ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿ ಬೆಳಗಾವಿಗೆ ಸ್ಥಳಾಂತರಿಸಿ: ಕಾರ್ಮಿಕರ ಪ್ರತಿಭಟನೆ

7

ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿ ಬೆಳಗಾವಿಗೆ ಸ್ಥಳಾಂತರಿಸಿ: ಕಾರ್ಮಿಕರ ಪ್ರತಿಭಟನೆ

Published:
Updated:
Deccan Herald

ಬೆಳಗಾವಿ: ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸಂಘದ ಸದಸ್ಯರು ಮಂಗಳವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ಜಿಲ್ಲೆಯಲ್ಲಿ ಕಟ್ಟಡ ಹಾಗೂ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು 15 ಲಕ್ಷಕ್ಕಿಂತಲೂ ಹೆಚ್ಚಿದ್ದಾರೆ. ಈ ಕಾರ್ಮಿಕರ ಕಲ್ಯಾಣಕ್ಕಾಗಿ ಕರ್ನಾಟಕ ಕಟ್ಟಡ ಹಾಗೂ ಇತರ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕಕ್ಕಾಗಿ ತೆರಿಗೆ ರೂಪದಲ್ಲಿ ₹ 6 ಕೋಟಿ ತೆರಿಗೆ ಸಂಗ್ರಹಿಸಿದೆ. ತೆರಿಗೆ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕು. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ನಗರದ ಉದ್ಯಮಬಾಗ್‌ನಲ್ಲಿರುವ ಕಾರ್ಮಿಕ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಬೇಕು. ಕಾರ್ಮಿಕರಿಗೆ ವಾಹನ ಸೌಲಭ್ಯ ಹಾಗೂ ಮೂಲಸೌಕರ್ಯ ಒದಗಿಸಬೇಕು. ನರೇಗಾ ಕಾರ್ಮಿಕರ ನೋಂದಣಿಗಾಗಿ ವಿಶೇಷ ಅಭಿಯಾನ ಹಮ್ಮಿಕೊಂಡ ಒಂದು ವರ್ಷದಲ್ಲಿ ಜಿಲೆಯ ಎಲ್ಲ ಕಾರ್ಮಿಕರ ನೋಂದಣಿ ಪೂರ್ಣಗೊಳಿಸಬೇಕು. ವಿವಿಧ ಭಾಷೆ ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಹುಭಾಷೆ ಬಲ್ಲ ಅಧಿಕಾರಿಗಳನ್ನು ನೇಮಿಸಬೇಕು. ನರೇಗಾ ಕಾರ್ಮಿಕರ ಬಾಕಿ ವೇತನವನ್ನು ತಕ್ಷಣ ಪಾವತಿಸಬೇಕು. ಪ್ರತಿ ವರ್ಷ 200 ದಿನ ಉದ್ಯೋಗ ನೀಡಬೇಕು. ದಿನದ ಕೂಲಿಯನ್ನು ₹ 350ಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ಕಟ್ಟಡ ಕಾರ್ಮಿಕರಿಗೆ ಎಲ್ಲ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಕಾರ್ಮಿಕ ಸಚಿವ ವೆಂಕಟರಮಣಪ್ಪ, ‘ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಉದ್ಯಮಬಾಗ್‌ನಲ್ಲಿರುವ ಇಲಾಖೆಯ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳಾವಕಾಶ ದೊರೆತ ಕೂಡಲೇ ಸ್ಥಳಾಂತರಿಸಲಾಗುವುದು’ ಎಂದು ಭರವಸೆ ನೀಡಿದರು.

ಸಂಘದ ಮುಖಂಡರಾದ ಎನ್.ಆರ್. ಲಾತೂರ, ಸುಜಿತ ಮುಳಗುಂದ, ಬೈರು ಸಾಂವತ, ಸಂಜು ಬೋಸ್ಲೆ, ಸುಧೀರ ಕಾಕತಕರ, ಅಡವೆಪ್ಪ ಕುಂದರಗಿ ನೇತೃತ್ವ ವಹಿಸಿದ್ದರು. ನೂರಾರು ಮಂದಿ ಕಾರ್ಮಿಕರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !