ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ವರ್ಣನೆಯಿಂದಲೇ ಕಾವ್ಯ ಸೃಷ್ಟಿಸಿದ ಕುವೆಂಪು

ಕಸಾಪ ಭವನದಲ್ಲಿ ಕವಿಗೋಷ್ಠಿ; ಸಾಹಿತಿ ತೈಲೂರು ವೆಂಕಟಕೃಷ್ಣ ಅಭಿಮತ
Last Updated 22 ಫೆಬ್ರುವರಿ 2020, 13:38 IST
ಅಕ್ಷರ ಗಾತ್ರ

ಮಂಡ್ಯ: ‘ಪ್ರಕೃತಿಯ ವರ್ಣನೆ, ಆರಾಧನೆಯ ಮೂಲಕವೇ ಕುವೆಂಪು ಅವರು ಕಾವ್ಯ ಸೃಷ್ಟಿಸಿದ್ದಾರೆ. ಪ್ರಕೃತಿ ಇಲ್ಲದೇ ಕುವೆಂಪು ಇಲ್ಲ. ಕಾವ್ಯದ ಹುಟ್ಟಿಗೆ ಪ್ರಕೃತಿಯು ಸ್ಫೂರ್ತಿಯ ಚಿಲುಮೆಯಾಗಿದೆ’ ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಸಾಪ ಜಿಲ್ಲಾ ಘಟಕದ ವತಿಯಿಂದ ನಗರದ ಕಸಾಪ ಭವನದಲ್ಲಿ ಶನಿವಾರ ನಡೆದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಋಗ್ವೇದದ ಕಾಲದಿಂದಲೂ ಕಾವ್ಯ ಸೃಷ್ಟಿಗೆ ಪ್ರಕೃತಿಯೇ ಕಾರಣವಾಗಿದೆ. ಪ್ರಕೃತಿಯನ್ನು ಆಸ್ವಾದಿಸಿ ಬದುಕಿಗೆ ಹತ್ತಿರವಾದ, ಸಾರ್ವಕಾಲಿಕವಾದ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ಕಾಳಿದಾಸನ ಕಾವ್ಯ ಸೃಷ್ಟಿಗೂ ಪ್ರಕೃತಿಯೇ ಆಧಾರವಾಗಿತ್ತು, ಆತ ಪ್ರಕೃತಿಯನ್ನು ದೇವರು ಎಂಬ ಸಂದೇಶ ಕೊಟ್ಟಿದ್ದಾನೆ. ಸಾಹಿತ್ಯವೆಂದರೆ ಕೇವಲ ಪದಗಳ ಜೋಡಣೆಯಾಗಬಾರದು, ಅದು ಬದುಕಿಗೆ ಹತ್ತಿರವಾಗಬೇಕು’ ಎಂದು ಹೇಳಿದರು.

‘ಒಂದು ಕಾವ್ಯ ಸಾರ್ವಕಾಲಿಕವಾದಾಗ ಮಾತ್ರ ಆ ಸಾಹಿತ್ಯ ಸೃಷ್ಟಿಗೆ ಅರ್ಥ ಬರುತ್ತದೆ. ಸಾಹಿತ್ಯ ನಮ್ಮ ಬದುಕನ್ನು ವ್ಯಾಖ್ಯಾನ ಮಾಡಬೇಕು. ಮೌಲ್ಯಗಳ ಆಧಾರದ ಮೇಲೆ ಸಾಹಿತ್ಯ ಸೃಷ್ಟಿಯಾಗಬೇಕು. ಮುಂದಿನ ಪೀಳಿಗೆಗೆ ಸಾಹಿತ್ಯ ಮಾರ್ಗಸೂಚಿಯಾಗಬೇಕು. ಮ್ಯಾಕ್ಸ್‌ಮುಲ್ಲರ್‌ ಹೇಳಿರುವಂತೆ ಕಾವ್ಯ, ಸಾಹಿತ್ಯ ಸಾರ್ವಕಾಲಿಕ ಸತ್ಯವಾಗಿ ರೂಪಿತಗೊಳ್ಳಬೇಕು’ ಎಂದು ಹೇಳಿದರು.

‘ವಾಲ್ಮೀಕಿ ಸೃಷ್ಟಿಸಿದ ರಾಮಾಯಣ, ವ್ಯಾಸ ಮಹರ್ಷಿ ಸೃಷ್ಟಿಸಿದ ಮಹಾಭಾರತ ಇಂದಿಗೂ ಪ್ರಸ್ತುತ ಎನಿಸಿವೆ. ಮಾನವನ ಬದುಕಿನ ವಿವಿಧ ಘಟ್ಟಗಳನ್ನು ಅನುಭವಿಸಿ ಬರೆದಾಗ ಮಾತ್ರ ಸಾಹಿತ್ಯ ಕಾಲಾತೀತವಾಗಿ ಉಳಿಯುತ್ತದೆ. ಸಾಹಿತಿಗಳು ಪ್ರಕೃತಿಯನ್ನು ಕೇವಲ ವರ್ಣನೆ ಮಾಡಿದರೆ ಸಾಲದು, ಪ್ರಕೃತಿಯ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಸಾಹಿತಿಗಳು ಅಧ್ಯಯನಶೀಲರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಬೇಕು. ಆಳ ಅಧ್ಯಯನ, ಮನನವಿದ್ದರೆ ಮಾತ್ರ ಸುಂದ ಸಾಹಿತ್ಯ ಹೊರಬರುತ್ತದೆ’ ಎಂದರು.

ಸಾಹಿತಿ ಡಾ.ಪ‍್ರದೀಪ್‌ ಕುಮಾರ್‌ ಹೆಬ್ರಿ ಮಾತನಾಡಿ ‘ಕವನ ಎಂದರೆ ಕೇವಲ ಅಕ್ಷರಗಳ ಸಂಯೋಜನೆ ಮಾತ್ರವೇ ಆಗಿರುವುದಿಲ್ಲ. ಅದು ಅಕ್ಷರ ತಪಸ್ಸು, ಅಕ್ಷರಗಳ ಆರಾಧನೆಯಾಗಿರಬೇಕು. ಕವಿಗಳು ಕವನ ಬರೆಯುವಲ್ಲಿ ತೋರಿಸುವ ಉತ್ಸಾಹವನ್ನು ಅಧ್ಯಯನದಲ್ಲೂ ತೋರಿಸಬೇಕಾದ ಅವಶ್ಯಕತೆ ಇದೆ. ಸಾಹಿತ್ಯಕ್ಕೆ ತನ್ನದೇ ಆದ ರೂಪ, ಗುಣವಿರುತ್ತದೆ. ಅಕ್ಷರಗಳು ಕಾವ್ಯಗುಣದಿಂದ ಅನಾವರಣಗೊಂಡಾಗ ಮಾತ್ರ ಸಾಹಿತ್ಯವಾಗಿ ಉಳಿಯುತ್ತದೆ’ ಎಂದರು.

‘ಭಾವನೆಗಳು ಅಕ್ಷರವಾಗಿ ಅನಾವರಣಗೊಂಡಾಗ ಅದಕ್ಕೊಂದು ರೂಪ, ಉಪಮೆ, ಧ್ವನಿ ಇರಬೇಕಾಗುತ್ತದೆ. ಕವಿಗಳು ಪದಗಳ ಬಳಕೆ ಮಾಡುವಾಗ ಜಿಪುಣತನ ತೋರಬಾರದು. ಕಾವ್ಯಕ್ಕೆ ಮೌಲ್ಯ, ತೂಕ ತಂದುಕೊಡುವ ಪದಗಳನ್ನೇ ಬಳಕೆ ಮಾಡಬೇಕು. ಕವಿ ವಿಮರ್ಶಕನೂ ಆಗಬೇಕು, ತನ್ನದೇ ಕವನವನ್ನು ಹಲವು ಬಾರಿ ವಿಮರ್ಶೆಗೆ ಒಳಪಡಿಸಬೇಕು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಎನ್‌.ಉದಯ್‌ಕುಮಾರ್‌, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ, ಉಪಾಧ್ಯಕ್ಷ ಧನಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT