ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಲು ಮುಖವೇ ಗುರುತು ಪತ್ರ

7

ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಲು ಮುಖವೇ ಗುರುತು ಪತ್ರ

Published:
Updated:

ನವದೆಹಲಿ: ಇನ್ನುಮುಂದೆ ದೇಶದೊಳಗೆ ವಿಮಾನದಲ್ಲಿ ಪ್ರಯಾಣಿಸಲು ಯಾವುದೇ ಐಡಿ, ಪಾಸ್‌ಪೋರ್ಟ್‌ ಅಥವಾ ಬೋರ್ಡಿಂಗ್‌ ಕಾರ್ಡ್‌ಗಳ ಅಗತ್ಯವಿರುವುದಿಲ್ಲ. ದೇಶೀಯ ವಿಮಾನಗಳ ಮೂಲಕ ಪ್ರಯಾಣ ಆರಂಭಿಸುವವರಿಗೆ ಯಾವುದೇ ಕಾರ್ಡ್‌ಗಳ ಅವಶ್ಯವಿಲ್ಲದೆ ಪತ್ರರಹಿತವಾಗಿ ವಿಮಾನ ನಿಲ್ದಾಣಗಳಿಗೆ ಪ್ರವೇಶ ಪಡೆಯಲು ಮುಖ ಗುರುತಿಸಬಲ್ಲ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಮಾಡಲು ಸರ್ಕಾರವು ನಿರ್ಧರಿಸಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಸದ್ಯ ಖಾಸಗಿ ಸಹಭಾಗಿತ್ವವಿರುವ ದೆಹಲಿ, ಮುಂಬೈ, ಹೈದರಾಬಾದ್‌ ಹಾಗೂ ಬೆಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ಮತ್ತು ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ(ಎಎಐ)ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರಣಾಸಿ, ವಿಜಯವಾಡ, ‍ಪುಣೆ ಹಾಗೂ ಕೊಲ್ಕತ್ತ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯ ಜಾರಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.

‘ಮುಂದಿನ ಐದಾರು ತಿಂಗಳಲ್ಲಿ ಎಎಐನ ನಾಲ್ಕು ವಿಮಾನನಿಲ್ದಾಣಗಳಲ್ಲಿ ಡಿಜಿಯಾತ್ರಾ(ಡಿವೈ) ಅಡಿಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ. ಈ ವ್ಯವಸ್ಥೆಯನ್ನು ಮತ್ತಷ್ಟು ನಿಲ್ದಾಣಗಳಿಗೆ ವಿಸ್ತರಿಸಲಾಗುವುದು. ಸದ್ಯ ಕಣ್ಣು, ಹೆಬ್ಬೆರಳು ಸ್ಕ್ಯಾನ್‌ ಮಾಡುವ ಮೂಲಕ ವ್ಯಕ್ತಿಯನ್ನು ಗುರುತಿಸುವುದು ಜಾಗತಿಕವಾಗಿ ರೂಢಿಯಾಗಿದೆ. ಹಲವು ಹಂತಗಳಲ್ಲಿ ಮುಖದ ಸ್ಕ್ಯಾನ್‌ ಮೂಲಕ ವ್ಯಕ್ತಿಯನ್ನು ಗುರುತಿಸುವ ಬಯೋಮೆಟ್ರಿಕ್‌ ವ್ಯವಸ್ಥೆ ಅತ್ಯಂತ ಮಹತ್ವದ್ದಾಗಿದ್ದು, ಮುಖದ ಪ್ರತಿ ಅಂಗವನ್ನೂ ವಿವಿಧ ಹಂತಗಳಲ್ಲಿ ಗುರುತಿಸಿ ದಾಖಲಿಸಿಕೊಂಡಿರುತ್ತದೆ. ಒಂದು ವೇಳೆ ಅಪಘಾತ ಸಂದರ್ಭಗಳಲ್ಲಿ ಮುಖದ ಯಾವುದೇ ಭಾಗವನ್ನು ಬ್ಯಾಂಡೇಜ್‌ ಮಾಡಿದ್ದರೂ ವ್ಯಕ್ತಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಬಯೋಮೆಟ್ರಿಕ್‌ ದಾಖಲೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಿಕೊಳ್ಳಬೇಕಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಇರುವ ವ್ಯವಸ್ಥೆಯೊಂದಿಗೆ ಈ ವ್ಯವಸ್ಥೆಯೂ ಇರುತ್ತದೆ. ಕಡ್ಡಾಯ ಪ್ರಕ್ರಿಯೆಯಲ್ಲ. ಅದಲ್ಲದೆ ಇದು ದೇಶದೊಳಗೆ ಪ್ರಯಾಣಿಸುವವರಿಗೆ ಮಾತ್ರವೇ ಅನ್ವಯವಾಗುತ್ತದೆ.

ಇದಕ್ಕಾಗಿ ಪಾಸ್‌ಪೋರ್ಟ್‌, ಅಧಾರ್‌ ಅಥವಾ ಚಾಲನಾ ಪರವಾನಗಿಯಂತಹ ಯಾವುದೇ ಗುರುತಿನ ಚೀಟಿಯನ್ನು ಬಳಸಿ ವಿಮಾನಯಾನ ಸಚಿವಾಲಯದ ಪೋರ್ಟಲ್‌ನಲ್ಲಿ ತಮ್ಮ ದಾಖಲೆಗಳನ್ನು ನೋಂದಾಯಿಸಿಕೊಳ್ಳಬಹುದು. ಬಳಿಕ ವಿಮಾಣನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖದ ಗುರುತನ್ನು ಬಯೋಮೆಟ್ರಿಕ್‌ಗೆ ಹೊಂದಿಸಿಕೊಳ್ಳಬಹುದು. ಇಷ್ಟಾದರೆ ದೇಶೀಯ ಪ್ರಯಾಣಗಳಿಗೆ ಮುಖವೇ ನಿಮ್ಮ ಗುರುತು ಮತ್ತು ಟಿಕೆಟ್ ಆಗಿ ಬದಲಾಗಲಿದೆ.

ಮುಖದ ಗುರುತಿನ ದಾಖಲೆಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಇದಕ್ಕಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು (ಬಿಐಅಎಲ್‌) ತಾಂತ್ರಿಕ ಸೇವಾ ಪೂರೈಕೆದಾರ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

‘ವಿಮಾನನಿಲ್ದಾಣಗಳಲ್ಲಿ, ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಮುಖದ ಮೂಲಕ ಗುರುತಿಸಲು ಬಯೋಮೆಟ್ರಿಕ್‌ ತಂತ್ರಜ್ಞಾನವು ನೆರವಾಗಲಿದೆ. ಇದರಿಂದ ಬೋರ್ಡಿಂಗ್‌ ಪಾಸ್‌, ಪಾಸ್‌ಪೋರ್ಟ್‌ ಅಥವಾ ಇನ್ನಿತರ ಗುರುತಿನ ಪತ್ರಗಳನ್ನು ಅಧಿಕಾರಿಗಳಿಗೆ ತೋರಿಸುವ ಅಗತ್ಯವಿರುವುದಿಲ್ಲ’ ಎಂದು ಬಿಐಅಎಲ್‌ ಹೇಳಿದೆ.

ಡಿಜಿಯಾತ್ರಾ ವ್ಯವಸ್ಥೆ ಅಡಿಯಲ್ಲಿ, ಡಿಜಿಯಾತ್ರಾ ಜೊತೆ ಮಾಹಿತಿ ಜೋಡಿಸಿಕೊಂಡಿರುವ ಪ್ರಯಾಣಿಕರ ಪ್ರಯಾಣ ವಿವರವೂ ವಿಮಾನಯಾನ ಸಂಸ್ಥೆಗಳಲ್ಲಿ ದಾಖಲಾಗಿರುತ್ತವೆ. ಭದ್ರತೆಯ ದೃಷ್ಟಿಯಿಂದ ಮಾಹಿತಿಯನ್ನು ಗೌಪ್ಯವಾಗಿರಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !