ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 31ರೊಳಗೆ ಪಂಪ್‌ವೆಲ್‌, ತೊಕ್ಕೊಟ್ಟು ಮೇಲ್ಸೇತುವೆ

ಕೇಂದ್ರ ರಸ್ತೆ ಸಾರಿಗೆ, ಬಂದರು ಸಚಿವ ನಿತಿನ್‌ ಗಡ್ಕರಿ ಭರವಸೆ
Last Updated 6 ಮಾರ್ಚ್ 2019, 5:58 IST
ಅಕ್ಷರ ಗಾತ್ರ

ಮಂಗಳೂರು: ನಗರದ ಜನತೆಯನ್ನು ಬಹಳ ದಿನಗಳಿಂದ ಕಾಡುತ್ತಿರುವ ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಗಳನ್ನು ಮೇ 31ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಬಂದರು ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದರು.

ಕುಳಾಯಿ ಸರ್ವ ಋತು ಮೀನುಗಾರಿಕಾ ಬಂದರು ಮತ್ತು ₹3,728 ಕೋಟಿ ವೆಚ್ಚದ ಎರಡು ರಸ್ತೆ ಹಾಗೂ ಒಂದು ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು, ಪಣಂಬೂರಿನ ಎನ್‌ಎಂಪಿಟಿಯ ಜವಾಹರ ಲಾಲ್‌ ನೆಹರೂ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಮಂಗಳೂರಿನ ಜನರಿಗೆ ತುಂಬಾ ಸಮಸ್ಯೆ ಸೃಷ್ಟಿಸುತ್ತಿರುವ ಎರಡು ಯೋಜನೆಗಳ ಬಗ್ಗೆ ಸಂಸದ ನಳಿನ್‌ಕುಮಾರ್‌ ಕಟೀಲ್‌ ಚಿಂತಾಕ್ರಾಂತರಾಗಿದ್ದಾರೆ. ಮಹಾವೀರ ವೃತ್ತ (ಪಂಪ್‌ವೆಲ್‌) ಮತ್ತು ತೊಕ್ಕೊಟ್ಟು ಮೇಲ್ಸೇತುವೆಗಳ ನಿರ್ಮಾಣದಲ್ಲಿನ ವಿಳಂಬದಿಂದ ಜನರಿಗೆ ತೊಂದರೆ ಆಗಿದೆ. ಈ ಬಗ್ಗೆ ನಳಿನ್‌ ಹಲವು ಬಾರಿ ನನ್ನ ಬಳಿ ಪ್ರಸ್ತಾಪಿಸಿದ್ದಾರೆ. ಎರಡೂ ಕಾಮಗಾರಿಗಳು ಮೇ 31ರ ಮುನ್ನ ಪೂರ್ಣಗೊಳ್ಳಲಿವೆ’ ಎಂದು ತಿಳಿಸಿದರು.

‘ಈ ವಿಚಾರದಲ್ಲಿ ಖುದ್ದಾಗಿ ನಾನು ಮಧ್ಯಪ್ರವೇಶ ಮಾಡಿದ್ದೇನೆ. ತೊಕ್ಕೊಟ್ಟು ಮೇಲ್ಸೇತುವೆ ಮಾರ್ಚ್‌ 31ರ ಮೊದಲು ಪೂರ್ಣಗೊಳ್ಳಲಿದೆ. ಮಹಾವೀರ ವೃತ್ತದ ಮೇಲ್ಸೇತುವೆ ಮೇ 31ರೊಳಗೆ ಸಿದ್ಧವಾಗಲಿದೆ’ ಎಂದು ಗಡ್ಕರಿ ಪ್ರಕಟಿಸಿದರು.

ದಿಕ್ಕು ಬದಲಾಗಲಿದೆ: ಮೂಲ್ಕಿಯಿಂದ ತೊಕ್ಕೊಟ್ಟುವರೆಗೆ ₹2,500 ಕೋಟಿ ವೆಚ್ಚದಲ್ಲಿ 91.20 ಕಿಲೋಮೀಟರ್‌ ಉದ್ದದ ಮಂಗಳೂರು ಬೈಪಾಸ್‌ ರಸ್ತೆ ನಿರ್ಮಾಣವಾಗಲಿದೆ. ಇದರಿಂದ ಮಂಗಳೂರು ನಗರದ ಸಂಚಾರ ದಟ್ಟಣೆ ಗಣನೀಯವಾಗಿ ತಗ್ಗಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಕಾರ್ಕಳದ ಸಾಣೂರಿನಿಂದ ಮಂಗಳೂರಿನ ಬಿಕರ್ನಕಟ್ಟೆಯವರೆಗೆ ₹1,163 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಬಳಿ ಫಲ್ಗುಣಿ ನದಿಗೆ ₹65 ಕೋಟಿ ವೆಚ್ಚದಲ್ಲಿ ಆರು ಪಥಗಳ ಸೇತುವೆ ನಿರ್ಮಿಸಲಾಗುವುದು. ಈ ಎಲ್ಲ ಕಾಮಗಾರಿಗಳ ಫಲವಾಗಿ ಮಂಗಳೂರಿನ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಹೇಳಿದರು.

ಇಂದಿರಾ ಕಾಲದ ಪ್ರಸ್ತಾವ:
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಮಾತನಾಡಿ, ‘ನವ ಮಂಗಳೂರು ಬಂದರು ಉದ್ಘಾಟನೆಗೆ ಬಂದಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ನಿರ್ವಸಿತ ಮೀನುಗಾರರ ಅನುಕೂಲ
ಕ್ಕಾಗಿ ಹೊಸ ಮೀನುಗಾರಿಕಾ ಬಂದರು ನಿರ್ಮಾಣದ ಭರವಸೆ ನೀಡಿದ್ದರು. ಈಗ ಅದು ಅನುಷ್ಠಾನಕ್ಕೆ ಬರುತ್ತಿರುವುದು ಸಂತಸದ ಸಂಗತಿ. ಮೀನುಗಾರರು ಗಾಬರಿಪಡುವ ಅಗತ್ಯವಿಲ್ಲ. ಭವಿಷ್ಯದ ತಲೆಮಾರುಗಳಿಗೆ ಇದರಿಂದ ದೊಡ್ಡ ಲಾಭ ಆಗಲಿದೆ’ ಎಂದರು.

ಇದೇ ಮಾದರಿಯಲ್ಲಿ ಕೋಟೆಪುರದಲ್ಲೂ ಮೀನುಗಾರಿಕಾ ಬಂದರು ನಿರ್ಮಿಸಬೇಕು. ನಗರದಲ್ಲಿನ ಸಂಚಾರ ದಟ್ಟಣೆ ತಪ್ಪಿಸುವುದಕ್ಕಾಗಿ ಕೋಟೆಪುರದಿಂದ ಮಂಗಳೂರು ಬಂದರಿಗೆ ಸೇತುವೆ ನಿರ್ಮಿಸಬೇಕು. ಮಂಗಳೂರಿನಿಂದ ಕೇರಳಕ್ಕೆ ನೇರವಾದ ರಸ್ತೆ ನಿರ್ಮಿಸಬೇಕು. ಈ ಯೋಜನೆಗಳ ಸಾಕಾರಕ್ಕೆ ಎಲ್ಲ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

₹16,000 ಕೋಟಿ ಅನುದಾನ:
ಸಂಸದ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ‘ಸಂಸದನಾಗಿ ಹತ್ತು ವರ್ಷ ಪೂರೈಸುತ್ತಿದ್ದೇನೆ. ಮೊದಲ ಐದು ವರ್ಷ ವಿರೋಧ ಪಕ್ಷದಲ್ಲಿದ್ದೆ. ಈಗ ಆಡಳಿತ ಪಕ್ಷದಲ್ಲಿದ್ದೇನೆ. ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ₹ 16,000 ಕೋಟಿ ಅನುದಾನ ತಂದಿದ್ದೇನೆ. ಹತ್ತು ವರ್ಷಗಳ ಹಿಂದೆ ಇದ್ದ ಗುರಿಯಲ್ಲಿ ಶೇಕಡ 50ರಷ್ಟನ್ನು ಸಾಧಿಸಿದ್ದೇನೆ’ ಎಂದರು.

ಕುಳಾಯಿ ಬಂದರು ನಿರ್ಮಾಣಕ್ಕೆ ರಾಜ್ಯ ಸರ್ಕಾರ 11 ಎಕರೆ ಜಮೀನು ಒದಗಿಸಿದೆ. ಶ್ರೀನಿವಾಸ ಮಲ್ಯರಿಂದ ಈಗಿನವರೆಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ಈ ಯೋಜನೆಗಳಿಗೆ ಕಾರಣ. ಮುಂದೆಯೂ ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಎನ್‌ಎಂಪಿಟಿ ಅಧ್ಯಕ್ಷ ಕೃಷ್ಣಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಆರ್‌.ಕೆ.ಸೂರ್ಯವಂಶಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳ ವಿವರ ನೀಡಿದರು. ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಾದ ಗಣೇಶ್ ಹೊಸಬೆಟ್ಟು, ಪುರುಷೋತ್ತಮ ಚಿತ್ರಾಪುರ, ರಘುವೀರ, ಸುಮಿತ್ರಾ, ಸುಧೀರ್‌ ಶೆಟ್ಟಿ, ಮೊಗವೀರ ಮಹಾಸಭಾ ಅಧ್ಯಕ್ಷ ಜಯ ಸಿ.ಕೋಟ್ಯಾನ್‌ ಉಪಸ್ಥಿತರಿದ್ದರು.

ಡಾಂಬರೀಕರಣಕ್ಕೆ ಸಿದ್ಧತೆ
ಸಾಣೂರು– ಬಿಕರ್ನಕಟ್ಟೆ ಹೆದ್ದಾರಿಯಲ್ಲಿ ತುರ್ತು ಡಾಂಬರೀಕರಣಕ್ಕೆ ₹ 20 ಕೋಟಿ ಬಿಡುಗಡೆ ಮಾಡಲಾಗಿದೆ. ಬಿ.ಸಿ.ರೋಡ್‌ನಿಂದ ಸುರತ್ಕಲ್‌ವರೆಗಿನ ರಸ್ತೆಯ ಡಾಂಬರೀಕರಣಕ್ಕೂ ಅನುದಾನ ಬಿಡುಗಡೆ ಮಾಡಲಾಗಿದೆ. ಸಂಪಾಜೆ– ಮಾಣಿ ಹೆದ್ದಾರಿಯ ಕಾಮಗಾರಿಗೂ ಕೇಂದ್ರ ಸರ್ಕಾರ ₹ 20 ಕೋಟಿ ಒದಗಿಸಿದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT