ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಯಿಂದ ದಕ್ಷಿಣ ಭಾರತೀಯರ ಕಡೆಗಣನೆ: ರಾಹುಲ್ ಗಾಂಧಿ ಆರೋಪ

ವಯನಾಡ್‌ನಿಂದ ಸ್ಪರ್ಧಿಸುತ್ತಿರುವುದಕ್ಕೆ ಕಾರಣ ನೀಡಿದ ಕಾಂಗ್ರೆಸ್ ಅಧ್ಯಕ್ಷ
Last Updated 2 ಏಪ್ರಿಲ್ 2019, 9:52 IST
ಅಕ್ಷರ ಗಾತ್ರ

ನವದೆಹಲಿ:‘ಪ್ರಧಾನಿ ನರೇಂದ್ರ ಮೋದಿ ಅವರ ವರ್ತನೆಯಿಂದಾಗಿ ತಾವು ಕಡೆಗಣನೆಗೆ ಒಳಗಾಗಿದ್ದೇವೆ ಎಂಬ ಭಾವನೆ ದಕ್ಷಿಣ ಭಾರತೀಯರಲ್ಲಿದೆ. ಆದರೆ, ನಾವು ಅವರ ಜತೆಗಿದ್ದೇವೆ ಎಂಬ ಸಂದೇಶ ನೀಡುವುದಕ್ಕಾಗಿ ವಯನಾಡ್‌ನಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹೇಳಿದರು.

ಪಕ್ಷದ ಪ್ರಣಾಳಿಕೆ ಬಿಡುಗಡೆ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಮತ್ತು ಕಾಂಗ್ರೆಸ್ ಪಕ್ಷ ನಿಮ್ಮೊಂದಿಗಿದೆ ಎಂಬುದನ್ನು ದಕ್ಷಿಣ ಭಾರತೀಯರಿಗೆ ತೋರಿಸಿಕೊಡಲು ಬಯಸಿದ್ದೆ. ನಾನು ಸ್ಪರ್ಧಿಸಬೇಕು ಎಂದು ಅಲ್ಲಿಂದ ಆಗ್ರಹವೂ ಇತ್ತು. ದಕ್ಷಿಣ ಭಾರತೀಯರ ಜತೆ ನಾವಿದ್ದೇವೆ ಎಂಬ ಸಂದೇಶ ಸಾರಲು ನಾನು ಬಯಸಿದ್ದೆ’ ಎಂದು ಹೇಳಿದರು.

ರಾಹುಲ್ ಗಾಂಧಿ ವಯನಾಡ್‌ನಿಂದ ಕಣಕ್ಕಿಳಿದಿರುವ ಬಗ್ಗೆ ಟೀಕಿಸಿದ್ದ ಮೋದಿ, ‘ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿಯಲು ಕಾಂಗ್ರೆಸ್‍ಗೆ ಭಯವಿದೆ’ ಎಂದಿದ್ದರು. ‘ರಾಹುಲ್ ಗಾಂಧಿ ಅಮೇಠಿ ಬಿಟ್ಟು, ಕೇರಳಕ್ಕೆ ಓಡಿಹೋಗಿದ್ದಾರೆ. ಕೇರಳಕ್ಕೆ ಹೋಗಿದ್ದು ಏಕೆ? ಅಮೇಠಿಯಲ್ಲಿ ರಾಹುಲ್ ಕಥೆ ಮುಗಿಯಿತು ಎಂಬುದು ಎಲ್ಲರಿಗೂ ಗೊತ್ತು’ ಎಂದುಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದರು.

‘ಎಡಪಕ್ಷಗಳ ವಿರೋಧದ ಬಗ್ಗೆ ಗೊತ್ತಿಲ್ಲ’: ‘ನನಗೆ ತಿಳಿದಿರುವ ಮಟ್ಟಿಗೆದೇಶದಾದ್ಯಂತ ಎಡಪಕ್ಷಗಳ ಜತೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಎಲ್ಲಿಯೂ ಸಮಸ್ಯೆ ಇಲ್ಲ. ವಿರೋಧವಿದೆ ಎಂಬ ವರದಿಗಳು ಎಲ್ಲಿಂದ ಸೃಷ್ಟಿಯಾಗಿವೆ ಎಂಬುದು ಗೊತ್ತಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವಯನಾಡ್‌ನಿಂದರಾಹುಲ್ ಗಾಂಧಿ ಕಣಕ್ಕಿಳಿದಿರುವುದಕ್ಕೆ ಸಿಪಿಐಎಂ ನಾಯಕ ಪ್ರಕಾಶ್ ಕಾರಟ್, ಡಿ.ರಾಜಾ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT