ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ₹ 722 ಕೋಟಿ ಬಾಕಿ

ಮೋಟಾರು ವಾಹನ ತೆರಿಗೆ ವಿನಾಯಿತಿಗೆ ವಾಯವ್ಯ ಸಾರಿಗೆ ಸಂಸ್ಥೆ ಮನವಿ
Last Updated 22 ಮಾರ್ಚ್ 2020, 20:45 IST
ಅಕ್ಷರ ಗಾತ್ರ

ಹಾವೇರಿ: ಬಸ್‌ ಪಾಸ್‌ಗೆ ಸಂಬಂಧಿಸಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೊಡಬೇಕಿರುವ ₹722 ಕೋಟಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರಿಂದ ಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ನೀಡಲಾಗುತ್ತಿದೆ. ಅಂಗವಿಕಲರಿಗೆ, ಅಂಧರಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಸ್ವಾತಂತ್ರ್ಯಯೋಧರ ವಿಧವೆಯರಿಗೆ ಉಚಿತ ಪಾಸ್‌ಗಳನ್ನು ಹಾಗೂ ಹಿರಿಯ ನಾಗರಿಕರಿಗೆ ಬಸ್‌ ಪ್ರಯಾಣ ದರದಲ್ಲಿ ಶೇ 25ರಷ್ಟು ರಿಯಾಯಿತಿಗಳನ್ನು ನೀಡಲಾಗುತ್ತಿದ್ದು, ಇವುಗಳಿಂದ ಸಂಸ್ಥೆಯ ಮೇಲೆ ಉಂಟಾಗುವ ವೆಚ್ಚದ ಶೇ 50ರಷ್ಟು ಭಾಗವನ್ನು ಸರ್ಕಾರವು ಮರುಪಾವತಿಸಬೇಕಾಗಿದೆ ಎಂಬುದು ಸಂಸ್ಥೆಯ ವಾದ.

₹339 ಕೋಟಿ ಬಾಕಿ: ರಾಜ್ಯ ಸರ್ಕಾರವು,2014–15ರಿಂದ 2018–19ರವರೆಗೆ ಕಡಿಮೆ ಪ್ರಮಾಣದಲ್ಲಿ ಸಂಸ್ಥೆಗೆ ಹಣವನ್ನು ಮರುಪಾವತಿ ಮಾಡುತ್ತಿದೆ. ಅಂದರೆ, 5 ವರ್ಷಗಳಲ್ಲಿ 23.10 ಲಕ್ಷ ಬಸ್‌ ಪಾಸ್‌ಗಳನ್ನು ವಿತರಿಸಲಾಗಿದ್ದು, ಸಂಸ್ಥೆಗೆ ₹2,304 ಕೋಟಿ ವೆಚ್ಚವಾಗಿದೆ. ಅದರಲ್ಲಿ ₹1,194 ಕೋಟಿಯನ್ನು (ಶೇ 50ರಷ್ಟು ವೆಚ್ವ) ಸರ್ಕಾರ ಭರಿಸಬೇಕಿತ್ತು. ಆದರೆ, ಇದುವರೆಗೆ ₹ 854 ಕೋಟಿಯನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಅಂದರೆ, ₹339 ಕೋಟಿ ಬಾಕಿ ಉಳಿಸಿಕೊಂಡಿದೆ.

₹383 ಕೋಟಿ ಕಡಿಮೆ ಸಂದಾಯ:

2014–15ರಿಂದ 2018–19ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಒಟ್ಟು ವೆಚ್ಚದ ಶೇ 25ರಷ್ಟು ಅಂದರೆ ₹ 533 ಕೋಟಿ ಸಂಗ್ರಹವಾಗಬೇಕಿತ್ತು. ಆದರೆ, ಪ್ರಸ್ತುತ ಪ್ರಯಾಣದರದ ಅನ್ವಯ ಸರ್ಕಾರವು ವಿದ್ಯಾರ್ಥಿ ಪಾಸ್‌ಗಳ ದರಗಳನ್ನು ಹೆಚ್ಚಿಸಲು ಅನುಮತಿ ನೀಡಿಲ್ಲ. 1ರಿಂದ 7ನೇ ತರಗತಿಯವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಾಸ್‌ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಪಾಸಿನ ಮೊತ್ತದಲ್ಲಿ ಶೇ 25ರಷ್ಟು ಹೆಚ್ಚುವರಿ ರಿಯಾಯಿತಿಯನ್ನು ನೀಡಲಾಗಿದೆ. ಇದರಿಂದ₹150 ಕೋಟಿಯನ್ನು ಮಾತ್ರ ವಿದ್ಯಾರ್ಥಿಗಳು ಭರಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಬೇಕಾದ ಮೊತ್ತದಲ್ಲಿ ₹383 ಕೋಟಿ ಕಡಿಮೆ ಸಂದಾಯವಾಗಿದೆ.

‘ಪ್ರತಿದಿನದ ಸರಾಸರಿ ಆದಾಯವು ₹5.27 ಕೋಟಿ ಮಾತ್ರ ಬರುತ್ತಿದ್ದು, ಸರಾಸರಿ ವೆಚ್ಚವು ₹6.12 ಕೋಟಿಗಳಿಗಿಂತ ಹೆಚ್ಚಿಗೆ ಇದೆ. ಇದರಿಂದ ಪ್ರತಿದಿನ ಸುಮಾರು ₹85 ಲಕ್ಷ ನಷ್ಟ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ, 2020ರ ಫೆಬ್ರುವರಿ ಅಂತ್ಯಕ್ಕೆ ಸಂಸ್ಥೆಯ ಮೇಲೆ ₹254 ಕೋಟಿ ಸಾಲವಿದ್ದು, ಸಾಲದ ಅಸಲು ಮರುಪಾವತಿಗಾಗಿ ಪ್ರತಿ ವರ್ಷ ₹70 ಕೋಟಿ ಮತ್ತು ₹20 ಕೋಟಿ ಬಡ್ಡಿ ಸೇರಿದಂತೆ ಒಟ್ಟು ₹90 ಕೋಟಿ ಪಾವತಿಸಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಸಂಸ್ಥೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎನ್ನುತ್ತಾರೆಕೆ.ಎಸ್‌.ಆರ್‌.ಟಿ.ಸಿ. ಆಫೀಸರ್ಸ್‌ ವೆಲ್ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಅಶೋಕ ರು.ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT