ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ‘ಅನುದಾನ’ದ ವಾಗ್ವಾದ

ಮುಖ್ಯಮಂತ್ರಿ ತಿರುಗೇಟಿಗೆ ಮೌನಕ್ಕೆ ಶರಣಾದ ಪ್ರತಾಪ ಸಿಂಹ
Last Updated 7 ಡಿಸೆಂಬರ್ 2018, 16:20 IST
ಅಕ್ಷರ ಗಾತ್ರ

ಜಂಬೂರು (ಕೊಡಗು ಜಿಲ್ಲೆ): ಸಂತ್ರಸ್ತರ ಮನೆ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಕೊಡಗು ಮರು ನಿರ್ಮಾಣಕ್ಕೆ ನೀಡಿದ್ದ ಅನುದಾನ ಕುರಿತು ಶುಕ್ರವಾರ ಸಂಸದ ಪ್ರತಾಪ ಸಿಂಹ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಡುವೆ ವಾಗ್ವಾದ ನಡೆಯಿತು.

ಕೇಂದ್ರ ಸರ್ಕಾರವನ್ನುಸಮರ್ಥಿಸಿಕೊಳ್ಳಲು ಪ್ರತಾಹ ಸಿಂಹ ಮುಂದಾದ ವೇಳೆ ಸಿಟ್ಟಾದ ಮುಖ್ಯಮಂತ್ರಿ, ಅವರನ್ನು ವೇದಿಕೆ ಮೇಲೆಯೇ ಪ್ರಶ್ನಿಸಿದರು. ಪಕ್ಕದಲ್ಲಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಅವರು ಕುಮಾರಸ್ವಾಮಿ ಅವರನ್ನು ಸಮಾಧಾನ ಪಡಿಸಿಲು ಪ್ರಯತ್ನಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸಹ ಕ್ಷಣಕಾಲ ಮೌನಕ್ಕೆ ಶರಣಾದರು.

‘ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಜಿಲ್ಲೆಯ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ನಾನೂ, ಮುಖ್ಯಮಂತ್ರಿ ಎದುರೇ ಈ ಮಾತು ಹೇಳುತ್ತಿರುವೆ. ಪ್ರಾಕೃತಿಕ ವಿಕೋಪ ಸಂಭವಿಸಿದ್ದ ದಿನವೇ ಮಕ್ಕಂದೂರಿಗೆ ಬಂದಿದ್ದೆ. ಅಲ್ಲಿಂದಲೇ ರಕ್ಷಣಾ ಸಚಿವರೊಂದಿಗೆ ಚರ್ಚಿಸಿ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಕಳುಹಿಸುವಂತೆ ವಿನಂತಿಸಿದ್ದೆ. ಮರು ದಿನವೇ ಜಿಲ್ಲೆಗೆ ಸೇನೆಯ ರಕ್ಷಣಾ ಸಿಬ್ಬಂದಿ ಬಂದರು’ ಎಂದು ಪ್ರತಾಪ ಸಿಂಹ ಹೇಳಿದರು.

‘3,603 ಸಂತ್ರಸ್ತರಿಗೆ ಎನ್‌ಡಿಆರ್‌ಎಫ್‌ ಅಡಿ ಪರಿಹಾರ ವಿತರಿಸಲಾಗಿದೆ. ಜನರಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಎಂದರೆ ತಿಳಿದಿಲ್ಲ. ಎನ್‌ಡಿಆರ್‌ಎಫ್‌ ಕೇಂದ್ರದ ಅನುದಾನ. ಅದರಲ್ಲಿ 840 ಮಂದಿಗೆ ತಲಾ 1 ಲಕ್ಷ ಪರಿಹಾರ ನೀಡಲಾಗಿದೆ. ಎಸ್‌ಡಿಆರ್‌ಎಫ್‌ನಲ್ಲೂ ಶೇ 75ರಷ್ಟು ಕೇಂದ್ರದ್ದೇ ಅನುದಾನ. ಕೇಂದ್ರದ ಹಣದಿಂದಲೇ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿದೆ’ ಎಂದು ತಿಳಿಸಿದರು.

‘ಕೇಂದ್ರ ನೀಡಿರುವ ₹ 546 ಕೋಟಿ ಅನುದಾನದಲ್ಲಿ ಸಿಂಹಪಾಲು ಕೊಡಗಿಗೆ ನೀಡಬೇಕು.ಕೇರಳ ರಾಜ್ಯದಲ್ಲಿ 5 ಜಿಲ್ಲೆಗಳು ಸಂಪೂರ್ಣ ಮುಳುಗಿದ್ದವು. ಅಲ್ಲಿಗೆ ₹ 500 ಕೋಟಿ ನೆರವು ನೀಡಿದ್ದು ತತ್ವರಿತ ಕಾಮಗಾರಿಗಷ್ಟೆ. ಅಲ್ಲಿಗೂ ವಿಶೇಷ ಪ್ಯಾಕೇಜ್‌ ನೀಡಿಲ್ಲ’ ಎಂದು ಹೇಳಿದರು.

‘ಶಾಲೆಗೆ ಮಗುವನ್ನು ಸೇರಿಸುವಾಗ ಅಪ್ಪ, ಅಮ್ಮ ಯಾರೆಂದು ಬರೆಸುತ್ತೇವೆ. ಹಾಗೆಯೇ ಅನುದಾನದ ಅಪ್ಪ–ಅಮ್ಮ ಯಾರು ಎಂಬುದೂ ಜನರಿಗೆ ಗೊತ್ತಾಗಬೇಕು. ಅದಕ್ಕೆ ಕೇಂದ್ರ ನೆರವು ಪ್ರಸ್ತಾಪಿಸುತ್ತಿರುವೆ’ ಎಂದು ಪ್ರತಾಪ ಸಿಂಹ ಅವರ ಮಾತಿಗೆ ಮುಖ್ಯಮಂತ್ರಿ ಕೋಪಗೊಂಡರು.

ಈ ಮಾತಿನಿಂದ ಸಿಟ್ಟಾದ ವಸತಿ ಸಚಿವ ಯು.ಟಿ.ಖಾದರ್‌ ಸಹ, ‘ಹಿಂದೆ ಗುಜರಾತ್‌ನಲ್ಲೂ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಅಲ್ಲಿನ ಸರ್ಕಾರ ಹೇಗೆಲ್ಲಾ ಸ್ಪಂದಿಸಿತ್ತು ಎಂಬುದು ದೇಶಕ್ಕೇ ತಿಳಿದಿದೆ. ಕೇಂದ್ರವನ್ನು ನಾವು ಕೇಳಿದ್ದು ಭಿಕ್ಷೆಯಲ್ಲ. ಜನರು ಪಾವತಿಸಿದ್ದ ತೆರಿಗೆ ಹಣವನ್ನು ಕೊಡಿ ಎಂದು ಮನವಿ ಮಾಡಿದ್ದೆವು’ ಎಂದು ಸಂಸದರಿಗೆ ತಿರುಗೇಟು ನೀಡಿದರು.

ಬಳಿಕ ಕುಮಾರಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರ ಹೆಲಿಕಾಪ್ಟರ್‌ ಅನ್ನು ಪುಕ್ಕಟ್ಟೆಯಾಗಿ ನೀಡುವುದಿಲ್ಲ. ಅದಕ್ಕೆ ಹಣ ಪಾವತಿಸಬೇಕು. ಹೈಜಾಕ್‌ ಮಾಡಿ ಸಂತ್ರಸ್ತರಲ್ಲಿ ಗೊಂದಲ ಸೃಷ್ಟಿಸಬಾರದು. ಪ್ರತಾಪ ಸಿಂಹ ಅವರದ್ದು ತಪ್ಪಿಲ್ಲ. ಕೇಂದ್ರವನ್ನು ಸಮರ್ಥಿಸುವುದು ಅವರ ಕೆಲಸ ಅಲ್ಲವೇ? ಆದರೆ, ಸಂತ್ರಸ್ತರಿಗೆ ವಾಸ್ತವ ತಿಳಿಸಬೇಕು’ ಎಂದು ಎಚ್ಚರಿಸಿದರು. ಬಳಿಕ ಪ್ರತಾಪ ಸಿಂಹ ಮೌನಕ್ಕೆ ವಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಅವರು, ‘ಸರ್ಕಾರ ಇಷ್ಟೆಲ್ಲ ನೆರವು ನೀಡುತ್ತಿದ್ದರೂ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ಇದು ನೋವು ತರಿಸಿದೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT