಿಕ ಸಭೆಗೆ ಆಸ್ಟ್ರೇಲಿಯಾ, ಸಿಂಗಪೂರ್‌, ದುಬೈ, ಸೌದಿ ಅರೇಬಿಯಾ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ. ಉಳಿದ ವ್ಯಕ್ತಿಗಳನ್ನು ಆದಷ್ಟು ಬೇಗ ಗುರುತಿಸಿ, ಅವರನ್ನು ಕ್ವಾರಂಟೈನ್‌ ಮಾಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

13 ಮಂದಿ ಆಸ್ಪತ್ರೆಯಲ್ಲಿ

ತುಮಕೂರಿನ 11 ಮಂದಿ ಹಾಗೂ ತಿ‍ಪಟೂರಿನ ಇಬ್ಬರು ನವದೆಹಲಿಯ ಜಾಮಿಯಾ ಮಸೀದಿ ಆಯೋಜಿಸಿದ್ದ ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಶಿರಾ ನಗರದಲ್ಲಿ ಮಾರ್ಚ್‌ 27ರಂದು ಒಬ್ಬರು ಸಾವಿಗೀಡಾಗಿದ್ದು, ಉಳಿದ 13ಜನರು ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿದೆ.

ಶಿರಾದ ವ್ಯಕ್ತಿ ಸಾವಿಗೂ ಮುನ್ನ ಎಲ್ಲೆಲ್ಲಿ ಸಂಚರಿಸಿದ್ದರು?

* ಮಾರ್ಚ್ 5ರಂದು ಮಧ್ಯಾಹ್ನ 2.30ಕ್ಕೆ ತುಮಕೂರಿನಿಂದ ಸಂಪರ್ಕ ಕ್ರಾಂತಿ ರೈಲಿನ ಎಸ್‌–6 ಬೋಗಿಯಲ್ಲಿ ನವದೆಹಲಿಗೆ ಪ್ರಯಾಣ.

* ಮಾರ್ಚ್ 7ರಿಂದ 11ರ ವರೆಗೆ ಮಸೀದಿಯಲ್ಲೇ ವಾಸ್ತವ್ಯ

* 11ರಂದು ಬೆಳಿಗ್ಗೆ 9ಕ್ಕೆ ನವದೆಹಲಿಯಿಂದ ಕೊಂಗು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊರಟು 14ರಂದು ಯಶವಂತಪುರ ತಲುಪಿದ್ದಾರೆ. ರೈಲಿನ ಎಸ್‌–19 ಬೋಗಿಯಲ್ಲಿ ಇವರು ಇದ್ದರು.

* 14ರಂದು ರಾತ್ರಿ 12.30ಕ್ಕೆ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಶಿರಾ ತಲುಪಿದ್ದಾರೆ. ಕೆಲ ದಿನ ಮನೆಯಲ್ಲೇ ತಂಗಿದ್ದಾರೆ.

* 18ರಂದು ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದೆ. 21ರ ವರೆಗೆ ಶಿರಾದ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ.

* 23ರಂದು ಹೊರರೋಗಿಯಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು.

* 24ರಂದು ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ. ಗಂಟಲು ದ್ರವ ಮತ್ತು ಕಫ, ರಕ್ತದ ಮಾದರಿ ಪರೀಕ್ಷೆ.

* 26ರಂದು ರಾತ್ರಿ ಬಂದ ವರದಿ.

* ಮಾರ್ಚ್ 27ರಂದು ಬೆಳಿಗ್ಗೆ ಸಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT