ಪಂಚಾಯ್ತಿ: ‘ಮೀಸಲಾತಿಗೆ ಹೊಸ ನಿಯಮ’

7
ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಮೀಸಲಾತಿ...

ಪಂಚಾಯ್ತಿ: ‘ಮೀಸಲಾತಿಗೆ ಹೊಸ ನಿಯಮ’

Published:
Updated:

ನವದೆಹಲಿ: ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸುವ ನಿಟ್ಟಿನಲ್ಲಿ ಶೀಘ್ರವೇ ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಇದುವರೆಗೆ ಅಸ್ತಿತ್ವದಲ್ಲಿದ್ದ ಪಂಚಾಯತ್‌ ರಾಜ್‌ ಕಾಯ್ದೆ– 1998ರ ಬದಲಿಗೆ ಕರ್ನಾಟಕ ಪಂಚಾಯತ್‌ ರಾಜ್‌ (ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ರೊಟೇಷನ್‌ ಅಡಿ ಮೀಸಲಾತಿ ನೀಡುವ) ಅಧಿನಿಯಮ– 2005 ಎಂಬ ಶೀರ್ಷಿಕೆಯಡಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ರಾಜ್ಯ ಸರ್ಕಾರವು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಿಗೆ 2005ರಲ್ಲಿ ನಡೆದ ಚುನಾವಣೆ ಸಂದರ್ಭ ರೊಟೇಷನ್‌ ಪದ್ಧತಿ ಅಡಿ ಮೀಸಲಾತಿ ಘೋಷಿಸದೇ, ಹಿಂದಿನ ಚುನಾವಣೆಯಲ್ಲಿ ನಿಗದಿಪಡಿಸಿದ್ದ ಮೀಸಲಾತಿಯನ್ನೇ ರಾಜ್ಯ ಚುನಾವಣಾ ಆಯೋಗ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದ್ದ ಹೈಕೋರ್ಟ್‌ ಅಧಿಸೂಚನೆಯನ್ನೇ ರದ್ದುಗೊಳಿಸಿತ್ತು.

‘1998ರ ಪಂಚಾಯತ್‌ ರಾಜ್‌ ಅಧಿನಿಯಮದ ಅನ್ವಯ ಮೀಸಲಾತಿ ಅಂತಿಮಗೊಳಿಸಿದ್ದು ಅಕ್ರಮ’ ಎಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ಪೀಠದೆದುರು ಸರ್ಕಾರ ಇದೀಗ ನೀಡಿರುವ ವರದಿಯಲ್ಲಿ ಹೊಸ ನಿಯಮಗಳ ಜಾರಿಯ ಪ್ರಸ್ತಾವದ ಬಗ್ಗೆ ವಿವರಿಸಿದೆ.

‘ಮೀಸಲಾತಿ ಅಂತಿಮಗೊಳಿಸುವ ಸಂಬಂಧ ಹೊಸ ನಿಯಮಗಳ ಜಾರಿಗೆ ಈಗಾಗಲೇ ಕ್ರಮ ಕೈಗೊಂಡಿರುವುದರಿಂದ ಚುನಾವಣಾ ಆಯೋಗ ಸಲ್ಲಿಸಿರುವ ಮೇಲ್ಮನವಿಯು ಅಪ್ರಸ್ತುತ’ ಎಂದು ಸರ್ಕಾರ ತಿಳಿಸಿದ್ದರಿಂದ ನ್ಯಾಯಪೀಠವು ಪ್ರಕರಣವನ್ನು ಇತ್ಯರ್ಥಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !