ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುರುಕು’ ಪಡೆದ ಫ್ಯಾನ್, ಕೂಲರ್‌ ವಹಿವಾಟು

ಬೇಸಿಗೆ ಬಿಸಿಲಿನ ತಾಪದಿಂದ ಪಾರಾಗಲು ವಿವಿಧ ಎಲೆಕ್ಟ್ರಾನಿಕ್ ಸಾಧನಗಳ ಮೊರೆ ಹೋಗುತ್ತಿರುವ ಜನರು
Last Updated 23 ಏಪ್ರಿಲ್ 2018, 12:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೇಸಿಗೆಯ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದೆ. ಧಗೆ ತಾಳಲಾರದೆ ಜನರು ದೇಹ ತಂಪಾಗಿಸಿಕೊಳ್ಳಲು ಫ್ಯಾನ್‌, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಅದರಿಂದಾಗಿ ನಗರದಲ್ಲಿ ತಂಪುಕಾರಕ ಎಲೆಕ್ಟ್ರಿಕಲ್‌ ಯಂತ್ರಗಳು, ಪಾನೀಯಗಳ ವಹಿವಾಟು ಚುರುಕು ಪಡೆದುಕೊಂಡಿದೆ.

ಬಿಸಿಲ ತಾಪ ತಣಿಸಲು ಸಾಧ್ಯವಾಗದ ಕಾರಣ ಜನರು ಮನೆ, ಕಚೇರಿಯೊಳಗಿನ ಸೆಕೆ ನಿವಾರಿಸಿಕೊಳ್ಳಲು ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ನಗರದಲ್ಲಿ ಮಾರ್ಚ್‌ನಿಂದಲೇ ಫ್ಯಾನ್‌, ಕೂಲರ್‌ಗಳ ಜತೆಗೆ ರೆಫ್ರಿಜರೇಟರ್‌ಗಳ ಮಾರಾಟ ದಿನೇ ದಿನೇ ವೃದ್ಧಿಯಾಗುತ್ತಿದೆ. ಈ ಅವಕಾಶ ಸದುಪಯೋಗ ಮಾಡಿಕೊಳ್ಳಲು ವರ್ತಕರ ನಡುವೆ ಪೈಪೋಟಿ ನಡೆಯುತ್ತಿದೆ.

ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಬ್ರಾಂಡೆಡ್ ಉಪಕರಣಗಳಷ್ಟೇ ಸ್ಥಳೀಯ ಉತ್ಪನ್ನಗಳ ಸರಕುಗಳೂ ಬಿಕರಿಯಾಗುತ್ತಿವೆ. ವರ್ತಕರು ಫ್ಯಾನ್‌, ಕೂಲರ್‌ಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

‘ಸಾಮಾನ್ಯ ದಿನಗಳಲ್ಲಿ ಕೂಲರ್‌ ಮಾರಾಟವಾಗುವುದೇ ಅಪರೂಪ. ಸಿಲಿಂಗ್‌ ಫ್ಯಾನ್‌ಗಳನ್ನು ಹೊರತುಪಡಿಸಿದಂತೆ ಇತರೆ ಫ್ಯಾನ್‌ಗಳು ಒಂದೋ ಎರಡೋ ಮಾರಾಟವಾಗುತ್ತಿದ್ದವು. ಆದರೆ ತಿಂಗಳಿನಿಂದ ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ. ಕೂಲರ್‌ಗಳು, ಫ್ಯಾನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೊಸ ನಮೂನೆಯ ಟವರ್ ಫ್ಯಾನ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ’ ಎಂದು ಬಿ.ಬಿ. ರಸ್ತೆಯ ಶ್ರೀ ಬಾಲಾಜಿ ಎಂಟರ್‌ಪ್ರೈಸಸ್ ಮಾಲೀಕ ಅಶೋಕ್‌ ಕುಮಾರ್ ಹೇಳುವರು.

‘ವಾರದಿಂದ ಈಚೆಗೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಅದರ ಪರಿಣಾಮವಾಗಿ ದಿನಕ್ಕೆ 15 ಕೂಲರ್‌, 20 ಫ್ಯಾನ್‌ ಮಾರಾಟವಾಗುತ್ತವೆ. ಮೇ ತಿಂಗಳಿನವರೆಗೂ ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಇ–ಸಿಟಿ ಎಲೆಕ್ಟ್ರಾನಿಕ್ಸ್ ಮಳಿಗೆ ಮಾಲೀಕ ಪ್ರಶಾಂತ್‌.

ಸ್ಟ್ಯಾಂಡ್‌ ಅಳವಡಿಸಿದ ಫ್ಯಾನ್‌ಗಳಿಗೆ ₹2ರಿಂದ 4 ಸಾವಿರದವರೆಗೆ ಇದ್ದರೆ, ಕೂಲರ್‌ಗಳ ಬೆಲೆ ₹ 5 ರಿಂದ 10 ಸಾವಿರ. ಕೆಳ ಮಧ್ಯಮ ವರ್ಗದವರು ಫ್ಯಾನ್‌ ಕೇಳಿದರೆ, ಮಧ್ಯಮ ವರ್ಗದವರು ಕಡಿಮೆ ಬಜೆಟ್‌ನ ಕೂಲರ್‌ ಖರೀದಿಸುವರು. ಶ್ರೀಮಂತರು ಬ್ರಾಂಡೆಡ್‌ ಕೂಲರ್‌ ಖರೀದಿಗೆ ಆಸಕ್ತಿ ತೋರುವರು ಎಂದೂ ಹೇಳುವರು.

‘ಕೆಲ ವರ್ಷಗಳ ಹಿಂದೆ ಕೂಲರ್‌ ಬೆಲೆ ₹ 8ರಿಂದ ₹ 15 ಸಾವಿರ ಆಸುಪಾಸಿನಲ್ಲಿ ಇರುತ್ತಿತ್ತು. ಇದೀಗ ₹ 6 ಸಾವಿರದಿಂದ ಕೂಲರ್‌ಗಳು ದೊರೆಯುತ್ತಿರುವ ಕಾರಣ ಖರೀದಿಸಲು ಹೆಚ್ಚುತ್ತಿದ್ದಾರೆ’ ಎಂದು ಬಿ.ಬಿ.ರಸ್ತೆ ದಾಸ್ ಎಲೆಕ್ಟ್ರಾನಿಕ್ಸ್ ಮಾಲೀಕ ಅನಿಲ್ ಸಂತಸ ವ್ಯಕ್ತಪಡಿಸಿದರು.

‘ಮನೆಯಲ್ಲಿ ಸೀಲಿಂಗ್‌ ಫ್ಯಾನ್‌ ಇದೆ. ಆದರೂ ಗಾಳಿ ಕೆಲ ಹೊತ್ತಿಗೆ ಬಿಸಿಯಾಗುತ್ತದೆ. ಬೇಕಾದ ಕಡೆಗೆ ಅದನ್ನು ಒಯ್ಯಲು ಆಗುವುದಿಲ್ಲ. ಮಧ್ಯಾಹ್ನದ ಬಿಸಿಲಿನ ತಾಪ ರಾತ್ರಿಯೂ ಮುಂದುವರಿದಿರುತ್ತದೆ. ಅದಕ್ಕಾಗಿ ಸ್ಟ್ಯಾಂಡಿಂಗ್ ಫ್ಯಾನ್‌ ಖರೀದಿಸುತ್ತಿದ್ದೇನೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಮಚಂದ್ರ.
-ಕೆಂಪೇಗೌಡ ಎನ್.ವೆಂಕಟೇನಹಳ್ಳಿ

**

ಶೀಟಿನ ಛಾವಣಿಯಿಂದ ವಿಪರೀತ ಸೆಕೆ. ಬಾಗಿಲು ಮುಚ್ಚಿದರೆ ಮಕ್ಕಳು ಚಡಪಟಿಕೆ ನೋಡಲಾಗದೆ ಕಡಿಮೆ ಬಜೆಟ್‌ನ ಕೂಲರ್‌ ತೆಗೆದುಕೊಳ್ಳಲು ನಿರ್ಧರಿಸಿ ಖರೀದಿಸಲು ಬಂದಿರುವೆ.
ಸುರೇಶ್‌, ತಿಪ್ಪೇನಹಳ್ಳಿ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT