ಭಾವದಿಂದಲೇ ಬದುಕು ಶ್ರೀಮಂತ

7

ಭಾವದಿಂದಲೇ ಬದುಕು ಶ್ರೀಮಂತ

Published:
Updated:

ಹಣ-ಆಸ್ತಿ, ವಸ್ತು-ಒಡವೆಗಳಿಂದ ಬದುಕು ಸಿರಿವಂತಗೊಳ್ಳುವುದಿಲ್ಲ. ಕೇವಲ ಅವುಗಳಿಗಾಗಿ ಮಾತ್ರ ನಮ್ಮ ಬದುಕು ಎನ್ನಬಾರದು. ಬದುಕಿಗಾಗಿ ಅವುಗಳನ್ನು ಬಳಸಿಕೊಳ್ಳುವುದು ತಪ್ಪಲ್ಲ. ಅವುಗಳಿಗಾಗಿಯೇ ಬದುಕನ್ನು ಕಳೆದುಕೊಳ್ಳಬಾರದು. ಬದುಕೇ ಹೋದ ಮೇಲೆ ಅವುಗಳನ್ನು ತೆಗೆದುಕೊಂಡು ಮಾಡುವುದಾದರೂ ಏನು ?

ಬೆಲೆ ಇಲ್ಲದ ವಸ್ತುಗಳಿಗೆ ನಾವು ಹೆಚ್ಚು ಬೆಲೆ ಕೊಡುತ್ತೇವೆ. ಅನ್ನ ಹಸಿವನ್ನು ನೀಗಿಸಬಹುದೇ ವಿನಃ, ಬಂಗಾರ ಆ ಕೆಲಸ ಮಾಡಲಾರದು. ಪಕ್ಷಿಗೆ ಒಂದು ಹಣ್ಣು ಕೊಟ್ಟರೆ ಅದು ಖುಷಿಯಿಂದ ತಿನ್ನುತ್ತದೆ. ಅದೇ ಬಂಗಾರ ಕೊಟ್ಟು, ಇದು ಬಹಳ ಬೆಲೆಯುಳ್ಳದ್ದು ತೆಗೆದುಕೋ ಎಂದರೇ, ಪಕ್ಷಿ ಆ ಕಡೆಗೆ ತಿರುಗಿಯೂ ನೋಡಲಾರದು. ಏಕೆಂದರೇ ಅದಕ್ಕೆ ಚೆನ್ನಾಗಿ ಗೊತ್ತಿದೆ. ಬಂಗಾರದಲ್ಲಿ ರುಚಿಯೂ ಇಲ್ಲ, ರಸವೂ ಇಲ್ಲ ಎಂದು. ಪಕ್ಷಿಯ ದೃಷ್ಟಿಯಲ್ಲಿ ಬಂಗಾರಕ್ಕೆ ಯಾವ ಬೆಲೆಯೂ ಇಲ್ಲ.

ದಾಸರು ಹಾಡಿದಂತೆ, ಎಲ್ಲಾ ಮಾಡುವುದು ಹೊಟ್ಟೆಗಾಗಿ-ಗೇಣು ಬಟ್ಟೆಗಾಗಿ. ಇದನ್ನು ಬಿಟ್ಟು ಮಿಕ್ಕ ಸಂಪತ್ತುಗಳು ಸಂಪತ್ತುಗಳೇ ಅಲ್ಲ. ಸಂಪತ್ತಲ್ಲದ ಸಂಪತ್ತಿಗಾಗಿ ಘನಘೋರ ಯುದ್ಧಗಳೇ ಆಗಿವೆ. ಸಾಮ್ರಾಜ್ಯಗಳೇ ಉರುಳಿವೆ. ಬದುಕು ಬರಿದಾಗಿದೆ. ಜೀವನವೇ ಮುಗಿದ ಮೇಲೆ ಏನಿದ್ದರೇನು ?

ಕಿಸೆ ತುಂಬಿರುವವನಿಗೆ ಇಲ್ಲಿ ಬಹಳ ಬೆಲೆ. ಮೈ-ಕೈ ತುಂಬಿಕೊಂಡ ಜಟ್ಟಿಗೆ ಹಣವಂತನಷ್ಟು ಬೆಲೆ ಇಲ್ಲ.
ದೇಹ-ಬುದ್ಧಿಗಳ ಜತೆಗೆ ಭಾವ ತುಂಬಬೇಕು. ಭಾರಿ ಮಹಲ್‌ಗಳಲ್ಲಿ ವಾಸಿಸುವ ಬಡವರೂ ಇದ್ದಾರೆ. ಗುಡಿಸಲುಗಳಲ್ಲಿರುವ ಸಿರಿವಂತರೂ ಇದ್ದಾರೆ. ಇದಕ್ಕೆಲ್ಲಾ ಕಾರಣ ಅವರವರ ಭಾವ. ತೃಪ್ತಿಕರವಾದ ಭಾವ ಮನುಷ್ಯನನ್ನು ಸಿರಿವಂತನನ್ನಾಗಿಸುತ್ತದೆ. ಸುಖ-ಶಾಂತಿ-ಸಮಾಧಾನಗಳನ್ನು ಕೊಡುತ್ತದೆ. ಬೇಕು ಎನ್ನುವವನೇ ಬಡವ. ಸಾಕು ಎನ್ನುವವನೇ ಶ್ರೀಮಂತ. ನಾನು ಬ್ರಹ್ಮ ಎಂದು ಭಾವಿಸುವವನು ಬ್ರಹ್ಮನೇ ಆಗಿ ಬಿಡುತ್ತಾನೆ. ಅದು ಭಾವಕ್ಕಿರುವ ಶಕ್ತಿ -ಸಾಮರ್ಥ್ಯ.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !