ಯಾದಗಿರಿ ಕೊಲೆ ಪ್ರಕರಣ: ನಾಲ್ವರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್‌

7
ಮರಣ ದಂಡನೆ ಶಿಕ್ಷೆ: ತ್ವರಿತ ವಿಚಾರಣೆಗೆ ಸೂಚನೆ

ಯಾದಗಿರಿ ಕೊಲೆ ಪ್ರಕರಣ: ನಾಲ್ವರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್‌

Published:
Updated:

ನವದೆಹಲಿ: ಕೊಲೆ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ ನಾಲ್ವರಿಗೆ ಜಾಮೀನು ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಮೇಲ್ಮನವಿಯ ತ್ವರಿತ ವಿಚಾರಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದೆ.

ಯಾದಗಿರಿ ಜಿಲ್ಲೆಯಲ್ಲಿ 9 ವರ್ಷಗಳ ಹಿಂದೆ ನಡೆದಿದ್ದ ಮೂವರ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಈ ನಾಲ್ವರಿಗೆ ಅಧೀನ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿತ್ತು. 2016ರಲ್ಲಿ ಹೈಕೋರ್ಟ್‌ ಈ ಆದೇಶ ಎತ್ತಿ ಹಿಡಿದಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ನಾಲ್ವರು ಜಾಮೀನು ಕೋರಿದ್ದರು.

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಬಾಕಿ ಇರುವುದರಿಂದ ಜಾಮೀನು ನೀಡಲಾಗದು ಎಂದು ನ್ಯಾಯಮೂರ್ತಿ ಯು.ಯು. ಲಲಿತ್‌ ಹಾಗೂ ಎಂ.ಆರ್‌. ಶಾ ನೇತೃತ್ವದ ಪೀಠ ಮಂಗಳವಾರ ಅಭಿಪ್ರಾಯಪಟ್ಟಿತು.

ಮೇಲ್ಮನವಿಯ ತ್ವರಿತ ವಿಚಾರಣೆ ಕುರಿತು ಮುಖ್ಯ ನ್ಯಾಯಮೂರ್ತಿಯವರ ಗಮನಕ್ಕೆ ತರುವಂತೆ ಪೀಠವು ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿತು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಬಸವರಾಜ ಪುಲ್ಲೆಪ್ಪ ಚಿಗರಿಕಾರ, ಪಲ್ಯಾ ಶಂಕರಪ್ಪ ಚಿಗರಿಕಾರ, ಯಂಕಪ್ಪ ಹುಲ್ಲೆಪ್ಪ ಚಿಗರಿಕಾರ ಹಾಗೂ ರಮೇಶ ಚಿಗರಿಕಾರ ಅವರೇ ಮರಣ ದಂಡನೆಗೆ ಗುರಿಯಾದವರು.

ಇವರೆಲ್ಲ 2009ರ ಫೆಬ್ರುವರಿ 14ರಂದು ಯಾದಗಿರಿ ಜಿಲ್ಲೆಯ ಸೈದಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಗೊಂಡಾಡಗಿ ಗ್ರಾಮದ ಹೊರ ವಲಯದಲ್ಲಿರುವ ತೋಟದ ಮನೆಯೊಂದರ ಮೇಲೆ ದಾಳಿ ಮಾಡಿ, ಬಸವರಾಜಪ್ಪ ಗೌಡ, ಶ್ರೀನಿವಾಸ ಮತ್ತು ಶ್ರೀನಿವಾಸ ರೆಡ್ಡಿ ಅವರನ್ನು ಕೊಲೆ ಮಾಡಿ ಶವಗಳನ್ನು ಸುಟ್ಟು ಹಾಕಿದ್ದರು.

ಇದೇ ವೇಳೆ, ಅವರು ಮನೆಯಲ್ಲಿದ್ದ ಸೂರ್ಯಕಾಂತಮ್ಮ ಅವರನ್ನು ಚಾಕುವಿನಿಂದ ಇರಿದು ಚಿನ್ನಾಭರಣ ಮತ್ತು ನಗದು ಕದ್ದು ಪರಾರಿಯಾಗಿದ್ದರು. ಘಟನೆಯಲ್ಲಿ ಬದುಕುಳಿದಿದ್ದ ಸೂರ್ಯಕಾಂತಮ್ಮ ಅವರು ನೀಡಿರುವ ಸಾಕ್ಷ್ಯದ ಆಧಾರದಲ್ಲಿ ಶಿಕ್ಷೆ ವಿಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !