ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಬಂಡಿ, ಸೈಕಲ್‌ ಏರಿದ ರಾಹುಲ್‌

ತೈಲ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಕೋಲಾರ: ತೈಲೋತ್ಪನ್ನಗಳು ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಸೋಮವಾರ ಚುನಾವಣಾ ಪ್ರಚಾರದ ವೇಳೆ ಎತ್ತಿನ ಬಂಡಿ ಹಾಗೂ ಸೈಕಲ್‌ ಸವಾರಿ ಮಾಡಿ ಪ್ರತಿಭಟನೆ ನಡೆಸಿದರು.

ಪಕ್ಷದ ಅಭ್ಯರ್ಥಿ ಕೆ.ವೈ. ನಂಜೇಗೌಡರ ಪರ ಪ್ರಚಾರ ನಡೆಸಲು ಬಂದಿದ್ದ ರಾಹುಲ್, ರೋಡ್‌ ಷೋ ವೇಳೆ ಜನಾಶೀರ್ವಾದ ಯಾತ್ರೆಯ ಬಸ್‌ನಿಂದ ಏಕಾಏಕಿ ಕೆಳಗಿಳಿದು, ಕಾರ್ಯಕರ್ತರ ಜತೆ ಸೈಕಲ್‌ ಏರಿದರು. ಅಲ್ಲದೆ, ಸ್ವಲ್ಪ ದೂರ ಎತ್ತಿನ ಬಂಡಿಯಲ್ಲಿ ಸಾಗಿದರು.

ವೇದಿಕೆ ಬದಲಿಗೆ ಎತ್ತಿನ ಬಂಡಿಯಲ್ಲೇ ನಿಂತು ಭಾಷಣ ಮಾಡಿದ ಅವರು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರಿಗೆ ಜೀವನ ಸಾಗಿಸಲು ಕಷ್ಟವಾಗಿದೆ. ಆದರೆ, ಪ್ರಧಾನಿ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅವರಿಗೆ ಬಡವರ ಕಷ್ಟದ ಅರಿವಿಲ್ಲ’ ಎಂದು ಟೀಕಿಸಿದರು.

‘ಮೋದಿಯವರು ಗುಜರಾತ್‌ನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳನ್ನು ಖಾಸಗೀಕರಣಗೊಳಿಸಿದ್ದಾರೆ. ನುಡಿದಂತೆ ನಡೆಯದ ಅವರು ನಾಲ್ಕು ವರ್ಷದಿಂದ ಒಂದೂ ಒಳ್ಳೆಯ ಕೆಲಸ ಮಾಡಿಲ್ಲ. ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದರೂ ತುಟಿಕ್‌ ಪಿಟಿಕ್‌ ಎನ್ನುತ್ತಿಲ್ಲ. ಅವರ ಸಂಪುಟದ ಸಚಿವರು ಸಂವಿಧಾನದ ವಿರುದ್ಧ ಮಾತನಾಡಿದರೂ ಮೌನವಾಗಿರುವ ಮೋದಿ ದಲಿತ ವಿರೋಧಿ’ ಎಂದು ಆರೋಪಿಸಿದರು.

ಬಹಿರಂಗ ಪಡಿಸಲಿ: ‘ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಎಷ್ಟು ದಿನ ಜೈಲಿನಲ್ಲಿದ್ದರು ಮತ್ತು ಎಷ್ಟು ಹಣ ಲೂಟಿ ಮಾಡಿದ್ದಾರೆ ಎಂಬುದನ್ನು ಮೋದಿಯವರು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

ಪಕ್ಷದ ಮಹಿಳಾ ಕಾರ್ಯಕರ್ತರು ಸಿಲಿಂಡರ್‌ ಮಾದರಿಗಳನ್ನು ಪ್ರದರ್ಶಿಸಿ, ‘ಮೋದಿ ಸರ್ಕಾರ ತೊಲಗಲಿ’ ಎಂದು ಘೋಷಣೆ ಕೂಗಿದರು. ಎತ್ತಿನ ಬಂಡಿಗೆ ಹತ್ತುವ ವೇಳೆ ರಾಹುಲ್‌ ತಲೆಗೆ ಅಂಗಡಿಯ ಮುಂಭಾಗದ ಮರದ ತುಂಡು ತಾಗಿ ಪೆಟ್ಟಾಯಿತು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್‌, ಸಂಸದ ಕೆ.ಎಚ್‌.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಕೆ.ಆರ್‌.ರಮೇಶ್‌ ಕುಮಾರ್‌, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್‌ ಅಹಮ್ಮದ್‌, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹಾಗೂ ವಿವಿಧ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

*ವಂಚಕ ನೀರವ್‌ ಮೋದಿಗೆ ಸಹಾಯ ಮಾಡುತ್ತಿರುವ ಮೋದಿಯವರು ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಬಂಡವಾಳಶಾಹಿಗಳಿಗೆ ತೋರುವ ಕಾಳಜಿಯನ್ನು ಬಡ ರೈತ ಬಗ್ಗೆ ತೋರುತ್ತಿಲ್ಲ

-ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT