ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ಪ್ರವೇಶಕ್ಕೆ ರಕ್ಷಣೆ ಕೇಳಿದ್ದವರಿಗೆ 'ತಾಳ್ಮೆಯಿಂದಿರಿ' ಎಂದ ಸುಪ್ರೀಂ

Last Updated 13 ಡಿಸೆಂಬರ್ 2019, 10:03 IST
ಅಕ್ಷರ ಗಾತ್ರ

ನವದೆಹಲಿ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನವೆಂಬರ್ 14ರಂದು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದೆ. ಈ ಮಧ್ಯೆ ಯಾವುದೇ ಕಾರಣಕ್ಕೂ ಈ ತೀರ್ಪಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.

ಇದೊಂದು ಭಾವನಾತ್ಮಕ ವಿಚಾರವಾಗಿದ್ದು, ರಾಜ್ಯದಲ್ಲಿ ಈಗಾಗಲೇ ಹಿಂಸಾಚಾರಕ್ಕೆ ಕಾರಣವಾಗಿದೆ. ಹೀಗಿರುವಾಗ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ರಕ್ಷಣೆ ನೀಡುವುದು ಸೇರಿದಂತೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠವು, ಈ ಸಮಸ್ಯೆಯು ಭಾವನಾತ್ಮಕ ವಿಚಾರವಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಾಲಯ ಯಾವುದೇ ಆದೇಶವನ್ನು ನೀಡಿದರೆ ಅದು ಹಿಂಸಾಚಾರಕ್ಕೆ ತಿರುಗುವ ಎಲ್ಲ ಸಾಧ್ಯತೆಗಳು ಇವೆ.

ಕೇರಳದ ಇಬ್ಬರು ಮಹಿಳೆಯರು ದೇಗುಲ ಪ್ರವೇಶದ ವೇಳೆ ಪೊಲೀಸರ ರಕ್ಷಣೆಯನ್ನು ಕೋರಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೊಬ್ಡೆ, ಸಾವಿರಾರು ವರ್ಷಗಳಿಂದಲೂ ಈ ಅಭ್ಯಾಸವನ್ನು ರೂಡಿಸಿಕೊಂಡು ಬರಲಾಗಿದೆ. ಹೀಗಾಗಿ ಇಂದಿನ ಪರಿಸ್ಥಿತಿಯಲ್ಲಿ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾಗಿರುವುದರಿಂದಾಗಿ ನಿಮ್ಮ ಪರವಾಗಿ ತೀರ್ಪು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಬಿಂದು ಅಮ್ಮಿಣಿ ಮತ್ತು ರೇಹ್ನಾ ಫಾತೀಮಾ ಎಂಬ ಮಹಿಳೆಯರು ಕೇರಳದ ಶಬರಿಮಲೆಗೆ ಪ್ರವೇಶಕ್ಕೆ ತೆರಳಿದ್ದರು. ಈ ವೇಳೆ ತಮ್ಮ ಮೇಲೆ ಆದ ದಾಳಿಯ ಬಳಿಕ ತಮಗೆ ಪೊಲೀಸರ ರಕ್ಷಣೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಕುರಿತು ಮಾತನಾಡಿದ ಬೊಬ್ಡೆ, ಇದೊಂದು ಭಾವನಾತ್ಮಕ ವಿಚಾರವಾಗಿದೆ ಮತ್ತು ಅರ್ಜಿದಾರರು ವಿಸ್ತೃತ ಪೀಠವು ಸಮಸ್ಯೆ ಕುರಿತು ತೀರ್ಮಾನ ಕೈಗೊಳ್ಳುವವರೆಗೂಕಾಯಬೇಕು. ಅರ್ಜಿದಾರರು ತಾಳ್ಮೆಯಿಂದಿರಬೇಕು. ನಿಮ್ಮ ಪರವಾಗಿ ವಿಚಾರವನ್ನು ಕೈಗೊಂಡರೆ,ಬಳಿಕ ನಾವು ಖಂಡಿತವಾಗಿಯೂ ಆದೇಶವನ್ನು ನೀಡುತ್ತೇವೆ. ಆದರೆ ಸ್ವಲ್ಪ ತಾಳ್ಮೆಯಿಂದಿರಿ ಎಂದು ಹೇಳಿದರು.

ಅಮ್ಮಿಣಿ ಅವರ ಪರವಾಗಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದಿಸಿ, ಈ ಸಮಸ್ಯೆಯನ್ನು ಬಗೆಹರಿಸಲು ಶೀಘ್ರವೇ ವಿಸ್ತೃತ ಪೀಠವನ್ನು ರಚಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಸಿಜೆಐ, 7 ನ್ಯಾಯಾಧೀಶರ ಪೀಠವು ಮುಸ್ಲಿಂ ಮತ್ತು ಪಾರ್ಸಿ ಮಹಿಳೆಯರ ಹಕ್ಕುಗಳ ಅರ್ಜಿಗಳ ಕುರಿತು ನಿರ್ಧರಿಸಿದ ನಂತರ ಶೀಘ್ರವೇ ವಿಸ್ತೃತ ನ್ಯಾಯಪೀಠವನ್ನು ರಚಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT