ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭಾ ಸದಸ್ಯರಾಗಿ ಗೊಗೊಯಿ ಪ್ರಮಾಣ

ವಿರೋಧ ಪಕ್ಷಗಳ ಸದಸ್ಯರ ಘೋಷಣೆ, ಸಭಾತ್ಯಾಗ
Last Updated 19 ಮಾರ್ಚ್ 2020, 17:26 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ಸದಸ್ಯರ ಘೋಷಣೆ ಮತ್ತು ಸಭಾತ್ಯಾಗದ ನಡುವೆ ಸುಪ್ರೀಂ ಕೋರ್ಟ್‌‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಗುರುವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸಂದರ್ಭದಲ್ಲಿ ಘೋಷಣೆ ಹಾಕುವುದು ಮತ್ತು ಸಭಾತ್ಯಾಗ ನಡೆದಿರುವುದು ಇದೇ ಮೊದಲು. ಕಳೆದ ವರ್ಷ ನವೆಂಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಗೊಗೊಯಿ (65) ಅವರು, ರಾಜ್ಯಸಭಾ ಸದಸ್ಯರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರಕ್ಕೆ ರಂಜನ್‌ ಗೊಗೊಯಿ ಅವರನ್ನು ಕರೆಯುತ್ತಿದ್ದಂತೆ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಸದಸ್ಯರು ‘ನಿಮಗೆ ನಾಚಿಕೆಯಾಗಬೇಕು’ ಮತ್ತು ‘ಡೀಲ್‌’ ಎಂದು ಘೋಷಣೆಗಳನ್ನು ಕೂಗಿದರು. ಬಳಿಕ, ಸಭಾತ್ಯಾಗ ಮಾಡಿದರು.

‘ಘೋಷಣೆ ಹಾಕುವುದು ಸರಿ ಅಲ್ಲ. ಸಂಸತ್ತಿನಲ್ಲಿ ಸದಸ್ಯರು ಈ ರೀತಿ ವರ್ತಿಸಬಾರದು. ಸದಸ್ಯರ ಯಾವುದೇ ಘೋಷಣೆಗಳು ದಾಖಲೆಗೆ ಹೋಗುವುದಿಲ್ಲ’ ಎಂದು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.

‘ಸದನದ ಹೊರಗೆ ಸದಸ್ಯರು ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಸಂವಿಧಾನದಲ್ಲಿರುವ ಅವಕಾಶಗಳನ್ನು ಬಳಸಿಯೇ ಈ ನೇಮಕ ಮಾಡಲಾಗಿದೆ. ರಾಷ್ಟ್ರಪತಿ ಅವರ ಅಧಿಕಾರ ಏನು ಎನ್ನುವುದು ನಿಮಗೆ ಗೊತ್ತಿದೆ’ ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ಹೇಳಿದರು.

ಕಾನೂನು ಸಚಿವ ರವಿಶಂಕರ್‌ ಪ್ರಸಾದ್ ಮಾತನಾಡಿ, ‘ವಿರೋಧ ಪಕ್ಷಗಳ ಈ ನಡವಳಿಕೆ ಸರಿ ಇಲ್ಲ. ಈ ಸದನಕ್ಕೆ ಮಾಜಿ ನ್ಯಾಯಮೂರ್ತಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ನಾಮನಿರ್ದೇಶನಗೊಂಡಿದ್ದಾರೆ. ಈಗ ಘೋಷಣೆ ಹಾಕಿದವರೆ ಆಡಳಿತ
ನಡೆಸುತ್ತಿದ್ದಾಗ ಹಲವರನ್ನು ಈ ಸದನಕ್ಕೆ ನೇಮಿಸಿದ್ದಾರೆ’ ಎಂದು ತಿಳಿಸಿದರು.

ಕೆಟಿಎಸ್‌ ತುಳಸಿ ಅವರ ಅವಧಿ ಮುಕ್ತಾಯಗೊಂಡಿದ್ದರಿಂದ ತೆರವಾದ ಹುದ್ದೆಗೆ ಗೊಗೊಯಿ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನಾಮನಿರ್ದೇಶನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT