ಪೀಣ್ಯ: ಇರ್ತಲೆ ಹಾವು ಪತ್ತೆ

7

ಪೀಣ್ಯ: ಇರ್ತಲೆ ಹಾವು ಪತ್ತೆ

Published:
Updated:
Deccan Herald

ಬೆಂಗಳೂರು: ಪೀಣ್ಯದಲ್ಲಿ ಬಿಸ್ಕತ್ತು ಕಾರ್ಖಾನೆಯ ಬಳಿ ಅಪರೂಪದ ಇರ್ತಲೆ ಹಾವು (ರೆಡ್‌ ಸ್ಯಾಂಡ್‌ ಬೋವ) ಶುಕ್ರವಾರ ಪತ್ತೆಯಾಗಿದೆ.

ಈ ಹಾವನ್ನು ಬಿಬಿಎಂಪಿ ವನ್ಯಜೀವಿ ಸಂರಕ್ಷಕರಾದ ಹರೀಶ್‌ ಹಾಗೂ ಜಯರಾಜ್‌ ಸಂರಕ್ಷಿಸಿದರು.

’ಹಾವು ಸುಮಾರು ಎರಡೂವರೆ ಅಡಿ ಉದ್ದ ಹಾಗೂ 2 ಕೆ.ಜಿ. ತೂಕ ಇದೆ’ ಎಂದು ಜಯ್‌ರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿನ ಪರಿಸರದಲ್ಲಿ ಸಾಮಾನ್ಯವಾಗಿ ಈ ಜಾತಿಯ ಹಾವುಗಳು ಕಂಡುಬರುವುದಿಲ್ಲ. ಈ ಹಾವು ಶುಭದಾಯಕ ಎಂಬ ಮೂಢನಂಬಿಕೆ  ಜನರಲ್ಲಿದೆ. ಹಾಗಾಗಿ ಇದು ಕಳ್ಳಸಾಗಣೆಯಾಗಿ ನಗರವನ್ನು ಸೇರಿಕೊಂಡಿರುವ ಸಾಧ್ಯತೆಯೂ ಇದೆ’ ಎಂದು ಜಯರಾಜ್‌ ತಿಳಿಸಿದರು.

‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಅದನ್ನು ಬಿಡುತ್ತೇವೆ’ ಎಂದರು.

‘ಒಂದು ವರ್ಷದ ಹಿಂದೆ ಸಂಪಂಗಿರಾಮನಗರ ವಾರ್ಡ್‌ನ ಮೋರಿಯೊಂದರಲ್ಲಿ ಇರ್ತಲೆ ಹಾವೊಂದು ಪತ್ತೆಯಾಗಿತ್ತು. ಈ ಜಾತಿಯ ಹಾವುಗಳಲ್ಲಿ ವಿಷ ಇರುವುದಿಲ್ಲ. ಮರಳು ಮಿಶ್ರಿತ ಮಣ್ಣಿನ ಒಳಗೆ ಜೀವಿಸುತ್ತದೆ. ತೇವಾಂಶಭರಿತ ಆವಾಸ ಸ್ಥಾನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ’ ಎನ್ನುತ್ತಾರೆ ಜಿಲ್ಲಾ ವನ್ಯಜೀವಿ ವಾರ್ಡನ್‌ ಪ್ರಸನ್ನ ಕುಮಾರ್‌.

ಈ ಹಾವಿನ ಬಾಲವೂ ತಲೆಯ ತರಹವೇ ಕಾಣುತ್ತದೆ. ಹಾಗಾಗಿ ಇದನ್ನು ಇರ್ತಲೆ (ಎರಡು ತಲೆ) ಹಾವು ಎಂದು ಜನ ಕರೆಯುತ್ತಾರೆ. 

ಅಪಾಯದ ಅಂಚಿನಲ್ಲಿರುವ ಈ ಹಾವುಗಳನ್ನು ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಸಂರಕ್ಷಿತ ಸರೀಸೃಪಗಳ ಪಟ್ಟಿಯಲ್ಲಿ ಸೇರಿದೆ. ಇವುಗಳನ್ನು ಇಟ್ಟುಕೊಳ್ಳುವುದು, ಕಳ್ಳಸಾಗಣೆ ಮಾಡುವುದು ಹಾಗೂ ಮಾರಾಟ ಮಾಡುವುದು ಅಪರಾಧ. ಈ ತಪ್ಪಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ₹ 25 ಸಾವಿರ ದಂಡ ವಿಧಿಸಲು ಅವಕಾಶವಿದೆ.

’ಮಣ್ಣಿನಡಿ ಅವಿತುಕೊಂಡಿರುವ ಹಾವು ಬಾಲವನ್ನು ಅಲ್ಲಾಡಿಸಿ ಪಕ್ಷಿಗಳನ್ನು ಸೆಳೆಯುತ್ತದೆ. ಅದನ್ನು ತಿನ್ನಲು ಬರುವ ಸಣ್ಣಪುಟ್ಟ ಹಕ್ಕಿಗಳನ್ನು ಹಾಗೂ ಇಲಿಗಳನ್ನು ಬೇಟೆಯಾಡುತ್ತದೆ’ ಎಂದು ಪ್ರಸನ್ನ ಕುಮಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !