ಬುಧವಾರ, ಡಿಸೆಂಬರ್ 2, 2020
25 °C
ಅಭಿಮಾನಿ ಸತ್ತ ಸುದ್ದಿ ಕೇಳಿ ಧಾವಿಸಿ ಬಂದರು!

ಜೋಗದ ಸೊಬಗಿಗೆ ಮಿಡಿದಿದ್ದ ಕವಿ ಹೃದಯ

ಡಿ.ಎಚ್‌.ಶಂಕರಮೂರ್ತಿ Updated:

ಅಕ್ಷರ ಗಾತ್ರ : | |

1966ನೇ ಇಸವಿ. ಶಿವಮೊಗ್ಗದಲ್ಲಿ ಜನಸಂಘ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬಂದಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಸ್ಥಳೀಯ ಮುಖಂಡರು ಜೋಗ ಜಲಪಾತಕ್ಕೆ ಕರೆದುಕೊಂಡು ಹೋಗಿದ್ದರು. ಈ ಜಲಧಾರೆಯ ವೈಭವಕ್ಕೆ ಮಾರು ಹೋಗಿದ್ದ ಅವರು ಜೋಗದ ಗುಂಡಿಗೂ ಇಳಿದು ಸಮಯ ಕಳೆದಿದ್ದರು. ಅಲ್ಲೇ ಬಂಡೆಯಲ್ಲಿ ಮಲಗಿ ಶಾಯರಿಯೊಂದನ್ನೂ ವಾಚಿಸಿದ್ದರು.

ಆಗ ಜೋಗದ ಗುಂಡಿಗೆ ಇಳಿಯಲು ಈಗಿನ ಹಾಗೆ ಸುಸಜ್ಜಿತ ಮೆಟ್ಟಿಲುಗಳಿರಲಿಲ್ಲ. ವಾಜಪೇಯಿ ಅವರು ಅಲ್ಲಿಂದ ಮೇಲೆ ಬರಲು ಹರಸಾಹಸಪಟ್ಟರು ಎಂದು ಅವರ ಜೊತೆಯಲ್ಲಿದ್ದ ನನ್ನ ಅಣ್ಣ ಸುಬ್ಬಣ್ಣ ಹೇಳಿದ್ದರು. ರಾಜಕೀಯದ ಜಂಟಾಟ ಏನೇ ಇದ್ದರೂ ಅವರೊಳಗಿನ ಭಾವುಕತೆಯ ಸೆಲೆ ಎಂದೂ ಬತ್ತಿರಲಿಲ್ಲ.

ಪಕ್ಷದ ಕಾರ್ಯಕರ್ತರ ಬಗ್ಗೆ ವಾಜಪೇಯಿ ಅವರಿಗಿದ್ದ ಅಂತಃಕರಣ, ಅವರ ಬಗ್ಗೆ ಅವರು ತೋರುತ್ತಿದ್ದ ಕಾಳಜಿ, ಅವರ ಮಾನವೀಯತೆ, ಸರಳತೆ ಎಲ್ಲ ರಾಜಕಾರಣಿಗಳಿಗೂ ಸ್ಫೂರ್ತಿ. ಅವರಲ್ಲಿ ಎಳ್ಳಿನಿತೂ ಢಾಂಬಿಕತನವಿರಲಿಲ್ಲ. ಪ್ರಧಾನಿ ಆದಾಗಲೂ ಅದೇ ಸರಳತೆಯನ್ನು ಉಳಿಸಿಕೊಂಡಿದ್ದು ಅವರ ಹಿರಿಮೆ.

ಅಭಿಮಾನಿ ಮನೆಗೆ ಧಾವಿಸಿ ಬಂದರು:

ಅದು 1984ರ ಲೋಕಸಭಾ ಚುನಾವಣೆ. ಇಂದಿರಾ ಗಾಂಧಿ ಹತ್ಯೆ ಬಳಿಕ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸಿತ್ತು. ಗುಜರಾತ್‌ ಹಾಗೂ ಆಂಧ್ರಪ್ರದೇಶದಲ್ಲಿ ತಲಾ ಒಂದು ಸ್ಥಾನ ಗೆದ್ದಿದ್ದು ಬಿಟ್ಟರೆ, ಬೇರೆಲ್ಲಾ ಕಡೆ ನಮ್ಮ ಪಕ್ಷದ ಅಭ್ಯರ್ಥಿಗಳು ಸೋತಿದ್ದರು. ಗ್ವಾಲಿಯರ್‌ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಟಲ್‌ಜಿ ಅವರು ಕಾಂಗ್ರೆಸ್‌ನ ಮಾಧವ ರಾವ್‌ ಸಿಂಧಿಯಾ ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದರು. ಅವರ ಅಭಿಮಾನಿಯಾಗಿದ್ದ ಭದ್ರಾವತಿಯ ಪರಿಶಿಷ್ಟ ಜಾತಿಯ ಲಕ್ಷ್ಮೀನಾರಾಯಣ ಎಂಬ ಹುಡುಗ ಈ ಸುದ್ದಿ ಕೇಳಿ ಆಘಾತಗೊಂಡಿದ್ದ. ವಾಜಪೇಯಿಯವರೇ ಸೋತರಲ್ಲ ಎಂಬ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ನಾನು ಕರೆಮಾಡಿ ಅವರಿಗೆ ಸುದ್ದಿ ತಿಳಿಸಿದೆ. ಅವರು ಮರುದಿನವೇ ಹೊರಟು ಬಂದು ಆತನ ತಂದೆತಾಯಿಯನ್ನು ಸಾಂತ್ವನಪಡಿಸಿದರು. ತುಂಬಾ ಬಡತನದಲ್ಲಿದ್ದ ಆತನ ಕುಟುಂಬಕ್ಕೆ ಆರ್ಥಿಕ ನೆರವನ್ನೂ ನೀಡಿದರು. ಆತನ ತಮ್ಮ ಮತ್ತು ತಂಗಿಯ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುವಂತೆ ನನಗೆ ಸೂಚಿಸಿದ್ದರು. ಅವರು ದೇಶದ ಪ್ರಧಾನಿ ಆದ ಬಳಿಕ ನಾನು ಅವರನ್ನು ಭೇಟಿ ಆದಾಗಲೂ ಆ ‘ಅಭಿಮಾನಿಯ ಕುಟುಂಬ ಈಗ ಹೇಗಿದೆ’ ಎಂದು ವಿಚಾರಿಸಿದ್ದರು.

ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಮಾನಿಯ ಕುಟುಂಬವನ್ನು ಭೇಟಿಯಾಗಲು ರಾಜ್ಯಕ್ಕೆ ಬಂದಿದ್ದ ವಾಜಪೇಯಿ ಅವರು ಹಿಂತಿರುಗುವ ಮುನ್ನ ಬೆಂಗಳೂರಿನ ಗಾಯನ ಸಮಾಜದಲ್ಲಿ ಪಕ್ಷದ ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಿದ್ದರು. ಆ ಸಭೆಗೆ ಬಂದಿದ್ದವರೆಲ್ಲ ಪಕ್ಷದ ಹೀನಾಯ ಸೋಲಿನ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು. ‘ಆಯ್ಯೋ ಹೀಗಾಯಿತಲ್ಲಾ...’ ಎಂದು ಮರುಕಪಡುತ್ತಿದ್ದರು. ಆಗ ವಾಜಪೇಯಿ ಅವರು ಆಡಿದ ಮಾತು ನನ್ನ ಕಿವಿಯಲ್ಲಿ ಈಗಲೂ ಅನುರಣಿಸುತ್ತಿದೆ. ‘ನ ದೈನಂ, ನ ಪಲಾಯನಂ..’ ಎಂದು ಮಾತು ಆರಂಭಿಸಿದ್ದ ಅವರು, ‘ನನಗೆ ನಿಮ್ಮ ದೈನ್ಯದ ಮಾತುಗಳು ಬೇಕಿಲ್ಲ. ನಾನು ಪಲಾಯನ ಮಾಡುವುದೂ ಅಲ್ಲ. ಈ ಸೋಲಿನಿಂದ ಧೃತಿಗೆಡುವುದೂ ಇಲ್ಲ. ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟುತ್ತೇನೆ’ ಎಂದು ಕೆಚ್ಚೆದೆಯಿಂದ ಹೇಳಿದ್ದರು. ಇದಾಗಿ ಕೇವಲ 12 ವರ್ಷಗಳಲ್ಲೇ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1983ರ ವಿಧಾನಸಭಾ ಚುನಾವಣೆಯಲ್ಲಿ ಅವರು ರಾಜ್ಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ವ್ಯಾಪಕ ಪ್ರಚಾರ ನಡೆಸಿದ್ದರು. ಅಂಬಾಸಿಡರ್‌ ಕಾರಿನಲ್ಲಿ ಅವರ ಜೊತೆ ನಾನೂ ಇಡೀ ರಾಜ್ಯ ಪ್ರವಾಸ ಮಾಡಿದ್ದೆ. ದಾವಣಗೆರೆಯಲ್ಲಿ ಪಕ್ಷದ ಪ್ರಚಾರ ರ‍್ಯಾಲಿ ಏರ್ಪಡಿಸಲಾಗಿತ್ತು. ಪಕ್ಷದ ಅಭ್ಯರ್ಥಿಯೊಬ್ಬರು ಭಾಷಣದಲ್ಲಿ ಇಂದಿರಾ ಗಾಂಧಿ ಅವರನ್ನು ಹಿಗ್ಗಾಮುಗ್ಗ ಬೈದರು. ಆಗ ವಾಜಪೇಯಿ, ಅವರ ಭಾಷಣವನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿದ್ದರು. ನಂತರ ಭಾಷಣ ಮಾಡಿದ ಮತ್ತೊಬ್ಬ ಅಭ್ಯರ್ಥಿಯೂ ಇಂದಿರಾ ಗಾಂಧಿಯನ್ನು ಬೈಯಲು ಶುರುಮಾಡಿದ್ದರು. ಆಗ ಅವರಿಂದ ಮೈಕ್‌ ಪಡೆಯುವಂತೆ ಸೂಚಿಸಿದ್ದ ವಾಜಪೇಯಿ, ‘ಇದು ವಿಧಾನಸಭಾ ಚುನಾವಣೆ. ಇಲ್ಲಿ ರಾಜ್ಯದ ಹಾಗೂ ಸ್ಥಳೀಯ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿ’ ಎಂದು ಕಿವಿಮಾತು ಹೇಳಿದ್ದರು. ರ‍್ಯಾಲಿ ಮುಗಿಸಿ ನಿರ್ಗಮಿಸುವಾಗ, ಈ ಘಟನೆ ಬಗ್ಗೆ ಬೇಸರ ಮಾಡಿಕೊಳ್ಳದಂತೆ ಅಭ್ಯರ್ಥಿಗಳನ್ನು ಸಮಾಧಾನ ಪಡಿಸಿದ್ದರು.


ಜೋಗದ ಸೊಬಗು

ಚಪಾತಿ ಹಂಚಿಕೊಂಡು ತಿಂದೆವು

ಈ ಚುನಾವಣೆಯ ಪ್ರಚಾರದ ವೇಳೆ ಒಂದು ದಿನ ನಾವು ಬೆಳಗಾವಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಅಂದು ಮಧ್ಯಾಹ್ನ ಊಟ ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಸಂಜೆ ಅವರು ಬೆಳಗಾವಿಯಲ್ಲಿ ಪ್ರಚಾರ ಭಾಷಣ ಮಾಡಬೇಕಿತ್ತು. ದಾರಿ ಮಧ್ಯೆ ಅವರು, ‘ಶಂಕರಮೂರ್ತಿ, ನೀನು ನನಗೆ ಮಧ್ಯಾಹ್ನ ಊಟವನ್ನೇ ಕೊಡಿಸಿಲ್ಲ. ಸಂಜೆ ಭಾಷಣ ಮಾಡಲು ನನ್ನಿಂದ ಸಾಧ್ಯವಾಗದು’ ಎಂದುಬಿಟ್ಟರು. ನಾವು ಗೆಸ್ಟ್ ಹೌಸ್‌ ತಲುಪಿದಾಗ ಅಲ್ಲಿನ ಕ್ಯಾಂಟೀನ್‌ನಲ್ಲೂ ಊಟ ಖಾಲಿಯಾಗಿತ್ತು. ‘ಒಂದು ಚಪಾತಿ ಮಾತ್ರ ಇದೆ’ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು. ಆ ಚಪಾತಿಯನ್ನು ಪೇಪರ್‌ನಲ್ಲಿ ಸುತ್ತಿ ತಂದು ಅವರಿಗೆ ನೀಡಿದೆ. ಒಂದು ಕ್ಷಣ ನನ್ನನ್ನು ನೋಡಿ, ‘ನಿನ್ನ ಊಟ ಆಗಿದೆಯೇ’ ಎಂದು ಕೇಳಿದರು.‘ಇಲ್ಲ’ ಎಂದೆ. ಆ ಚಪಾತಿಯನ್ನು ನಾವಿಬ್ಬರೂ ಹಂಚಿಕೊಂಡು ತಿಂದೆವು.

ನಾನು ಜನಸಂಘವನ್ನು ಸೇರಿದ್ದು 1966ರಲ್ಲಿ. ಅದೇ ವರ್ಷ ಶಿವಮೊಗ್ಗದಲ್ಲಿ ಪಕ್ಷದ ಸಮ್ಮೇಳನವೊಂದರಲ್ಲಿ ವಾಜಪೇಯಿ ಭಾಗವಹಿಸಿದ್ದರು. ಅಂದು ಅವರು ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ಅವರ ಅವರು ಮಾಡಿದ್ದ ಭಾಷಣದಿಂದ ನಾನು ಬಹಳ ಪ್ರಭಾವಿತನಾಗಿದ್ದೆ. ಆ ಬಳಿಕವೂ ಅವರು ರಾಜ್ಯಕ್ಕೆ ಬಂದಾಗ ನಾಲ್ಕೈದು ಬಾರಿ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು.

1977ರಲ್ಲಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾದರು. ಆ ವರ್ಷ ಶಿವಮೊಗ್ಗದ ಪತ್ರಕರ್ತರ ಸಂಘದವರು ಸಮ್ಮೇಳನವೊಂದಕ್ಕೆ ಅವರನ್ನು ಕರೆಸಿದ್ದರು. ಅವರನ್ನು ಬೆಂಗಳೂರಿನಲ್ಲಿ ಭೇಟಿ ಆಗಿದ್ದೆ. ಆಗಲೂ ನಮ್ಮ ಮನೆಗೆ ಬರುವುದಾಗಿ ಹೇಳಿದರು. ಅವರು ಬೆಂಗಳೂರಿನಿಂದ ರೈಲಿನಲ್ಲಿ ರಾತ್ರಿ ವೇಳೆ ಶಿವಮೊಗ್ಗಕ್ಕೆ ಬಂದರು. ಅವರನ್ನು ಬರಮಾಡಿಕೊಳ್ಳಲು ನಾನು ರೈಲು ನಿಲ್ದಾಣಕ್ಕೆ ಹೋಗಿದ್ದೆ. ಸಾಂಗ್ಲಿಯಾನ ಅವರು ಆಗ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ. ಅವರಿಗೆ ಸಚಿವರು ನಮ್ಮ ಮನೆಯಲ್ಲಿ ಉಳಿದುಕೊಳ್ಳುವ ವಿಷಯ ತಿಳಿಸಿದೆ. ಅದಕ್ಕೆ ಸಾಂಗ್ಲಿಯಾನ ಒಪ್ಪಲಿಲ್ಲ.

ರೈಲಿನಿಂದ ಇಳಿದ ವಾಜಪೇಯಿ, ಸ್ವಾಗತಿಸಲು ಬಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಯವರಲ್ಲಿ  ಶಂಕರಮೂರ್ತಿ ಎಲ್ಲಿ ಎಂದು ಕೇಳಿದರು. ನಾನೂ ದೂರದಲ್ಲಿ ನಿಂತಿದ್ದೆ. ನನ್ನನ್ನು ಕರೆಸಿಕೊಂಡ ಅವರು, ‘ನಡಿ ಹೋಗೋಣ’ ಎಂದು ನನ್ನ ಕಾರು ಹತ್ತಿಯೇ ಬಿಟ್ಟರು.  ಅಂದು ಕೂಡಾ ನಮ್ಮ ಮನೆಯಲ್ಲೇ ಉಳಿದುಕೊಂಡರು. ವಿದೇಶಾಂಗ ಸಚಿವರಾದ ಬಳಿಕವೂ ಅವರ ಸ್ನೇಹ, ಸರಳತೆಯಲ್ಲಿ ಎಳ್ಳಿನಿತೂ ವ್ಯತ್ಯಾಸ ಉಂಟಾಗಿರಲಿಲ್ಲ.

ಆಗ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿರಲಿಲ್ಲ. ವಾಜಪೇಯಿ ವಿದೇಶಾಂಗ ಸಚಿವರಾದ ಬಳಿಕ ಅವರ ಪ್ರಯತ್ನದಿಂದಾಗಿ ಉಭಯ ದೇಶಗಳ ತಂಡಗಳ ನಡುವೆ ಕ್ರಿಕೆಟ್‌ ಪಂದ್ಯ ಮತ್ತೆ ಆರಂಭವಾಗಿತ್ತು.  ‘ಹಿಂದೆ ಎರಡು ದೇಶಗಳು ಬಾಂಬ್‌ಗಳ ಜೊತೆ ಆಟ ಆಡುತ್ತಿದ್ದವು. ನಾವೀಗ ಕೆಂಪು ಚೆಂಡಿನಲ್ಲಿ ಆಟ ಆರಂಭಿಸಿದ್ದೇವೆ’ ಎಂದು ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಿದ್ದರು.

ವಾಜಪೇಯಿ ಹಾಗೂ ಎಲ್‌.ಕೆ.ಅಡ್ವಾಣಿ ಅವರು 1975ರಲ್ಲಿ ಜೂನ್‌ 25ರಂದು ಬೆಂಗಳೂರಿಗೆ ಬಂದಿದ್ದರು. ಅದೇ ದಿನ ಆಗಿನ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ನಮ್ಮ ನಾಯಕರಿಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಲಾಯಿತು. ಆ ಸಂದರ್ಭದಲ್ಲಿ ನಾನೂ ಬಂಧನಕ್ಕೊಳಗಾಗಿದ್ದೆ. ಆದರೆ, ನನ್ನನ್ನು ಬೆಳಗಾವಿ ಜೈಲಿನಲ್ಲಿಟ್ಟಿದ್ದರು. ಹಾಗಾಗಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಅವರ ಜೊತೆ ಜೈಲಿನಲ್ಲಿರಲಿಲ್ಲ.

ನಾನು ಅವರನ್ನು ಕೊನೆಯ ಬಾರಿ ಭೇಟಿ ಆಗಿದ್ದು 2006ರಲ್ಲಿ. ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ರಾಜ್ಯದ ಕೆಲವು ನಾಯಕರ ಜೊತೆ ನಾನು ನವದೆಹಲಿಯ ಅವರ ನಿವಾಸಕ್ಕೆ ಹೋಗಿದ್ದೆ. ಆಗಲೇ ಅವರ ಆರೋಗ್ಯ ಹದಗೆಟ್ಟಿತ್ತು. ನೆನಪಿನಶಕ್ತಿ ಮಾಸಿತ್ತು. ಯಾರನ್ನೂ ಅವರು ಗುರುತಿಸುತ್ತಿರಲಿಲ್ಲ. ಆದರೆ ಅಂದು ಅವರು ಹೆಸರು ಹೇಳಿ ನನ್ನ ಗುರುತು ಹಿಡಿದರು.  ಇದನ್ನು ಕಂಡು ಅಲ್ಲಿದ್ದವರಿಗೆಲ್ಲ ಅಚ್ಚರಿ ಉಂಟಾಗಿತ್ತು.

ರಾಜಕೀಯದಲ್ಲಿ ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ. ರಾಜಕೀಯವನ್ನು ಮೀರಿದ ಮೇರು ವ್ಯಕ್ತಿತ್ವ ಅವರದು. ಅವರು ಭಾಷಣಕ್ಕೆ ನಿಂತರೆಂದರೆ ಸಭೆಯಲ್ಲಿ ಸಾಸಿವೆ ಬಿದ್ದರೂ ಕೇಳುವಷ್ಟು ಮೌನ ಆವರಿಸುತ್ತಿತ್ತು. ಸಂಸ್ಕೃತ ಮಿಶ್ರಿತ ಹಿಂದಿಯಲ್ಲಿ ಅವರು ಭಾರತ ಮಾತೆಯ ವರ್ಣನೆ ಮಾಡುವ ವೈಖರಿ ಚಿತ್ತಾಕರ್ಷಕ. ಹಿಮಾಲಯದ ಗಿರಿಶಿಖರಗಳ ಮಾಲೆ ಧರಿಸಿದ ಭಾರತ ಮಾತೆಯ ಪಾದವನ್ನು ಸಮುದ್ರರಾಜ ತೊಳೆಯುವ ಬಗ್ಗೆ ಅವರು ಕಾವ್ಯಾತ್ಮಕ ಭಾಷೆಯಲ್ಲಿ ವಿವರಿಸುವ ರೀತಿ ಎಂಥವರಲ್ಲೂ ದೇಶಭಕ್ತಿಯ ಭಾವ ಉದ್ದೀಪಿಸುವಂತೆ ಮಾಡುತ್ತಿತ್ತು. ಬಹುಶಃ ಅವರಂತಹ ಇನ್ನೊಬ್ಬ ನಾಯಕನನ್ನು, ವಾಗ್ಪಟುವನ್ನು ಮತ್ತೆ ಕಾಣುವುದು ಸುಲಭವಲ್ಲ.

 ನಿರೂಪಣೆ: ಪ್ರವೀಣ್‌ ಕುಮಾರ್‌ ಪಿ.ವಿ.

 

ಇದನ್ನೂ ಓದಿ: 

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ​

* ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’​

ಅಜಾತಶತ್ರುವಿನ ಹೆಜ್ಜೆ ಗುರುತುಗಳು

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು