ಶನಿವಾರ, ಆಗಸ್ಟ್ 24, 2019
23 °C

ಸಂಪಾದಕೀಯ | ವಿಳಂಬ ಮಾಡದೆ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿ

Published:
Updated:
Prajavani

ರಾಜ್ಯದ ಕೃಷ್ಣಾ ಕೊಳ್ಳದ ನೂರಾರು ಗ್ರಾಮಗಳನ್ನು ಅತಿವೃಷ್ಟಿ ಅಥವಾ ಅನಾವೃಷ್ಟಿ ಕಾಡುತ್ತಲೇ ಇರುತ್ತದೆ. ಸತತ ಬರಗಾಲದಿಂದ ತತ್ತರಿಸುವ ಉತ್ತರ ಕರ್ನಾಟಕದ ಈ ಪ್ರದೇಶವು ಆಗೊಮ್ಮೆ, ಈಗೊಮ್ಮೆ ಮಹಾಪೂರದ ದಾಳಿಯನ್ನೂ ಎದುರಿಸಬೇಕಾಗುತ್ತದೆ. ಇದುವರೆಗೆ ತೀವ್ರ ಬರಗಾಲದ ಅಗ್ನಿಕುಂಡದಲ್ಲಿ ಹಾಯ್ದ ಆ ಪ್ರದೇಶವನ್ನು ಈಗ ಪ್ರವಾಹ ಬಾಧಿಸುತ್ತಿದೆ. ರಾಜ್ಯದ ಗಡಿಭಾಗದಲ್ಲಿ  ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ನೂರಾರು ಗ್ರಾಮಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರವಾಹಪೀಡಿತ ಜಿಲ್ಲೆಗಳ ಹಲವು ಗ್ರಾಮಗಳು ಜಲಾವೃತವಾಗಿದ್ದು, ನಡುಗಡ್ಡೆಗಳಾಗಿ ಪರಿಣಮಿಸಿವೆ. ಹಲವೆಡೆ ಹೆದ್ದಾರಿಗಳ ಸಂಪರ್ಕ ಕೂಡ ಕಡಿದುಹೋಗಿದೆ. ತಲೆಮಾರುಗಳಿಂದ ಬಾಳಿ ಬದುಕಿದ ಮನೆಗಳು ಜನರ ಕಣ್ಣೆದುರಿಗೇ ಧರೆಗುರುಳಿವೆ. ಸೂರು ಕಳೆದುಕೊಂಡ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಹೊಲಗಳಲ್ಲಿ ಬೆಳೆದಿದ್ದ ಬೆಳೆ ಮುಳುಗಡೆಯಾಗಿದೆ. ಜಾನುವಾರುಗಳು ಬೀದಿಪಾಲಾಗಿ, ತಿನ್ನಲು ಮೇವೂ ಇಲ್ಲದೆ ಮೂಕವೇದನೆ ಅನುಭವಿಸುತ್ತಿವೆ. ಕುಸಿದುಬಿದ್ದ ಮನೆ, ಮುಳುಗಡೆಯಾದ ಹೊಲಗಳಿಂದಾಗಿ ಅಲ್ಲಿನ ಜನರ ಕನಸುಗಳೆಲ್ಲ ಕಮರಿಹೋಗಿವೆ. ಇತ್ತ ಮಲೆನಾಡಿನಲ್ಲೂ ಮಳೆಯ ಅಟಾಟೋಪ ಹೆಚ್ಚಾಗಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸಾವಿರಾರು ಎಕರೆ ಪ್ರದೇಶವನ್ನು ನೆರೆ ಆಪೋಶನ ತೆಗೆದುಕೊಂಡಿದೆ. ಕರಾವಳಿಯಲ್ಲಿ ಕಾಳಿ ನದಿ ರೌದ್ರಾವತಾರ ತಾಳಿದ್ದಾಳೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಕಡಲ್ಕೊರೆತದ ಸಮಸ್ಯೆ ಕಾಣಿಸಿಕೊಂಡಿದೆ.

ಪ್ರವಾಹದ ಮಧ್ಯೆ ಸಿಲುಕಿ ನಲುಗುತ್ತಿರುವ ಸಂತ್ರಸ್ತರ ಕಣ್ಣೀರು ಒರೆಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಬೇಕಿದೆ. ಅಪಾಯದಲ್ಲಿ ಸಿಲುಕಿದವರನ್ನೆಲ್ಲ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕಿರುವುದು ಹಾಗೂ ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕಿರುವುದು ವಿಳಂಬವಿಲ್ಲದೇ ಆಗಬೇಕಿರುವ ಕೆಲಸ. ಸಂತ್ರಸ್ತರಿಗೆ ಆಹಾರ, ಶುದ್ಧ ಕುಡಿಯುವ ನೀರು, ಔಷಧ, ವಸ್ತ್ರ, ಹೊದಿಕೆಗಳನ್ನು ಒದಗಿಸಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆಯನ್ನೂ ಮಾಡಬೇಕು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇನೋ ಪ್ರವಾಹಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಅಧಿಕಾರಿಗಳ ಸಭೆ ಕರೆದು ತ್ವರಿತ ಪರಿಹಾರ ಕಾರ್ಯಗಳಿಗೆ ಸೂಚನೆಯನ್ನೂ ಕೊಟ್ಟಿದ್ದಾರೆ. ಆದರೆ, ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಪರಿಹಾರ ಚಟುವಟಿಕೆಗಳು ಹೇಗೆ ನಡೆಯುತ್ತಿವೆ ಎಂಬುದರ ಮೇಲೆ ನಿಗಾ ಇಡಲು ಸದ್ಯದ ಸರ್ಕಾರದಲ್ಲಿ ಸಚಿವರೇ ಇಲ್ಲ. ಏಕವ್ಯಕ್ತಿ ಸಂಪುಟದ ಮುಖ್ಯಮಂತ್ರಿಯವರಿಗೆ ಉಳಿದ ಕಾರ್ಯಭಾರಗಳ ಮಧ್ಯೆ ಪರಿಹಾರ ಕಾರ್ಯಗಳ ಮೇಲೆ ನಿರಂತರವಾಗಿ ನಿಗಾ ಇಡುವುದು ಕಷ್ಟ. ಅಲ್ಲದೆ, ಸರ್ಕಾರದ ನಿತ್ಯದ ಕೆಲಸಗಳಿಗಿಂತ ಸಂಪುಟ ವಿಸ್ತರಣೆ ಸಂಕಷ್ಟವೇ ಅವರನ್ನು ಹೆಚ್ಚಾಗಿ ಬಾಧಿಸುತ್ತಿರುವಂತೆ ತೋರುತ್ತಿದೆ. ದಶಕದ ಹಿಂದೆಯೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಮಹಾಪೂರ ಎದುರಿಸಿದ್ದವು. ಆಗಲೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರು. ಬಾಧಿತ ಪ್ರದೇಶದ ಸಾವಿರಾರು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದೆ, ಲಕ್ಷಾಂತರ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಆಗಿನ ಸರ್ಕಾರ ಘೋಷಿಸಿತ್ತು. ಆ ಲೆಕ್ಕಾಚಾರಗಳೆಲ್ಲ ನಿಜವೇ ಆಗಿದ್ದರೆ ಅಲ್ಲಿನ ಎಲ್ಲ ಗ್ರಾಮಗಳು ಈಗ ಸುರಕ್ಷಿತವಾಗಿ ಇರಬೇಕಿತ್ತಲ್ಲವೇ? ಹಾಗಾದರೆ ನೂರಾರು ಗ್ರಾಮಗಳು ಸಂಕಷ್ಟ ಎದುರಿಸುತ್ತಿರುವುದು ಏತಕ್ಕೆ? ನದಿಪಾತ್ರಕ್ಕೆ ಅಂಟಿಕೊಂಡಿದ್ದ ಗ್ರಾಮಗಳನ್ನು ಸ್ಥಳಾಂತರ ಮಾಡಲು ಆ ಸಂದರ್ಭದಲ್ಲೇ ನಿರ್ಧರಿಸಲಾಗಿತ್ತು. ಎಷ್ಟು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದೆ, ಇನ್ನೂ ಎಷ್ಟು ಗ್ರಾಮಗಳು ಅಪಾಯಕಾರಿ ಸ್ಥಳಗಳಲ್ಲೇ ಉಳಿದಿವೆ, ನಿಜವಾಗಿಯೂ ಎಷ್ಟು ಮನೆಗಳನ್ನು ನಿರ್ಮಿಸಲಾಗಿದೆ ಎಂಬುದರ ಕುರಿತು ಸರ್ಕಾರ ಸಮಗ್ರ ವಿಶ್ಲೇಷಣೆ ನಡೆಸಿ, ಶಾಶ್ವತ ಪುನರ್ವಸತಿಗೆ ಈಗಲಾದರೂ ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತವಾಗಬೇಕು. ಸಂತ್ರಸ್ತರಿಗೆ ಪರಿಹಾರ ಒದಗಿಸುವ ವಿಷಯದಲ್ಲಿ ಆಡಳಿತ ವ್ಯವಸ್ಥೆಯು ಸದಾ ಮಾತೃಹೃದಯಿಯಾಗಿ ವರ್ತಿಸಬೇಕು. ಪರಿಹಾರದ ಹೆಸರಿನಲ್ಲಿ ಖರ್ಚಾದ ಪ್ರತೀ ಪೈಸೆಗೂ ನ್ಯಾಯ ಸಿಕ್ಕಿದೆ ಎಂಬುದನ್ನು ಆತ್ಮಸಾಕ್ಷಿಯುಳ್ಳ ಪ್ರತೀ ಅಧಿಕಾರಿಯೂ ಖಚಿತಪಡಿಸಿಕೊಳ್ಳಬೇಕು. 

Post Comments (+)