ಸೋಮವಾರ, ಮಾರ್ಚ್ 27, 2023
24 °C

4 ತಿಂಗಳು ಪಾಕ್ ಸೆರೆಯಲ್ಲಿದ್ದ ಕೆ.ಸಿ.ಕಾರ್ಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರೂ 1965ರ ಇಂಡೊ–ಪಾಕ್‌ ಯುದ್ಧದಲ್ಲಿ ಯುದ್ಧ ಕೈದಿಯಾಗಿ ಪಾಕಿಸ್ತಾನದಲ್ಲಿ ನಾಲ್ಕು ತಿಂಗಳು ಸೆರೆಮನೆಯಲ್ಲಿದ್ದರು. ಇವರು ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ. ಈ ಯುದ್ಧದ ವೇಳೆ ಭಾರತೀಯ ಸೇನೆಯ 20ನೇ ಸ್ಕ್ವಾಡ್ರನ್‌ ಲೀಡರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕಾರ್ಯಪ್ಪ ಅವರು ಹಾರಾಟ ನಡೆಸುತ್ತಿದ್ದ ಹಂಟರ್‌ ವಿಮಾನದ ಮೇಲೆ ಪಾಕಿಸ್ತಾನ ಸೇನೆಯು ದಾಳಿ ನಡೆಸಿತ್ತು. ಆಗ ಪಾಕಿಸ್ತಾನ ಸೇನೆಯಿಂದ ಬಂಧಿಯಾಗಿ ಯುದ್ಧ ಕೈದಿಯಾಗಿದ್ದರು.

ವಿಮಾನದಿಂದ ಜಿಗಿದಿದ್ದಾಗ ಗಾಯಗೊಂಡಿದ್ದ ಕಾರ್ಯಪ್ಪ ಅವರಿಗೆ ಲಾಹೋರ್‌ ಹಾಗೂ ರಾವಲ್ಪಿಂಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಏಕಾಂತದ ಕೊಠಡಿಯಲ್ಲಿ ಇರಿಸಲಾಗಿತ್ತು.

ಆ ವೇಳೆ, 1947ರಲ್ಲಿ ಫೀ.ಮಾ. ಕಾರ್ಯಪ್ಪ ಅವರ ಸೇನಾ ಸಹೋದ್ಯೋಗಿಯಾಗಿದ್ದ ಅಯೂಬ್‌ ಖಾನ್‌ ಅವರು ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಅಯೂಬ್‌ ಖಾನ್‌ ಅವರು ಫೀಲ್ಡ್‌ ಮಾರ್ಷಲ್‌ ಅವರಿಗೆ ಕರೆ ಮಾಡಿ, ‘ನೀವು ಇಚ್ಛಿಸಿದರೆ ನಿಮ್ಮ ಪುತ್ರನನ್ನು ಬೇಗನೆ ಬಿಡುಗಡೆ ಮಾಡುತ್ತೇವೆ. ಸ್ನೇಹದ ಸಂಕೇತವಾಗಿ’ ಎಂದು ತಿಳಿಸಿದ್ದರಂತೆ.

ಅದಕ್ಕೆ ‘ನಮ್ಮ ದೇಶದ ಸಾವಿರಾರು ಮಕ್ಕಳು ಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಪ್ರತಿಯೊಬ್ಬ ಕೈದಿಯೂ ನನ್ನ ಮಗನ ಸಮಾನ. ನನ್ನ ಮಗನಿಗೆ ವಿಶೇಷ ರಿಯಾಯಿತಿ ಬೇಕಿಲ್ಲ’ ಎಂದು ಗುಡುಗಿದ್ದರು. ಕೊನೆಗೆ 1966ರ ಜ. 22ರಂದು ಬಿಡುಗಡೆಗೊಂಡಿದ್ದರು.

‘ಘಟನೆ ನಡೆದು 50 ವರ್ಷ ಕಳೆದಿವೆ. ವಿಮಾನ ಯಾವ ಸ್ಥಳದಲ್ಲಿ ಪತನವಾಗಿತ್ತು ಎಂಬುದು ತಿಳಿದಿರಲಿಲ್ಲ’ ಎಂದು ನಿವೃತ್ತ ಏರ್‌ಮಾರ್ಷಲ್‌ ನೆನಪು ಮಾಡಿಕೊಳ್ಳುತ್ತಾರೆ. ಪ್ರಸ್ತುತ ಮಡಿಕೇರಿ ರೋಷನಾರ ನಗರದಲ್ಲಿ ನೆಲೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು