ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 202 ಕೋಟಿ
Last Updated 7 ಡಿಸೆಂಬರ್ 2018, 16:39 IST
ಅಕ್ಷರ ಗಾತ್ರ

ಜಂಬೂರು (ಕೊಡಗು ಜಿಲ್ಲೆ): ಕೊಡಗು ಜಿಲ್ಲೆಯ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಚಾಲನೆ ನೀಡಿದರು.

ಸಂತ್ರಸ್ತರಿಗೆ ₹ 9.85 ಲಕ್ಷ ವೆಚ್ಚದಲ್ಲಿ ಎರಡು ಮಲಗುವ ಕೋಣೆಯುಳ್ಳ ಮನೆ ನಿರ್ಮಿಸಿಕೊಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಜಂಬೂರು ಪುನರ್ವಸತಿ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.

ಮುಖ್ಯಮಂತ್ರಿ ಕುಮಾರಸ್ವಾಮಿ, ‘ಪರಿಹಾರ ನಿಧಿಗೆ ಇದುವರೆಗೂ ₹ 202 ಕೋಟಿಯಷ್ಟು ನೆರವು ಬಂದಿದೆ. ಕೇಂದ್ರವು ₹ 546 ಕೋಟಿ ನೆರವು ನೀಡಿದ್ದು ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 8 ಜಿಲ್ಲೆಗಳಿಗೂ ಈ ಹಣ ಬಳಕೆ ಮಾಡಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದ ಹಣವನ್ನು ಬೇರೆ ಯಾವುದೇ ಅಭಿವೃದ್ಧಿ ಕಾರ್ಯಕ್ಕೂ ಬಳಕೆ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು.

‘ಜಮೀನು ಕಳೆದುಕೊಂಡ ಬೆಳೆಗಾರರಿಗೆ ಪರಿಹಾರ ನೀಡುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‌ನ ₹ 2 ಲಕ್ಷ, ಸಹಕಾರಿ ಬ್ಯಾಂಕ್‌ನ ₹ 1 ಲಕ್ಷ ಸಾಲ ಮನ್ನಾ ಆಗಲಿದ್ದು, ಬೆಳೆಗಾರರಿಗೂ ನೆರವಾಗಲಿದೆ’ ಎಂದು ಹೇಳಿದರು.

‘ಸಂತ್ರಸ್ತರಿಗೆ ಬಂದಿರುವ ಆಹಾರ ಪದಾರ್ಥಗಳು ದುರುಪಯೋಗ ಆಗಿಲ್ಲ. ಅದನ್ನು ಗೋದಾಮಿನಲ್ಲಿ ಇಡಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

‘ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಿರುವ ಅನುದಾನ ತೃಪ್ತಿ ತಂದಿಲ್ಲ. ರಾಜ್ಯದಲ್ಲಿ ಮಳೆಯಿಂದ ದೊಡ್ಡ ಅನಾಹುತ ಸಂಭವಿಸಿತ್ತು. ಎರಡು ಭಾರಿ ಪ್ರಧಾನಿಯನ್ನು ಭೇಟಿ ಮಾಡಿ ₹ 2 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇರಳ ಮಾದರಿಯಲ್ಲಿ ಪ್ಯಾಕೇಜ್‌ ನಿರೀಕ್ಷೆಯಲ್ಲಿದ್ದೆವು. ಅದು ಹುಸಿಯಾಗಿದೆ’ ಎಂದು ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಸಂತ್ರಸ್ತರಿಗೆ ಮಾಸಿಕ ಬಾಡಿಗೆ ಭತ್ಯೆ ಚೆಕ್‌ (₹ 10 ಸಾವಿರ), ಮನೆ ನಿರ್ಮಾಣದ ಪತ್ರ ವಿತರಣೆ ಮಾಡಲಾಯಿತು.

ಕೊಡಗು ಮರುನಿರ್ಮಾಣ ‘ಅನುದಾನ’ದ ವಾಗ್ವಾದ

ಸಂತ್ರಸ್ತರ ಮನೆ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಕೊಡಗು ಮರು ನಿರ್ಮಾಣಕ್ಕೆ ನೀಡಿದ್ದ ಅನುದಾನ ಕುರಿತು ಶುಕ್ರವಾರ ಸಂಸದ ಪ್ರತಾಪ ಸಿಂಹ ಹಾಗೂ ಮುಖ್ಯಮಂತ್ರಿ
ಎಚ್‌.ಡಿ. ಕುಮಾರಸ್ವಾಮಿ ನಡುವೆ ವಾಗ್ವಾದ ನಡೆಯಿತು.

ಕೇಂದ್ರ ಸರ್ಕಾರವನ್ನುಸಮರ್ಥಿಸಿಕೊಳ್ಳಲು ಪ್ರತಾಹ ಸಿಂಹ ಮುಂದಾದ ವೇಳೆ ಸಿಟ್ಟಾದ ಮುಖ್ಯಮಂತ್ರಿ, ಅವರನ್ನು ವೇದಿಕೆ ಮೇಲೆಯೇ ಪ್ರಶ್ನಿಸಿದರು. ಪಕ್ಕದಲ್ಲಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಅವರು ಕುಮಾರಸ್ವಾಮಿ ಅವರನ್ನು ಸಮಾಧಾನ ಪಡಿಸಿಲು ಪ್ರಯತ್ನಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸಹ ಕ್ಷಣಕಾಲ ಮೌನಕ್ಕೆ ಶರಣಾದರು.

‘ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಜಿಲ್ಲೆಯ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ನಾನೂ, ಮುಖ್ಯಮಂತ್ರಿ ಎದುರೇ ಈ ಮಾತು ಹೇಳುತ್ತಿರುವೆ. ಪ್ರಾಕೃತಿಕ ವಿಕೋಪ ಸಂಭವಿಸಿದ್ದ ದಿನವೇ ಮಕ್ಕಂದೂರಿಗೆ ಬಂದಿದ್ದೆ. ಅಲ್ಲಿಂದಲೇ ರಕ್ಷಣಾ ಸಚಿವರೊಂದಿಗೆ ಚರ್ಚಿಸಿ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಕಳುಹಿಸುವಂತೆ ವಿನಂತಿಸಿದ್ದೆ. ಮರು ದಿನವೇ ಜಿಲ್ಲೆಗೆ ಸೇನೆಯ ರಕ್ಷಣಾ ಸಿಬ್ಬಂದಿ ಬಂದರು’ ಎಂದು ಪ್ರತಾಪ ಸಿಂಹ ಹೇಳಿದರು.

‘ಕೇಂದ್ರ ನೀಡಿರುವ ₹ 546 ಕೋಟಿ ಅನುದಾನದಲ್ಲಿ ಸಿಂಹಪಾಲು ಕೊಡಗಿಗೆ ನೀಡಬೇಕು.ಕೇರಳ ರಾಜ್ಯದಲ್ಲಿ 5 ಜಿಲ್ಲೆಗಳು ಸಂಪೂರ್ಣ ಮುಳುಗಿದ್ದವು. ಅಲ್ಲಿಗೆ ₹ 500 ಕೋಟಿ ನೆರವು ನೀಡಿದ್ದು ತ್ವರಿತ ಕಾಮಗಾರಿಗಷ್ಟೆ. ಅಲ್ಲಿಗೂ ವಿಶೇಷ ಪ್ಯಾಕೇಜ್‌ ನೀಡಿಲ್ಲ’ ಎಂದು ಹೇಳಿದರು.

‘ಶಾಲೆಗೆ ಮಗುವನ್ನು ಸೇರಿಸುವಾಗ ಅಪ್ಪ, ಅಮ್ಮ ಯಾರೆಂದು ಬರೆಸುತ್ತೇವೆ. ಹಾಗೆಯೇ ಅನುದಾನದ ಅಪ್ಪ–ಅಮ್ಮ ಯಾರು ಎಂಬುದೂ ಜನರಿಗೆ ಗೊತ್ತಾಗಬೇಕು. ಅದಕ್ಕೆ ಕೇಂದ್ರದ ನೆರವು ಪ್ರಸ್ತಾಪಿಸುತ್ತಿರುವೆ’ ಎಂದು ಪ್ರತಾಪ ಸಿಂಹ ಅವರ ಮಾತಿಗೆ ಮುಖ್ಯಮಂತ್ರಿ ಕೋಪಗೊಂಡರು.

ಬಳಿಕ ಕುಮಾರಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರ ಹೆಲಿಕಾಪ್ಟರ್‌ ಅನ್ನು ಪುಕ್ಕಟ್ಟೆಯಾಗಿ ನೀಡುವುದಿಲ್ಲ. ಅದಕ್ಕೆ ಹಣ ಪಾವತಿಸಬೇಕು. ಹೈಜಾಕ್‌ ಮಾಡಿ ಸಂತ್ರಸ್ತರಲ್ಲಿ ಗೊಂದಲ ಸೃಷ್ಟಿಸಬಾರದು. ಪ್ರತಾಪ ಸಿಂಹ ಅವರದ್ದು ತಪ್ಪಿಲ್ಲ. ಕೇಂದ್ರವನ್ನು ಸಮರ್ಥಿಸುವುದು ಅವರ ಕೆಲಸ ಅಲ್ಲವೇ? ಆದರೆ, ಸಂತ್ರಸ್ತರಿಗೆ ವಾಸ್ತವ ತಿಳಿಸಬೇಕು’ ಎಂದು ಎಚ್ಚರಿಸಿದರು. ಬಳಿಕ ಪ್ರತಾಪ ಸಿಂಹ ಮೌನ ವಹಿಸಿದರು. ಸಂಸದರ ವರ್ತನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಬೇಸರ ವ್ಯಕ್ತಪಡಿಸಿದರು.

**

ಮುಖ್ಯಾಂಶಗಳು

ಅನುದಾನದ ಅಪ್ಪ– ಅಮ್ಮ ಗೊತ್ತಾಗಬೇಕು

ಸಂಸದರ ಮಾತಿಗೆ ಕೋಪಗೊಂಡ ಸಿ.ಎಂ

ಸಂತ್ರಸ್ತರ ವಿಚಾರದಲ್ಲೂ ರಾಜಕೀಯ: ಸಾ.ರಾ. ಮಹೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT