ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆದಾಡುವ ದೇವರಿಗೆ ಒಲಿಯದ ‘ರತ್ನ’: ಆಕ್ರೋಶ

Last Updated 26 ಜನವರಿ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ನೀಡದಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬುದಾಗಿ ಪಕ್ಷಾತೀತವಾಗಿ ಆಗ್ರಹ ಕೇಳಿ ಬಂದಿತ್ತು. ಕೇಂದ್ರ ಸ್ಪಂದಿಸದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು, ಖಂಡನೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಎಂ.ಬಿ.ಪಾಟೀಲ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಮುಂತಾದವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

‘ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗದೇ ಇರುವುದು ನಿರಾಸೆ ತಂದಿದೆ. ಯಾವ ಕಾರಣಕ್ಕೆ ಪ್ರಶಸ್ತಿ ಕೊಟ್ಟಿಲ್ಲ ಎಂಬು
ದನ್ನು ಬಿಜೆಪಿಯವರೇ ಹೇಳಬೇಕು’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಸಿದ್ದರಾಮಯ್ಯ ಕಟು ಟೀಕೆ: ‘ಶ್ರೀಗಳ ಪಾರ್ಥೀವ ಶರೀರದ ಮುಂದೆ ದಿನವಿಡಿ ಕುಳಿತಿದ್ದು ಗೌರವ ಅಲ್ಲ. ಕೇಂದ್ರದ ಮೇಲೆ ಒತ್ತಡ ತರಬೇಕಿತ್ತು. ಶ್ರೀಗಳ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಕೊಟ್ಟಿದ್ದರೆ ಗೌರವ ನೀಡಿದಂತಾಗುತ್ತಿತ್ತು ಅಲ್ಲವೇ’ ಎಂದು ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

‘ಸಿದ್ದಗಂಗಾ ಶ್ರೀಗಳ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ರತ್ನ ಕೊಡಬೇಕಿತ್ತು. ಅದರಿಂದ ಭಾರತ ರತ್ನದ ಘನತೆ ಹೆಚ್ಚುತ್ತಿತ್ತು. ನಾನು ಅಧಿಕಾರದಲ್ಲಿ ಇದ್ದಾಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ಕೊಟ್ಟಿಲ್ಲವೊ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಆರೆಸ್ಸೆಸ್‌ನವರಿಗೆ ಪ್ರಶಸ್ತಿ: ಮೋದಿ ಸರ್ಕಾರ ದಾಸೋಹ ಮಾಡಿದ ಶ್ರೀಗಳಿಗೆ ಭಾರತ ರತ್ನ ನೀಡದೇ ಗಾಯಕ
ರಿಗೆ, ಆರ್‌ಎಸ್‌ಎಸ್‌ನವರಿಗೆ ನೀಡಿದ್ದಾರೆ. ತಮಗೆ ಬೇಕಾದ ಕೆಲವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿದ್ದಾರೆ ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡದೇ ಇರುವುದು ನೋವಿನ ಸಂಗತಿ. ಆದರೆ, ಎನ್‌ಡಿಎ ಸರ್ಕಾರ ಯಾವುದನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಖರ್ಗೆ ತಿಳಿಸಿದರು.

ಭಾರತ ರತ್ನ ಅಪಮೌಲ್ಯ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದೇ ಪ್ರಶಸ್ತಿಯನ್ನು ಅಪಮೌಲ್ಯಗೊಳಿಸಲಾಗಿದೆ. ಕೇಂದ್ರ ಸರ್ಕಾರ ಈ ಮೂಲಕ ಕರ್ನಾಟಕದ ಬಗ್ಗೆ ಅಸಡ್ಡೆ ತೋರಿದೆ ಎಂದು ಗೃಹಸಚಿವ ಎಂ.ಬಿ.ಪಾಟೀಲ ಕಿಡಿಕಾರಿದ್ದಾರೆ.

ಶ್ರೀಗಳು ಸ್ವಾತಂತ್ರ್ಯಪೂರ್ವದಿಂದಲೂ ಸರ್ಕಾರ ಮಾಡಲಾಗದ ಕೆಲಸವನ್ನು ತಮ್ಮ ಸೇವಾ ಸಂಸ್ಥೆಗಳ ಮೂಲಕ ಮಾಡುತ್ತಾ ಬಂದಿದ್ದಾರೆ. ಈ ಭಾಗದಲ್ಲಿ ಅಕ್ಷರದ ಜಾಗೃತಿಯನ್ನು ಮೂಡಿಸಿದ ಅವರು, ಲಕ್ಷಾಂತರ ಬಡ ಶಾಲಾ ಮಕ್ಕಳಿಗೆ ಆಶ್ರಯ ನೀಡಿದ ಪರಮಪೂಜ್ಯರ ಸೇವೆಯನ್ನು ಅವಮಾನಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪಾಟೀಲ ಹೇಳಿದ್ದಾರೆ.

ಶ್ರೀಗಳಿಗೆ ಭಾರತ ರತ್ನ ನೀಡದೇ ಇರುವುದರಿಂದ ಇಡೀ ನಾಡಿಗೇ ದಿಗಿಲಾಗಿದೆ. ಪದ್ಮವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಶ್ರೀಗಳಿಗೆ ಕೇಂದ್ರ ಸರ್ಕಾರವೇ ಸ್ವಯಂಪ್ರೇರಿತವಾಗಿ ಭಾರತ ರತ್ನ ನೀಡಬೇಕಿತ್ತು. 90 ವರ್ಷ ಕಾಲ ಶಾಲಾ ಮಕ್ಕಳಿಗೆ ಅಕ್ಷರ, ಅನ್ನ, ಆಶ್ರಯವನ್ನು ನೀಡಿದ್ದು, ಈ ಮೂಲಕ ಸೇವೆ ಎಂಬ ಅಕ್ಷರಗಳಿಗೆ ಹೊಸ ಅರ್ಥ ನೀಡಿದ್ದರು ಎಂದು ಹೇಳಿದ್ದಾರೆ.

ಬಿಜೆಪಿ ಹೋರಾಟ ಮಾಡಿದ್ದರೆ ಸಿಗುತ್ತಿತ್ತು: ‘ಸಿದ್ದಗಂಗಾ ಶ್ರೀಗಳಿಗೆ ಅಗೌರವ ತೋರಿಸಿದ್ದೇನೆ ಎಂದು ರಾಜ್ಯ ಬಿಜೆಪಿಯವರು ನನ್ನ ವಿರುದ್ಧ ಹೋರಾಟ ಮಾಡಿದ್ದರು. ಆದರೆ, ಅದರ ಅರ್ಧದಷ್ಟು ಒತ್ತಡವನ್ನು ಕೇಂದ್ರದ ಮೇಲೆ ತಂದಿದ್ದರೆ, ಶ್ರೀಗಳಿಗೆ ಭಾರತ ರತ್ನ ಸಿಗುತ್ತಿತ್ತು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಚಿವ ಸತೀಶ್‌ ಜಾರಕಿಹೊಳಿ ಅವರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮದ್ಯ ನಿಷೇಧವೇ ನಿಜವಾದ ಭಾರತ ರತ್ನ’

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಿದರೆ ಅದೇ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ನೀಡುವ ನಿಜವಾದ ‘ಭಾರತ ರತ್ನ’ ಎಂದು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಿದ್ಧಗಂಗಾ ಶ್ರೀಗಳೇ ಒಂದು ಅಮೂಲ್ಯ ರತ್ನವಿದ್ದಂತೆ; ಅಂತಹ ರತ್ನಕ್ಕೆ ಮತ್ತೆ ಯಾವ ರತ್ನ ಕೊಡುವ ಅಗತ್ಯವಿಲ್ಲ. ಸಮಾಜದ ಪ್ರತಿಯೊಬ್ಬರೂ ರತ್ನಗಳಂತಾಗಬೇಕು ಎಂಬುದೇ ಶ್ರೀಗಳ ಆಶಯವಾಗಿತ್ತು. ಅದರಂತೆ ಸರ್ಕಾರಗಳು ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೆ ತರುವುದೇ ಸರ್ಕಾರ ಅವರಿಗೆ ಕೊಡುವ ದೊಡ್ಡ ಗೌರವ’ ಎಂದು ಹೇಳಿದರು.

ಆರ್‌ಎಸ್‌ಎಸ್ ಬೆಂಬಲಿಸುವವರಿಗೆಭಾರತ ರತ್ನ

ಕೂಡಲಸಂಗಮ: ‘ಆರ್‌ಎಸ್‌ಎಸ್ ಬೆಂಬಲಿಸುವವರಿಗೆ ಈ ಬಾರಿ ಕೇಂದ್ರ ಸರ್ಕಾರ ‘ಭಾರತ ರತ್ನ’ ಘೋಷಿಸಿದೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಆರೋಪಿಸಿದ್ದಾರೆ.

‘ಆರ್‌ಎಸ್ಎಸ್ ಓಲೈಸುವವರಿಗೆ ‘ಭಾರತ ರತ್ನ‘ ಗೌರವ ನೀಡಲಾಗಿದೆ. ಆದರೆ, ಜೀವನ ಪರ್ಯಂತಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಅನ್ನ,ಅಕ್ಷರ, ಸಂಸ್ಕಾರ ನೀಡುವ ಮೂಲಕ ಸಾವಿರಾರು ಜನರ ಬದುಕು ರೂಪಿಸಿರುವ ಸಿದ್ಧಗಂಗಾ ಶ್ರೀಗಳನ್ನು ಕಡೆಗಣಿಸಲಾಗಿದೆ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

‘ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಿ ಎಂದಾಗ ಅದಕ್ಕೂ ಗಮನ ಕೊಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ಯಡಿಯೂರಪ್ಪ ಅವರು ತಮ್ಮ ಧರ್ಮದ ಬಗ್ಗೆ ಅಭಿಮಾನ ಇಟ್ಟುಕೊಳ್ಳದೇ, ತಮ್ಮ ಧರ್ಮದ ಅಸ್ತಿತ್ವ, ಅಸ್ಮಿತೆ ಕಂಡುಕೊಳ್ಳದೇ ಬಿಜೆಪಿಯ ಗುಲಾಮನಂತೆ ವರ್ತಿಸುತ್ತಿದ್ದಾರೆ. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದಿದ್ದಾರೆ.

‘ಬಸವಣ್ಣನ ತತ್ವಗಳಿಗೂ ಬಿಜೆಪಿಯ ಸಿದ್ಧಾಂತಕ್ಕೂಯಾವುದೇ ಹೋಲಿಕೆ ಇಲ್ಲ. ಆದ್ದರಿಂದ ಅವರು ಬಿಜೆಪಿ ಬಿಟ್ಟು ಹೊರಬರುವ ಸಾಹಸ ಮಾಡಬೇಕು. ಅಧಿಕಾರ, ಟಿಕೆಟ್ ಆಸೆಗೆ ತಮ್ಮ ಧರ್ಮವನ್ನು ಮರೆಯುತ್ತಿರುವ ಕರ್ನಾಟಕದ ಸಂಸದರೂ ಆತ್ಮ ನಿರೀಕ್ಷಣೆ ಮಾಡಿಕೊಳ್ಳುವ ಅಗತ್ಯ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ವೈದಿಕ ಧರ್ಮದ ಗುಲಾಮಗಿರಿಯಲ್ಲಿ ನಾವು ಇರಲು ಬಯಸುವುದಿಲ್ಲ. ಬಸವಣ್ಣ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದರೂ ಅಲ್ಲಿ ತುಂಬಿದ ಶೋಷಣೆ, ವರ್ಣ, ವರ್ಗ, ಜಾತಿ ಹಾಗೂ ಲಿಂಗ ಭೇದ ಪ್ರತಿಭಟಿಸಿ ಹೊರಬಂದರು. ಅವರ ಅನುಯಾಯಿಗಳಾದ ನಾವೂ ಪ್ರಜ್ಞಾವಂತರಾಗಿ ಬದುಕುವುದು ಅಗತ್ಯ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT