ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ: ಮಾನ್ಯತೆಯ ತಿರಸ್ಕಾರ; ಸ್ವಾಗತ–ಆಕ್ರೋಶ

ಬಸವ ಜನ್ಮಭೂಮಿಯಲ್ಲಿ ಬರೋಬ್ಬರಿ ವರ್ಷದ ಹಿಂದೆ ನಡೆದಿದ್ದ ಲಿಂಗಾಯತರ ಹಕ್ಕೊತ್ತಾಯ ಸಮಾವೇಶ
Last Updated 10 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ವಿಜಯಪುರ:‘ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡಬೇಕು ಎಂದು ಕೋರಿ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದ್ದು, ಬಸವ ಜನ್ಮಭೂಮಿಯಲ್ಲಿ ಪರ–ವಿರೋಧದ ತೀವ್ರತೆ ಹೆಚ್ಚಿದೆ.

ವೀರಶೈವ ಲಿಂಗಾಯತ ಪ್ರತಿಪಾದಕರು ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿ, ಪರಸ್ಪರ ಸಂಭ್ರಮಿಸಿದರೆ; ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸಿದ್ದವರು ಇದೊಂದು ನಿರೀಕ್ಷಿತ ನಿರ್ಧಾರ. ಲೋಕಸಭಾ ಚುನಾವಣೆ ನಂತರ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ರಾಜ್ಯ ಸರ್ಕಾರದ ಕೊನೆಯ ಆಡಳಿತದ ಅವಧಿಯಲ್ಲಿ ವೀರಶೈವ ಲಿಂಗಾಯತ, ಲಿಂಗಾಯತ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಇದರ ಕಾವು ಜಿಲ್ಲೆಗೂ ವ್ಯಾಪಿಸಿತ್ತು. ಲಿಂಗಾಯತ ಸ್ವತಂತ್ರ ಧರ್ಮದ ಚುಕ್ಕಾಣಿ ಹಿಡಿದಿದ್ದ ಪ್ರಮುಖರಲ್ಲಿ ಒಬ್ಬರಾಗಿದ್ದ ಆಗಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿರುದ್ಧ ಪಂಚಪೀಠಾಧೀಶ್ವರರು ರಣಕಹಳೆ ಮೊಳಗಿಸಿದ್ದರು.

ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಗಿಯುವ ತನಕವೂ ಬಬಲೇಶ್ವರ ವಿಧಾನಸಭಾ ಕ್ಷೇತ್ರವನ್ನೇ ಕೇಂದ್ರ ಸ್ಥಾನವನ್ನಾಗಿಸಿಕೊಂಡು, ಪಂಚಪೀಠಾಧೀಶ್ವರರು ಹಲವು ಸುತ್ತಿನ ಸಂಚಾರ ನಡೆಸಿದ್ದರು. ಎಂ.ಬಿ.ಪಾಟೀಲ ಬೆಂಬಲಿಗರು ಕೆಲವೆಡೆ ಇವರ ಸಂಚಾರಕ್ಕೆ ಅಡ್ಡಿಪಡಿಸಿದ್ದು ನಡೆದಿತ್ತು. ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ತನಕವೂ ತಿಕ್ಕಾಟ ಬಿರುಸಿನಿಂದ ನಡೆದಿತ್ತು.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಕಾವು ತೀವ್ರಗೊಂಡು, ಅನುಷ್ಠಾನಕ್ಕಾಗಿ ಆಗ್ರಹಿಸಿ ಬೀದರ್‌, ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿಯಲ್ಲಿ ನಡೆದ ಮಹಾರ‍್ಯಾಲಿ ಬಳಿಕ ಬಸವ ಜನ್ಮಭೂಮಿ ವಿಜಯಪುರದಲ್ಲೂ 2017ರ ಡಿ.10ರಂದು ಸಮಾವೇಶ ನಡೆದಿತ್ತು.

ಈ ಸಮಾವೇಶಕ್ಕೆ ಎಲ್ಲ ಜಾತಿ, ಧರ್ಮ ಗುರುಗಳನ್ನು ಆಹ್ವಾನಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭ ಸಮಾವೇಶದ ಮುನ್ನಾ ದಿನಗಳಲ್ಲಿ ವೀರಶೈವ ಲಿಂಗಾಯತ ಪ್ರತಿಪಾದಕರು ವಿಜಯಪುರದಲ್ಲಿ ಸಮಾವೇಶ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಲಿಂಗಾಯತರು ಶೋಭಾಯಾತ್ರೆ ಹಮ್ಮಿಕೊಂಡಿದ್ದರು. ಈ ಸಂದರ್ಭ ವಿಜಯಪುರದ ಆರಾಧ್ಯ ದೈವ ಸಿದ್ದೇಶ್ವರ ಗುಡಿ ಬಳಿ ಜಟಾಪಟಿ ನಡೆದಿತ್ತು.

ಸಮಾವೇಶದ ಮುನ್ನಾ ದಿನವಷ್ಟೇ ತುಮಕೂರಿನ ಸಿದ್ದಗಂಗಾ ಪೀಠಾಧೀಶ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ‘ವಿಜಯಪುರದ ಸಮಾವೇಶ ಬಹಿಷ್ಕರಿಸಿ’ ಎಂಬ ಒಕ್ಕಣೆಯುಳ್ಳ ಪೋಸ್ಟ್‌ ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಹೋರಾಟ ತೀವ್ರಗೊಂಡ ದಿನಗಳಲ್ಲಿ ಎರಡೂ ಸಮುದಾಯಗಳ ನಡುವೆ ಘರ್ಷಣೆಯ ಸನ್ನಿವೇಶ ನಿರ್ಮಾಣಗೊಂಡಿತ್ತು. ಹಲವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು.

ಚಳವಳಿಯ ಮುಂಚೂಣಿ ವಹಿಸಿಕೊಂಡಿದ್ದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಸಮಾವೇಶದ ಮುನ್ನಾ ದಿನ ರಾತ್ರಿ ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, 115 ಪುಟಗಳ ದಾಖಲೆ ಬಿಡುಗಡೆಗೊಳಿಸಿದ್ದರು. ಸರ್ಕಾರ ಮಾನ್ಯತೆ ಕೊಡದಿದ್ದರೆ ಇದರ ಆಧಾರದಲ್ಲೇ ನ್ಯಾಯಾಲಯದ ಮೊರೆ ಹೊಕ್ಕುವುದಾಗಿ ಆಗಲೇ ಘೋಷಿಸಿದ್ದು, 2017ರ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಚಳವಳಿಯಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳ ಪ್ರತಿಕ್ರಿಯೆ

‘ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಿ ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಅಪ್ರಸ್ತುತ. ಬಸವಣ್ಣನವರ ವಿಚಾರಗಳು ಸಾರ್ವಕಾಲಿಕ. ಜಗಜ್ಯೋತಿ ಬಸವೇಶ್ವರರು ಸ್ಥಾಪಿಸಿದ ಲಿಂಗಾಯತ ಧರ್ಮದಿಂದ ಸಮಾಜಕ್ಕೆ, ಮನುಕುಲಕ್ಕೆ ಒಳಿತಾಗಲಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ನೀತಿ ಅನುಸರಿಸಿದೆ’ ಎಂದು ಆಲಮೇಲದ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

‘ಈಗಾಗಲೇ ಸಿಖ್ಖರು, ಜೈನರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿಲ್ಲವೇ ? ಶಾಸಕಾಂಗ, ಕಾರ್ಯಾಂಗಕ್ಕಿಂತ ನ್ಯಾಯಾಂಗ ದೊಡ್ಡದು. ಪ್ರತ್ಯೇಕ ಧರ್ಮದ ಹೋರಾಟಕ್ಕಾಗಿ ಈವರೆಗೂ ಸಂಗ್ರಹಿಸಿದ ಪೂರಕ ದಾಖಲೆಗಳೊಂದಿಗೆ, ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು. ಅಲ್ಲಿ ನಮಗೆ ಜಯ ಸಿಗುವುದು ಖಚಿತ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಗುವುದು ನಿಶ್ಚಿತ’ ಎಂದು ಸ್ವಾಮೀಜಿ ತಿಳಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕಾನೂನಾತ್ಮಕ ಹೋರಾಟ ಆರಂಭಿಸಿದ್ದೇವೆ. ಅದನ್ನು ಮುಂದುವರೆಸುತ್ತೇವೆ’ ಎಂದು ಬಸವನಬಾಗೇವಾಡಿಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದರು.

‘ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿದ ವಿಷಯವನ್ನು ಕಾಶಿ ಪೀಠದ ಸ್ವಾಮೀಜಿ ಮೊಬೈಲ್‌ ಕರೆ ಮೂಲಕ ತಿಳಿಸಿದರು. ಇದೊಂದು ಅತ್ಯುತ್ತಮ ನಿರ್ಧಾರ. ಸಂವಿಧಾನಕ್ಕೆ ಬದ್ಧತೆ ತೋರಿಸಿ, ಹೊಸ ಧರ್ಮದ ಮಾನ್ಯತೆಯ ಪ್ರಸ್ತಾವನೆ ತಿರಸ್ಕರಿಸಿರುವುದು ಒಳ್ಳೆಯದು’ ಎಂದು ಸಿಂದಗಿಯ ಸಾರಂಗ ಮಠ–ಗಚ್ಚಿನ ಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

‘ಸಂವಿಧಾನದಲ್ಲಿ ಹೊಸ ಧರ್ಮ ಸ್ಥಾಪನೆಗೆ ಅವಕಾಶವಿಲ್ಲ. ಸೌಲಭ್ಯದ ಹೆಸರಿನಲ್ಲಿ ಹೊಸ ಧರ್ಮ ಸ್ಥಾಪಿಸುವುದು ಸರಿಯಾದುದಲ್ಲ. ಕೇಂದ್ರ ಸರ್ಕಾರದ ತೀರ್ಮಾನ ಸ್ವಾಗತಾರ್ಹ’ ಎಂದು ಸ್ವಾಮೀಜಿ ತಿಳಿಸಿದರು.

‘ವೀರಶೈವ ಲಿಂಗಾಯತ ಒಂದೇ. ಮೀಸಲಾತಿ ಬೇಡ ಎಂಬ ವಾದ ನಮ್ಮದಲ್ಲ. ಬಸವ ತತ್ವ ಪರಿಪಾಲನೆ ಮಾಡುವ ಲಿಂಗಾಯತ ವೀರಶೈವರೆಲ್ಲರೂ ಒಗ್ಗಟ್ಟಾಗಿ ಹೋಗಬೇಕಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ’ ಎಂದು ಬಸವನಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT