ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣದ ಬಳಿ ಪಾರ್ಕಿಂಗ್‌ ನಿಯಮ ಮಾರ್ಪಾಡು

* ಬಿಡಿಎ ಆಡಳಿತ ಮಂಡಳಿ ಸಭೆ ಒಪ್ಪಿಗೆ * ಸರ್ಕಾರದ ಅನುಮತಿಯಷ್ಟೇ ಬಾಕಿ
Last Updated 15 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೆಟ್ರೊ ನಿಲ್ದಾಣಗಳ ಬಳಿಯ ವಾಣಿಜ್ಯ ಹಾಗೂ ಕಚೇರಿ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದ ನಿಯಮದಲ್ಲಿ ಮಾರ್ಪಾಡು ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಡಳಿತ ಮಂಡಳಿ ಸಭೆ ಒಪ್ಪಿಗೆ ನೀಡಿದೆ.

ಬಿಡಿಎ ಆಡಳಿತ ಮಂಡಳಿ ಸಭೆಯು ಪ್ರಾಧಿಕಾರದ ಅಧ್ಯಕ್ಷ ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

‘ನಗರದಲ್ಲಿ ಕಚೇರಿಗಳು ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಒಟ್ಟು ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ 50 ಚ.ಮೀಟರ್‌ಗೆ ಒಂದು ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂಬ ನಿಯಮ ಇದೆ. ಮೆಟ್ರೊ ನಿಲ್ದಾಣಗಳ ಬಳಿಯ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಕಡಿಮೆ ಸ್ಥಳಾವಕಾಶ ಸಾಕು ಎಂಬ ಕಾರಣಕ್ಕೆ ಇಲ್ಲಿನ ಕಟ್ಟಡಗಳಿಗೆ ಮಾತ್ರ ಅನ್ವಯವಾಗುವಂತೆ ಪ್ರತಿ 75 ಚದರ ಮೀಟರ್‌ಗೆ ಒಂದು ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಿನ ನಿಯಮದ ಪ್ರಕಾರ ನಗರದಲ್ಲಿ 1ಸಾವಿರ ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಅಥವಾ ಕಚೇರಿ ಕಟ್ಟಡದಲ್ಲಿ 20 ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕಿತ್ತು. ಹೊಸ ನಿಯಮ ಜಾರಿಯಾದರೆ, ಮೆಟ್ರೊ ನಿಲ್ದಾಣಗಳ ಸಮೀಪದ ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡಗಳಲ್ಲಿ 13 ವಾಹನ ನಿಲುಗಡೆಗೆ ಸ್ಥಳಾವಕಾಶ ಮೀಸಲಿಟ್ಟರೆ ಸಾಕು. ಬಿಡಿಎ ಸಭೆಯಲ್ಲಿ ಅನುಮೋದನೆ ಆಗಿರುವ ಈ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಿದ್ದೇವೆ. ಅದಕ್ಕೆ ಸಮ್ಮತಿ ಸಿಕ್ಕಿದ ಬಳಿಕವಷ್ಟೇ ಈ ನಿಯಮ ಜಾರಿಗೆ ಬರಲಿದೆ’ ಎಂದು ಅವರು ವಿವರಿಸಿದರು.

ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣ ಸಂಬಂಧ 2019ರ ಜನವರಿ ನಂತರ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಜಿ.ಪರಮೇಶ್ವರ ಅವರು ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಬಿಡಿಎ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿನ ನಿವೇಶನಗಳು ಹಾಗೂ ಆಸ್ತಿಗಳ ಬಗ್ಗೆ ನಿಖರ ಪರಿಶೀಲನೆ ನಡೆಸುವ ಕಾರ್ಯದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. 2019ರ ಮಾರ್ಚ್‌ ಅಂತ್ಯದೊಳಗ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಗಡುವು ವಿಧಿಸಲಾಗಿದೆ.

ಬೆಳ್ಳಂದೂರು ಕೆರೆಯ ಎರಡು ಕೋಡಿಗಳ ಬಳಿ ತೂಬು (ಸ್ಲ್ಯೂಸ್‌) ಗೇಟ್‌ಗಳನ್ನು ಅಳವಡಿಸುವ ಕಾಮಗಾರಿಯನ್ನು 2019ರ ಮಾರ್ಚ್‌ ಒಳಗೆ ಪೂರ್ಣಗೊಳಿಸುವಂತೆ ಅಧ್ಯಕ್ಷರು ಸೂಚಿಸಿದರು.

ಕೆಂಪೇಗೌಡ ಬಡಾವಣೆ: ಶುಲ್ಕ ಪಾವತಿ ಗಡುವು ವಿಸ್ತರಣೆ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಖರೀದಿಸಿರುವವರು ಬಡ್ಡಿ ರಹಿತವಾಗಿ ಶುಲ್ಕ ಪಾವತಿಸಲು ನೀಡಿದ್ದ ಗಡುವನ್ನು ಒಂದು ತಿಂಗಳ ಕಾಲ ವಿಸ್ತರಿಸಲು ಬಿಡಿಎ ಆಡಳಿತ ಮಂಡಳಿ ಸಭೆ ಒಪ್ಪಿಗೆ ನೀಡಿದೆ.

ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ಇತ್ತೀಚೆಗೆ ಒಟ್ಟು 4,971 ಮಂದಿ‌ಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ನಿವೇಶನ ಖರೀದಿಸಿದವರು ಹಂಚಿಕೆ ಪತ್ರ ಪಡೆದ 60 ದಿನಗಳ ಒಳಗೆ ಪೂರ್ಣ ಪ್ರಮಾಣದ ಶುಲ್ಕ ಪಾವತಿಸಬೇಕಿತ್ತು. ಅವಧಿ ಮೀರಿದ ಬಳಿಕ ಶುಲ್ಕ ಪಾವತಿಸಿದರೆ ಬಡ್ಡಿ ವಿಧಿಸಲಾಗುತ್ತದೆ.

ಬಡ್ಡಿರಹಿತವಾಗಿ ಶುಲ್ಕ ಪಾವತಿಸುವ ಅವಧಿಯನ್ನು ಎರಡು ತಿಂಗಳು ವಿಸ್ತರಿಸುವಂತೆ ನಿವೇಶನ ಪಡೆದವರು ಮನವಿ ಮಾಡಿದ್ದರು.

‘ಬಡ್ಡಿರಹಿತವಾಗಿ ಶುಲ್ಕ ಪಾವತಿಸುವ ಅವಧಿ ವಿಸ್ತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಅಗತ್ಯವಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT