ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮತ್ತೆ ಅಭಿನಂದನ್ ಹೆಸರು ಪ್ರಸ್ತಾಪಿಸಿದ ಮೋದಿ

ಪಾಕ್‌ಗೆ ಕಡಕ್ ಎಚ್ಚರಿಕೆ ನೀಡಿದ್ದೆ ಎಂದ ಪ್ರಧಾನಿ
Last Updated 21 ಏಪ್ರಿಲ್ 2019, 14:53 IST
ಅಕ್ಷರ ಗಾತ್ರ

ಅಹಮದಾಬಾದ್: ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಪಾಕಿಸ್ತಾನಕ್ಕೆ ಕಡಕ್ ಎಚ್ಚರಿಕೆ ನೀಡಿದ್ದೆ. ಹೀಗಾಗಿಯೇ ನಮ್ಮ ಪೈಲಟ್‌ ಅನ್ನು ಪಾಕ್ ಭಾರಿ ತರಾತುರಿಯಲ್ಲಿ ಬಿಡುಗಡೆ ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಪಠಾಣ್‌ನಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ರ‍್ಯಾಲಿ ವೇಳೆ ಮೋದಿ ಈ ಮಾತು ಹೇಳಿದ್ದಾರೆ.

‘ಅಭಿನಂದನ್ ಬಂಧಿತರಾದ ನಂತರ ಉತ್ತರ ನೀಡುವಂತೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು. ನಾವು ಮಾಧ್ಯಮಗೋಷ್ಠಿ ನಡೆಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆವು. ಮೋದಿ 12 ಕ್ಷಿಪಣಿಗಳನ್ನು ಸಿದ್ಧವಾಗಿ ಇರಿಸಿದ್ದಾರೆ, ನಿಮ್ಮ ಮೇಲೆ ದಾಳಿ ನಡೆಯಬಹುದು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ತಾನಕ್ಕೆ ಹೇಳಿದ್ದರು. ಹೀಗಾಗಿಯೇ ನಮ್ಮ ಪೈಲಟ್‌ ಸುರಕ್ಷಿತವಾಗಿ ವಾಪಸ್ ಬಂದಿದ್ದು’ ಎಂದು ಮೋದಿ ತಮ್ಮ ಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿಕೊಂಡಿದ್ದಾರೆ.

‘ಅದು ಅಮೆರಿಕ ಹೇಳಿದ್ದು, ಅದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಪುಲ್ವಾಮಾ ದಾಳಿ ನಡೆದಾಗ ಮೋದಿಯಿಂದ ದೇಶ ಏನನ್ನು ನಿರೀಕ್ಷಿಸಿತ್ತು? ಮುಂಬೈ ದಾಳಿ ನಂತರ ಮನಮೋಹನ್ ಸಿಂಗ್ ಮಾಡಿದಂತೆಯೇ ನಾನೂ ಮಾಡಿದ್ದರೆ, ದೇಶ ನನ್ನನ್ನು ಕ್ಷಮಿಸುತ್ತಿತ್ತೇ’ ಎಂದು ಮೋದಿ ಪ್ರಶ್ನಿಸಿದ್ದಾರೆ.

‘ಏನಾದರೂ ಮಾಡಲೇಬೇಕು ಎಂದು ದೇಶ ಬಯಸುತ್ತಿತ್ತು. ನಾವು ಸೇನೆಗೆ ಸ್ವಾತಂತ್ರ್ಯ ನೀಡಿದೆವು. ಪಾಕ್ ಬಾರಿ ಭದ್ರತೆ ಏರ್ಪಡಿಸಿತ್ತು. ಹನುಮಂತ ದೇವನ ಆಶೀರ್ವಾದದಿಂದ ನಮ್ಮ ಸೈನಿಕರು ಯಶಸ್ವಿಯಾಗಿ ವಾಯುದಾಳಿ ನಡೆಸಿದರು. ಅಲ್ಲಿಗೆ ಕಥೆ ಮುಗಿಯಿತು’ ಎಂದು ಮೋದಿ ವಿವರಿಸಿದ್ದಾರೆ.

ಭದ್ರತೆ ವಿಚಾರದಲ್ಲೂ ನೀತಿ ಸಂಹಿತೆ ಬೇಕೇ...

‘ರಾಷ್ಟ್ರೀಯ ಭದ್ರತೆಯ ವಿಚಾರ ಮಾತನಾಡಿದರೆ ವಿರೋಧ ಪಕ್ಷಗಳು ನೀತಿ ಸಂಹಿತೆ ಜಾರಿಯಲ್ಲಿದೆ ಎಂಬು ಬೊಬ್ಬೆ ಹೊಡೆಯುತ್ತವೆ. ಇಂತಹ ವಿಚಾರದಲ್ಲಿ ನೀತಿ ಸಂಹಿತೆ ಇದೆಯೇ? ನಾವು ಕಾನೂನನ್ನು ಪಾಲಿಸುವವರು, ಆದರೆ ಎಲ್ಲಕ್ಕಿಂತ ರಾಷ್ಟ್ರೀಯ ಭದ್ರತೆ ದೊಡ್ಡ ವಿಚಾರ’ ಎಂದು ಮೋದಿ ಹೇಳಿದ್ದಾರೆ.

‘1985ರ ನಂತರ ಭಾರತೀಯ ಸೇನೆಗೆ ಕಾಂಗ್ರೆಸ್ ಹೊಸ ಫಿರಂಗಿಗಳನ್ನು ನೀಡಲೇ ಇಲ್ಲ. ಆದರೆ ನನ್ನ ಸರ್ಕಾರ ದೇಶದಲ್ಲಿ ಮೂರು ಕಡೆ ಫಿರಂಗಿ ತಯಾರಿಕಾ ಕಾರ್ಖಾನೆಗಳನ್ನು ಆರಂಭಿಸಿದೆ. ಗುಜರಾತ್‌ನ ಹಜಿರಾದಲ್ಲಿ ಕೆ–9 ವಜ್ರ ಫಿರಂಗಿ ಕಾರ್ಖಾನೆ ಇದೆ. ಗುಜರಾತ್‌ನ ನಡಾಬೆತ್‌ನಲ್ಲಿ ಇದ್ದುಕೊಂಡೇ ಈ ಫಿರಂಗಿಗಳ ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಬಹುದು. ಪಾಕ್‌ ಜತೆ ಗಡಿ ಹಂಚಿಕೊಂಡಿರುವ ಗುಜರಾತ್‌ನಲ್ಲಿ ಭದ್ರತೆಯನ್ನು ಹೆಚ್ಚಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಲೇ ಇಲ್ಲ. ಈಗ ರಾಜ್ಯದ ದೀಸಾದಲ್ಲಿ ನಾವು ವಾಯುನೆಲೆಯನ್ನು ಸ್ಥಾಪಿಸುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಭಾರತ ಈಗ ನೆಲ–ಜಲ–ವಾಯು ಮತ್ತು ಬಾಹ್ಯಾಕಾಶದಲ್ಲೂ ದಾಳಿಯ ಸಾಮರ್ಥ್ಯ ಹೊಂದಿದೆ. ಈಚೆಗಷ್ಟೇ ಉಪಗ್ರಹ ನಿರೋಧಕ ಕ್ಷಿಪಣಿಯ ಪರೀಕ್ಷೆ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ.

‘ನಾನು ನಿಮ್ಮ ಮಣ್ಣಿನ ಮಗ’

‘ಈಗ ಚುನಾವಣೆ ಬಂದಿದೆ. ನಿಮ್ಮ ಮಣ್ಣಿಮ ಮಗನನ್ನು ಸಲಹುವುದು ನಿಮ್ಮ ಕರ್ತವ್ಯ. ನನಗೆ ಗುಜರಾತ್‌ನ 26 ಕ್ಷೇತ್ರಗಳನ್ನೂ ನೀಡಿ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ನೀವು 26 ಕ್ಷೇತ್ರಗಳನ್ನೂ ಕೊಡುವುದಿಲ್ಲ ಎಂದಿಟ್ಟುಕೊಳ್ಳಿ, ಮೇ 23ರಂದು ‘ಏಕೆ ಹೀಗಾಯಿತು?’ ಎಂಬ ಚರ್ಚೆಗಳು ಟಿವಿಗಳಲ್ಲಿ ನಡೆಯುತ್ತವೆ. ಹೀಗಾಗಿ ನನ್ನನ್ನು ಗೆಲ್ಲಿಸಿಕೊಡಿ’ ಎಂದು ಮೋದಿ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT