ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕರ ಶೆಟ್ಟಿಗೆ 59,392 ಮತ

ಬಿಜೆಪಿ ಅಭ್ಯರ್ಥಿಗೆ 32,750 ಮತಗಳ ಅಂತರದ ದಾಖಲೆ ಗೆಲುವು
Last Updated 16 ಮೇ 2018, 12:28 IST
ಅಕ್ಷರ ಗಾತ್ರ

ಕುಮಟಾ: ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ 59,392 ಮತ ಪಡೆದು ಭರ್ಜರಿ ಗೆಲುವು ದಾಖಲಿಸಿದರು. ಸಮೀಪದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಶಾರದಾ ಶೆಟ್ಟಿ ಅವರನ್ನು 32,750 ಮತಗಳ ದಾಖಲೆಯ ಅಂತರದಿಂದ ಅವರು ಸೋಲಿಸಿದ್ದಾರೆ.

2013ರ ಚುನಾವಣೆಯಲ್ಲಿ ದಿನಕರ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಅವರ ಎದುರು 420 ಮತಗಳಿಂದ ಸೋತಿದ್ದರೆ, 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಮೋಹನ ಶೆಟ್ಟಿ ಅವರ ವಿರುದ್ಧ 20 ಮತಗಳ ದಾಖಲೆ ಅಂತರದಿಂದ ಗೆದ್ದಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ 26,642, ಬಿಜೆಪಿ ಟಿಕೆಟ್ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೂರಜ್ ನಾಯ್ಕ ಸೋನಿ 20,274, ಜೆಡಿಎಸ್ ಅಭ್ಯರ್ಥಿ ಪ್ರದೀಪ ನಾಯಕ 16,561 ಇನ್ನೊಬ್ಬ ಬಿಜೆಪಿ ಟಿಕೆಟ್ ವಂಚಿತ ಸ್ವತಂತ್ರ ಅಭ್ಯರ್ಥಿಯಾಗಿದ್ದ ಯಶೋಧರಾ ನಾಯ್ಕ 11,512 ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕೃಷ್ಣ ಗೌಡ 5,089 ಮತಗಳನ್ನು ಪಡೆದಿದ್ದಾರೆ.

ನೂತನ ಶಾಸಕ ದಿನಕರ ಶೆಟ್ಟಿ ಅವರ ಗೆಲುವಿನ ಅಂತರ ಸೋತ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಅವರು
ಪಡೆದ ಮತಗಳಿಂತ 6,108 ರಷ್ಟು ಹೆಚ್ಚಾಗಿದೆ. ದಿನಕರ ಶೆಟ್ಟಿ ಮತ ಪಡೆಯುವಲ್ಲಿ ಮುಂದಿದ್ದಾರೆ ಎಂಬ ಸುದ್ದಿ ತಿಳಿದ ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ ಎಣಿಕೆ ಕೇಂದ್ರಕ್ಕೆ ಹೋಗುವ ಹೆಗಡೆ ರಸ್ತೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿ ಮೋದಿ ಪರವಾದ ಘೋಷಣೆಗಳನ್ನು ಕೂಗಿದರು. ಇದರಿಂದ 2ಗಂಟೆ ಸಂಚಾರಕ್ಕೆ ತೊಂದರೆ ಉಂಟಾಯಿತು. ನಂತರ ದಿನಕರ ಶೆಟ್ಟಿ ಬೆಂಬಲಿಗಾರದ ದಾಮೋದರ ನಾಯ್ಕ, ಕುಮಾರ ಕವರಿ, ಪಕ್ಷದ ತಾಲ್ಲೂಕು ಘಟಕ ಅಧ್ಯಕ್ಷ ಕುಮಾರ ಮಾರ್ಕಾಂಡೆ ಅರೊಂದಿಗೆ ಬಂದು ಕಾರ್ಯಕರ್ತರೊಂದಿಗೆ ಸಂತಸ ಹಂಚಿಕೊಂಡ ನಂತರ ವಾಹನ ದಟ್ಟಣೆ ಕಡಿಮೆಯಾಯಿತು.

ಅಭ್ಯರ್ಥಿಗಳ ಬೆಂಬಲಿಗರು ಹೆಗಡೆ ಕ್ರಾಸ್ ಬಳಿ ಜಮಾಯಿಸಿದ್ದರಿಂದ ಸಂಚಾರ ಸುಗಮಗೊಳಿಸಲು ಪೊಲೀ ಸರು ಪರದಾಡಿದರು.

ಮತ ಯಂತ್ರ ದೋಷದ ಅನುಮಾನ: ‘ದಿನಕರ ಶೆಟ್ಟಿ ಅವರ ಗೆಲುವಿನ ಅಂತರ 32,750 ಆಗಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಅಂತರ 2ರಿಂದ 3 ಸಾವಿರ ಇದ್ದರೆ ಒಪ್ಪಿಕೊಳ್ಳಬಹುದಿತ್ತು. ಮಂತ್ರ ಯಂತ್ರ ದೋಷದಿಂದ ಹೀಗಾಗಿರುವ ಸಾಧ್ಯತೆ ಇದೆ. ನಾನು ಕಳೆದ ಐದು ವರ್ಷಗಳಲ್ಲಿ ಸಾವಿರಾರು ಕೋಟಿಯಷ್ಟು ಮೊತ್ತದ ಅಭಿವೃದ್ಧಿ ಕಾಮಗಾರಿ ತಂದರೂ ಜನ ತಿರಸ್ಕರಿಸಿದ್ದು ಆಶ್ಚರ್ಯ ಉಂಟಾಗಿದೆ. ಇಂಥ ಸೋಲು ಅನುಭವಿಸಲು ನಾನು ಬೆಂಗಳೂರಿನಲ್ಲಿ ಸಚಿವರ, ಅಧಿಕಾರಗಳ ಕಚೇರಿ ಎದುರು ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಕಾದು ಕೂತು ಕೆಲಸ ಮಾಡಿಸಿಕೊಳ್ಳಬೇಕಾದ ಅಗತ್ಯವಿತ್ತೇ ಎನಿಸುತ್ತದೆ’ ಎಂದು ಶಾರದಾ ಶೆಟ್ಟಿ ಅವರು ನೋವು ವ್ಯಕ್ತಪಡಿಸಿದರು.

32 ಸಾವಿರ ಮತ ನಿರೀಕ್ಷೆ: ಬಿಜೆಪಿ ಟಿಕೆಟ್ ವಂಚಿತ ಸ್ವಂತ್ರ ಅಭ್ಯರ್ಥಿ ಸೂರಜ್ ನಾಯ್ಕ ಮಾತನಾಡಿ, ‘ಹಿಂದುತ್ವದ ಬಗ್ಗೆ ಹೋರಾಟ ನಡೆಸಿದ್ದ ನನಗೆ 32 ಸಾವಿರ ಮತಗಳ ನಿರೀಕ್ಷೆಯಿತ್ತು’ ಎಂದರು.

ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಯಶೋಧರ ನಾಯ್ಕ, ‘ನಾನು ರಚಿಸಿರುವ ಮಹಿಳಾ ಸ್ವಸಹಾಯ ಸಂಘದ ಸದ್ಯರು ನನಗೆ ಬೆಂಬಲ ನೀಡಲಿಲ್ಲ ಎನ್ನುವುದು ನನಗೆ ಬಿದ್ದ ಮತಗಳಿಂದ ಸಾಬೀತಾಗಿದೆ’ ಎಂದರು.

ಬಿಜೆಪಿ ಮುಖಂಡ ದಿನಕರ ಶೆಟ್ಟಿ ಅವರ ಮೆರವಣಿಗೆ ನಡೆಯುತ್ತಿದ್ದರೆ ಇನ್ನೊಂದೆಡೆ ಪಕ್ಷದ ಕಾರ್ಯಕರ್ತರು ಲಾಡು ಹಂಚಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT