ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಜಾತಿವಾದಿ, ನಾನು ರಾಷ್ಟ್ರವಾದಿ: ಕೆ.ಎಸ್. ಈಶ್ವರಪ್ಪ

ಬೆಳಗಾವಿಯಲ್ಲಿ ಹೇಳಿಕೆ
Last Updated 3 ಏಪ್ರಿಲ್ 2019, 8:42 IST
ಅಕ್ಷರ ಗಾತ್ರ

ಬೆಳಗಾವಿ: ‘ನಾನು ರಾಷ್ಟ್ರವಾದಿ, ಸಿದ್ದರಾಮಯ್ಯ ಜಾತಿವಾದಿ‌. ಇದನ್ನು ನೇರವಾಗಿ ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ. ಕುರುಬರ ಹೆಸರಲ್ಲಿ ಅವರು ಉದ್ದಾರವಾಗಿದ್ದಾರೆ’ ಎಂದು ಶಾಸಕ, ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯಗೆ ಜಾತಿ ಬಿಟ್ಟರೆ ಬೇರೆ ಗೊತ್ತಿಲ್ಲ. ಅವರು ಎಷ್ಟು ಜನ ಕುರುಬರಿಗೆ ಅನುಕೂಲ ಮಾಡಿದ್ದಾರೆ? ಎಚ್‌. ವಿಶ್ವನಾಥ್ ಹಾಗೂ ಸಿ.ಎಚ್. ವಿಜಯಶಂಕರ್‌ಗೆ ಮೋಸ ಮಾಡಿದ್ದಾರೆ. ಸದ್ಯ ವಿಜಯಶಂಕರ್‌ಗೆ ಮೈಸೂರಿನಲ್ಲಿ ಟಿಕೆಟ್‌ ಕೊಡಿಸಿದ ತೃಪ್ತಿಯಲ್ಲಿದ್ದಾರೆ. ಸೋಲುವ ಕಡೆಗಳಲ್ಲಿ ಕುರುಬರಿಗೆ ಟಿಕೆಟ್ ಕೊಡಿಸಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಯಾರಿಗೂ ಬೇಡವಾದ ಟಿಕೆಟನ್ನು ಕುರುಬರಿಗೆ ಕೊಡಿಸಿದ್ದಾರೆ’ ಎಂದು ಕುಟುಕಿದರು.

‘ನಾನು ಕುರುಬ ಸಮಾಜವೊಂದಕ್ಕೆ ನಾಯಕನಲ್ಲ. ಬಿಜೆಪಿ ಸರ್ಕಾರವಿದ್ದಾಗ ಹಿಂದುಳಿದವರು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅನೇಕ ಯೋಜನೆ ನೀಡಿದ್ದೆವು. ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಲಿ. ಹಿಂದುಳಿದವರಿಗೆ ನೀಡಿದ ಕೊಡುಗೆ ಕುರಿತು ಶ್ವೇತಪತ್ರ ಹೊರಡಿಸಲಿ. ಈ ವರ್ಗದವರಿಗೆ ನಮಗಿಂತ ಹೆಚ್ಚಿನ ಖರ್ಚನ್ನು ಮಾಡಿರುವುದನ್ನು ಅಂಕಿ–ಅಂಶಗಳ ಸಮೇತ ಸಾಬೀತುಪಡಿಸಿದರೆ, ಅವರು ಹೇಳಿದಂತೆ ಕೇಳುತ್ತೇನೆ’ ಎಂದು ಸವಾಲು ಹಾಕಿದರು.

‘ವೋಟ್‌ ಬ್ಯಾಂಕ್‌ಗಾಗಿ ಅವರು ಕುರುಬ ಜಾತಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಹಿಂದೆಯೂ ನಾವು ಆಪರೇಷನ್ ಕಮಲ ಮಾಡಿಲ್ಲ; ಹೀಗಾಗಿ ಮತ್ತೆ ಆರಂಭವಾಗುತ್ತದೆ ಎನ್ನುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳವಲ್ಲಿ ಆ ಪಕ್ಷಗಳು ವಿಫಲವಾಗಿವೆ. ಮುಂಬೈಗೆ ಹೋಗಿ ಬಂದ ಶಾಸಕರು ಈ ಸಮ್ಮಿಶ್ರ ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎಂದಿದ್ದರು. ಈಗಲೂ ಅನೇಕರಿಗೆ ಸರ್ಕಾರದ ಮೇಲೆ ತೃಪ್ತಿ ಇಲ್ಲ. ಅವರಲ್ಲಿ ಭಿನ್ನಮತ ಸ್ಫೋಟಗೊಳ್ಳುತ್ತಿದೆ. ಸಚಿವ ಜಿ.ಟಿ. ದೇವೇಗೌಡ ಕೂಡ ಅಸಮಾಧಾನ ಹೊರಹಾಕಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಅತೃಪ್ತ ಶಾಸಕರಿಗೆ ರಾಜೀನಾಮೆ ಅಂಗೀಕಾರದ ಭಯ ಇತ್ತು. ಈಗ, ಉಮೇಶ ಜಾಧವ ರಾಜೀನಾಮೆ ಅಂಗೀಕಾರ ಮಾಡಿರುವುದರಿಂದ, ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಎಷ್ಟು ಮಂದಿ ಎನ್ನುವುದನ್ನು ಹೇಳಲಾಗದು. ಆದರೆ, ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡುವುದು ಖಚಿತ. ಸಮ್ಮಿಶ್ರ ಸರ್ಕಾರ ತಾನಾಗಿಯೆ ಪತನವಾಗಲಿದೆ’ ಎಂದು ಭವಿಷ್ಯ ನುಡಿದರು.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಜಾತಿ ವಿಚಾರ ಪ್ರಸ್ತಾಪವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್, ಕಾಂಗ್ರೆಸ್‌ನವರು ನಮ್ಮನ್ನು ಜಾತಿವಾದಿಗಳು ಎನ್ನುತ್ತಾರೆ. ಈಗ ನಾಯ್ಡು, ಕುರುಬ, ಒಕ್ಕಲಿಗ ಜಾತಿ ವಿಷಯ ತಂದಿದ್ದು ಯಾರು? ಸಿದ್ದರಾಮಯ್ಯ, ಸಂಸದ ಎಲ್‌.ಆರ್. ಶಿವರಾಮೇಗೌಡ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಜಾತಿ ಬಗ್ಗೆ ಮಾತನಾಡುತ್ತಾರೆ. ನಮ್ಮನ್ನು ಕೋಮುವಾದಿಗಳು ಎನ್ನುತ್ತಾರೆ. ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದರು.

‘ಅಮೇಥಿಯಲ್ಲಿ ಹಿಂದೂಗಳು ತನ್ನನ್ನು ವಿರೋಧಿಸುತ್ತಿದ್ದಾರೆಂಬ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೇರಳಕ್ಕೂ ಬಂದಿದ್ದಾರೆ. ಅಲ್ಲಿ ಹೆಚ್ಚಿನ ಮುಸ್ಲಿಮರಿದ್ದಾರೆಂದು ಭಾವಿಸಿ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT