ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂಕಾರದ ಅವಸಾನ

Last Updated 11 ಜೂನ್ 2019, 19:30 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಣಾಸಿಯ ರಾಜನಾಗಿದ್ದಾಗ ಬೋಧಿಸತ್ವ ಗಂಧರ್ವಕುಲದಲ್ಲಿ ಹುಟ್ಟಿದ್ದ. ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಗಂಧರ್ವನೆಂದು ಹೆಸರು ಮಾಡಿದ್ದ. ಆತ ಮದುವೆಯಾಗದೆ ತನ್ನ ವಯಸ್ಸಾದ ಕುರುಡು ತಂದೆ-ತಾಯಿಗಳನ್ನು ನೋಡಿಕೊಳ್ಳುತ್ತಿದ್ದ.

ಒಂದು ಬಾರಿ ವಾರಣಾಸಿಯ ವರ್ತಕರು ಉಜೈಯಿನಿಗೆ ಹೋಗಿ ವ್ಯಾಪಾರ ಮುಗಿದ ಮೇಲೆ ಅಲ್ಲಿಯ ವರ್ತಕರು ಮುಸಿಲನೆಂಬ ಗಂಧರ್ವನಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬೋಧಿಸತ್ವನ ವೀಣೆಯನ್ನು ಕೇಳಿದ್ದ ವಾರಣಾಸಿಯ ವರ್ತಕರಿಗೆ ಮುಸಿಲನ ವಾದ್ಯ ತುಂಬ ಸಪ್ಪೆ ಎನ್ನಿಸಿತು. ಮುಸಿಲನಿಗೆ ತನ್ನ ಸಂಗೀತ ಅವರಿಗೆ ಇಷ್ಟವಾಗಲಿಲ್ಲವೆಂದು ತಿಳಿಯಿತು. ಆತ ಬಂದು, ‘ಸ್ವಾಮೀ, ತಾವು ನನಗಿಂತಲೂ ಶ್ರೇಷ್ಠವಾದ ಸಂಗೀತಕಾರರನ್ನು ಕಂಡಿದ್ದೀರಾ?’ ಎಂದು ಕೇಳಿದ. ಅವರು, ‘ಹೌದು, ನಮ್ಮ ಗಂಧರ್ವನ ವೀಣಾವಾದನವನ್ನು ಕೇಳಿದ ಮೇಲೆ ನೀನು ವೀಣೆ ನುಡಿಸುತ್ತಿದ್ದೆಯೋ ಅಥವಾ ಶ್ರುತಿ ಮಾಡುತ್ತಿದ್ದೆಯೋ ತಿಳಿಯದಂತಿತ್ತು’ ಎಂದರು. ಮುಸಿಲ ಅಸೂಯೆಯಿಂದ ಕುದಿದು ಹೋದ, ಆ ವರ್ತಕರೊಂದಿಗೆ ತಾನೂ ವಾರಣಾಸಿಗೆ ಹೋದ. ಬೋಧಿಸತ್ವನ ಮನೆಯನ್ನು ಸೇರಿದ. ಗಂಧರ್ವ ಮನೆಯಲ್ಲಿ ಇರಲಿಲ್ಲ. ಅಲ್ಲಿ ಇಟ್ಟಿದ್ದ ವೀಣೆಯನ್ನು ನೋಡಿ ನುಡಿಸಲು ಹೋದ. ಗಂಧರ್ವನ ಕುರುಡು ತಂದೆ-ತಾಯಿಯರಿಗೆ ಅದು ಅಪಸ್ವರವೆನ್ನಿಸಿ ವೀಣೆಯ ತಂತಿಗಳನ್ನು ಇಲಿಗಳು ಕಡಿಯುತ್ತಿವೆ ಎಂದುಕೊಂಡು ಕೋಲು ತಟ್ಟಿ ಓಡಿಸಲು ನೋಡಿದರು. ಆ ಹೊತ್ತಿಗೆ ಬಂದ ಬೋಧಿಸತ್ವ ಮುಸಿಲನನ್ನು ಕಂಡ. ಮುಸಿಲ ಗಂಧರ್ವನ ಕಾಲಿಗೆ ಬಿದ್ದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ದುಂಬಾಲುಬಿದ್ದು ಬೇಡಿಕೊಂಡ. ಮೊದಮೊದಲು ಅವನ ಅಂಗಚರ್ಯೆಗಳನ್ನು ಇಷ್ಟಪಡದ ಬೋಧಿಸತ್ವ ಕೊನೆಗೆ ಅವನ ಬೇಡಿಕೆಯನ್ನು ನಿರಾಕರಿಸದೇ ಅವನಿಗೆ ಕಲಿಸತೊಡಗಿದ.

ಬೋಧಿಸತ್ವ ತನಗೆ ತಿಳಿದದ್ದನ್ನು ವಂಚನೆಯಿಲ್ಲದೆ ಕಲಿಸಿದ. ಮುಸಿಲ ನಿಧಾನಕ್ಕೆ ರಾಜನಿಗೆ ಹತ್ತಿರವಾಗುತ್ತ, ತಾನು ಬೋಧಿಸತ್ವನಿಗಿಂತಲೂ ಶ್ರೇಷ್ಠ ಸಂಗೀತಕಾರ ಎಂದು ತಲೆ ತುಂಬಿದ. ಕೆಲದಿನಗಳ ನಂತರ ರಾಜನಿಗೆ ಈ ಮಾತು ಸತ್ಯವೆನ್ನಿಸಿ ಬೋಧಿಸತ್ವನನ್ನು ಅರಮನೆಯಿಂದ ಹೊರಗೆ ಹಾಕಿದ. ಬೋಧಿಸತ್ವ ಕಾರಣ ಕೇಳಿದಾಗ, ‘ನಿಮ್ಮ ಶಿಷ್ಯ ನಿಮಗಿಂತ ಶ್ರೇಷ್ಠನಾಗಿದ್ದಾನೆ. ನೀವು ಅವನಷ್ಟೇ ಅಥವಾ ಅವನಿಗಿಂತ ಶ್ರೇಷ್ಠರೆಂದರೆ ಮಾತ್ರ ನಿಮಗೆ ಮರಳಿ ಬರಲು ಅವಕಾಶವಿದೆ. ಮುಂದಿನ ಭಾನುವಾರ ನಿಮ್ಮಿಬ್ಬರ ಪ್ರದರ್ಶನ ಏರ್ಪಡಿಸಿದ್ದೇನೆ. ಸಿದ್ಧವಾಗಿ ಬನ್ನಿ’ ಎಂದ.

ಬೋಧಿಸತ್ವ ಆತಂಕದಿಂದ ಮನೆಬಿಟ್ಟು ಕಾಡಿಗೆ ಬಂದ. ಈತನ ಆತಂಕ ಶಕ್ರನಿಗೆ (ಇಂದ್ರನಿಗೆ) ತಿಳಿಯಿತು. ಆತ ಕೆಳಗಿಳಿದು ಬಂದು ಕಾರಣವನ್ನು ಕೇಳಿ ತಿಳಿದ. ನಂತರ ಹೇಳಿದ, ‘ಭಾನುವಾರ ನೀನು ಹೋಗಿ ಭಾಗವಹಿಸು. ಕೆಲಸಮಯದ ನಂತರ ವೀಣೆಯ ಒಂದು ತಂತಿಯನ್ನು ಕತ್ತರಿಸಿ ಹಾಕು, ಸಂಗೀತ ಹಾಗೆಯೇ ಮುಂದುವರೆಯುತ್ತದೆ. ಅವನೂ ನಿನ್ನ ಹಾಗೆಯೇ ಕತ್ತರಿಸಿದಾಗ ಅವನ ಸಂಗೀತ ನಿಂತುಹೋಗುತ್ತದೆ. ಆಗ ನೀನು ನಿಧಾನವಾಗಿ ಎರಡನೆಯ, ಮೂರನೆಯ, ಕೊನೆಗೆ ಏಳನೆಯ ತಂತಿಯನ್ನು ಕತ್ತರಿಸಿ ಹಾಕು. ಆಗ ಯಾವ ತಂತಿಯೂ ಇಲ್ಲದೆ ಅದ್ಭುತವಾದ ವೀಣಾ ನಿನಾದ ಹೊರಡುತ್ತಲೇ ಇರುತ್ತದೆ. ಮುಸಿಲ ಎದ್ದು ಹೋಗುತ್ತಾನೆ’. ಭಾನುವಾರ ಶಕ್ರ ಹೇಳಿದಂತೆಯೇ ನಡೆದು ಮುಸಿಲನಿಗೆ ಮುಖಭಂಗವಾಗಿ ಹೊರಟುಹೋದ. ಮುಂದೆ ಯಾರಿಗೂ ಮುಖ ತೋರಲಿಲ್ಲ.

ಅಲ್ಪರಿಗೆ ಸ್ಥಾನಸಿಕ್ಕರೆ ಆಗುವುದೇ ಹೀಗೆ. ಸ್ವಲ್ಪ ಜ್ಞಾನ ಬಂದೊಡನೆ ಅಹಂಕಾರದಿಂದ ತಲೆ ತಿರುಗಿದರೆ ಆ ತಲೆಗೆ ಬಲವಾದ ಪೆಟ್ಟು ಬೀಳುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT