ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ: ಕಿರಿಯರು, ಹಿರಿಯರ ನಡುವೆ ಮುನಿಸು, ತಾಕಲಾಟ

ರಾಹುಲ್ ಮನವೊಲಿಕೆಗೆ ಯತ್ನ
Last Updated 29 ಜೂನ್ 2019, 4:14 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷದಲ್ಲಿ ಕಿರಿಯರು-ಹಿರಿಯರ ಮುಸುಕಿನ ಗುದ್ದಾಟ ಮುಂದುವರಿದಿದೆ. ಪಕ್ಷದ ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ಕೆಳಗಿಳಿದ ನಂತರ ಆರಂಭಗೊಂಡಿದ್ದ ಈ ಸಂಘರ್ಷ ಶುಕ್ರವಾರ ಸಾಲುಸಾಲು ರಾಜೀನಾಮೆಗಳ ಮೂಲಕ ಮುಂದುವರಿಯಿತು. ರಾಹುಲ್ ಅವರಿಗೆ ಬೆಂಬಲ ಸೂಚಿಸಿ ಪಕ್ಷದ ನೂರಾರು ಯುವ ನಾಯಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ಮೂಲಕ ಹಿರಿಯರ ಮೇಲೆ ಒತ್ತಡ ಹೇರಲು ಯತ್ನಿಸಿದ್ದಾರೆ. ಬಹುತೇಕ ಯುವ ನಾಯಕರು 'ರಾಹುಲ್ ಗಾಂಧಿಯೇ ಪಕ್ಷವನ್ನು ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜೀನಾಮೆ ನೀಡಿದವರಲ್ಲಿ ಎಐಸಿಸಿಯ ಓರ್ವ ಪ್ರಧಾನ ಕಾರ್ಯದರ್ಶಿ ಮತ್ತು ಓರ್ವ ರಾಜ್ಯ ಘಟಕದ ಅಧ್ಯಕ್ಷರು ಇರುವುದು ಗಮನಾರ್ಹ ಸಂಗತಿ.ಕಾಂಗ್ರೆಸ್‌ನ ಮಧ್ಯಪ್ರದೇಶ ಘಟಕದ ಉಸ್ತುವಾರಿಯೂ ಆಗಿರುವ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ಮತ್ತು ಗೋವಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಿರೀಶ್ ಚೊಡನ್‌ಕರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಪ್ರಮುಖರು.

ಶುಕ್ರವಾರ ಎಐಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ 300ಕ್ಕೂ ಹೆಚ್ಚು ಯುವ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ನಂತರ ಬಬಾರಿಯಾ ಮತ್ತು ಚೊಡನ್‌ಕರ್‌ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ರಾಹುಲ್ ಪರವಾಗಿ ಈ ಮಟ್ಟಿಗಿನ ಬೆಂಬಲ ವ್ಯಕ್ತವಾಗಿರುವುದು ಇದೇ ಮೊದಲು.

ಆದರೆ ರಾಹುಲ್ ಯೋಚಿಸಿರುವ ರೀತಿಯಲ್ಲಿ ಪಕ್ಷದಸುಧಾರಣೆಗೆ ಈ ಕ್ರಮ ಏನೇನೂ ಸಾಲದು ಎಂದು 'ಹಿಂದೂಸ್ತಾನ್ ಟೈಮ್ಸ್‌' ವರದಿ ತಿಳಿಸಿದೆ.'ಎಐಸಿಸಿಯ 70 ಕಾರ್ಯದರ್ಶಿಗಳ ಪೈಕಿ ಕೇವಲ ನಾಲ್ಕೈದು ಮಂದಿ ಮಾತ್ರ ರಾಜೀನಾಮೆ ನೀಡಿದ್ದಾರೆ. 13 ಪ್ರಧಾನ ಕಾರ್ಯದರ್ಶಿಗಳ ಪೈಕಿ ಕೇವಲ ಒಬ್ಬರು ಮಾತ್ರ ರಾಜೀನಾಮೆ ನೀಡಿದ್ದಾರೆ. ಉಳಿದೆಲ್ಲರೂ ರಾಜೀನಾಮೆ ನೀಡಬೇಕು ಎನ್ನುವುದು ರಾಹುಲ್ ಗಾಂಧಿ ನಿರೀಕ್ಷೆ' ಎನ್ನುವ ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಅವರ ಹೇಳಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್' ಉಲ್ಲೇಖಿಸಿದೆ.

ತಾವು ರಾಜೀನಾಮೆ ನೀಡಿದ ನಂತರವು ಪಕ್ಷದ ಹಲವು ರಾಜ್ಯ ಘಟಕಗಳ ನಾಯಕರು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡದೆತಮ್ಮ ಸ್ಥಾನದಲ್ಲಿಯೇ ಮುಂದುವರಿದಿರುವುದಕ್ಕೆ ರಾಹುಲ್ ಗಾಂಧಿ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸುದ್ದಿ 'ಪ್ರಜಾವಾಣಿ' ಜಾಲತಾಣದಲ್ಲಿ ಪ್ರಕಟವಾಗಿತ್ತು.

'ನಮ್ಮ ಪಕ್ಷದ ಯುವ ಕಾರ್ಯಕರ್ತರೊಂದಿಗೆ ನಾನು ಸಮಾಲೋಚನೆ ನಡೆಸಿದೆ. 'ಲೋಕಸಭೆ ಚುನಾವಣೆಯ ಸೋಲಿನ ಹೊಣೆಯನ್ನು ಕೇವಲ ರಾಹುಲ್ ಗಾಂಧಿ ಒಬ್ಬರೇ ಹೊತ್ತುಕೊಂಡರೆ ಸಾಲದು. ಎಲ್ಲ ಮುಂಚೂಣಿ ನಾಯಕರೂ ಹೊಣೆಹೊತ್ತು ರಾಜೀನಾಮೆ ನೀಡಬೇಕು' ಎನ್ನುವ ಸಲಹೆ ವ್ಯಕ್ತವಾಯಿತು. ಕಾರ್ಯಕರ್ತರ ಮಾತಿಗೆ ನಾನು ಒಪ್ಪಿಗೆ ಸೂಚಿಸಿ ರಾಜೀನಾಮೆ ಸಲ್ಲಿಸಿದ್ದೇನೆ' ಎಂದು ಬಬಾರಿಯಾ ಹೇಳಿಕೆಯನ್ನು ಉಲ್ಲೇಖಿಸಿ 'ಇಂಡಿಯನ್ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

'ಸೋಲಿನ ಹೊಣೆಹೊತ್ತು ರಾಜೀನಾಮೆ ನೀಡಿದ ರಾಹುಲ್ ಗಾಂಧಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಸತತ ಮನವೊಲಿಕೆ ಪ್ರಯತ್ನಗಳ ನಂತರವೂ ಅವರು ರಾಜೀನಾಮೆ ಹಿಂಪಡೆಯಲು ಸಮ್ಮತಿಸಲಿಲ್ಲ. ಸೋಲಿಗೆ ನಾವೆಲ್ಲರೂ ಕಾರಣ. ಹೀಗಾಗಿ ನಾನೂ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದೆ' ಎಂದು ಕಾಂಗ್ರೆಸ್ ಗೋವಾ ಘಟಕದ ಅಧ್ಯಕ್ಷ ಚೊಡಾನ್‌ಕರ್ ಪ್ರತಿಕ್ರಿಯಿಸಿದ್ದಾರೆ.

ಎಐಸಿಸಿ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಚೌಧರಿ, ರಾಜೇಶ್ ಧರ್ಮಾನಿ, ವೀರೇಂದರ್ ಸಿಂಗ್ ರಾಥೋಡ್, ದೆಹಲಿ ಘಟಕದ ಕಾರ್ಯಾಧ್ಯಕ್ಷರಾಜೇಶ್ ಲಿಲೊಥಿಯಾ, ತೆಲಂಗಾಣ ಘಟಕದ ಕಾರ್ಯಾಧ್ಯಕ್ಷ ಪೊನ್ನಂ ಪ್ರಭಾಕರ್, ಹರಿಯಾಣ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಮಿತ್ರಾ ಚೌಹಾಣ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೆಟ್ಟ ಡಿಸೋಜ ರಾಜೀನಾಮೆ ನೀಡಿದ ಪ್ರಮುಖರು. ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಇವರೆಲ್ಲರು ತಮ್ಮ ರಾಜೀನಾಮೆ ಪತ್ರದಲ್ಲಿ 'ರಾಹುಲ್ ಗಾಂಧಿ ಅವರಿಗೆ ಗೌರವ ನೀಡುವ ಉದ್ದೇಶದಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಒಕ್ಕಣೆ ಬರೆದಿದ್ದಾರೆ.

ಸಭೆಯಲ್ಲಿ ಪಾಲ್ಗೊಂಡಿದ್ದವರ ಪ್ರಕಾರ ಶುಕ್ರವಾರ ಸುಮಾರು 120 ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ದೇಶದ ಎಲ್ಲಾ ಮುಂಚೂಣಿ ಹಿರಿಯ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ದೇಶದ ವಿವಿಧೆಡೆ ಇರುವ ಅವರ ಮನೆಗಳಿಗೆ ಭೇಟಿ ನೀಡಿ, ಮನವೊಲಿಸಿ ರಾಜೀನಾಮೆ ಪಡೆಯಲಾಗುವುದು ಎಂದು ಯುವನಾಯಕರೊಬ್ಬರು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿ ಹೊರತುಪಡಿಸಿ ಬೇರೆ ಆಯ್ಕೆಗಳಿಲ್ಲ. ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು. ಈ ಸಂಬಂಧ ರಾಹುಲ್ ಅವರನ್ನು ಭೇಟಿಯಾಗಿ ಮನವೊಲಿಸಲು ಯತ್ನಿಸಲಾಗುವುದು ಹಲವುಯುವ ಕಾರ್ಯಕರ್ತರು ಹೇಳಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿಯೂ ಆಗಿರುವ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷಕಮಲ್‌ ನಾಥ್ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 'ರಾಹುಲ್ ಗಾಂಧಿ ಹೇಳಿದ್ದು ಸರಿಯಾಗಿದೆ. ಸೋಲಿಗೆ ನಾನೂ ಕಾರಣ. ಬೇರೆ ಯಾರು ಕಾರಣ ಎಂದು ನನಗೆ ಗೊತ್ತಿಲ್ಲ' ಎಂದು ಕಮಲ್ ನಾಥ್ ಹೇಳಿದ್ದಾರೆ.

ಛತ್ತೀಸಗಡದ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮೋಹನ್ ಮರ್ಕಮ್ ಅವರನ್ನು ರಾಹುಲ್ ಗಾಂಧಿ ಶುಕ್ರವಾರ ನೇಮಿಸಿದ್ದರು. ಈವರೆಗೂ ಈ ಜವಾಬ್ದಾರಿಯನ್ನು ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT