ದಲಿತರ ಅಡುಗೆ ತಿನ್ನದ ಗರ್ಭಿಣಿಯರು !

7
‘ಮಾತೃಪೂರ್ಣ’ ಯೋಜನೆಗೆ ಹಲವು ಜಿಲ್ಲೆಗಳಲ್ಲಿ ಹಿನ್ನಡೆ

ದಲಿತರ ಅಡುಗೆ ತಿನ್ನದ ಗರ್ಭಿಣಿಯರು !

Published:
Updated:

ಬೆಂಗಳೂರು: ದಲಿತರು ಮತ್ತು ಕೆಳಜಾತಿಯವರು ಅಡುಗೆ ಮಾಡುತ್ತಾರೆ ಎಂಬ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ ಸೇರಿ ಹಲವು ಜಿಲ್ಲೆಗಳಲ್ಲಿ ಅಂಗನವಾಡಿಗಳಿಗೆ ಗರ್ಭಿಣಿ– ಬಾಣಂತಿಯರು ಬರುತ್ತಿಲ್ಲ. ಇದರಿಂದ ‘ಮಾತೃಪೂರ್ಣ’ ಯೋಜನೆಗೆ ಭಾರೀ ಹಿನ್ನಡೆಯಾಗಿದೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರ ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ ಈ ಯೋಜನೆ ಜಾರಿ ಮಾಡಿತ್ತು. ಪೌಷ್ಟಿಕಾಂಶದ ಕೊರತೆಯಿಂದ ತಾಯಿ– ಮಗು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಮತ್ತು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅನುಕೂಲವಾಗ ಬೇಕು ಎಂಬುದು ಈ ಯೋಜನೆಯ ಆಶಯವಾಗಿತ್ತು.

ಗ್ರಾಮಾಂತರ ಪ್ರದೇಶಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಅಂಗನವಾಡಿ ಕೇಂದ್ರಗಳಿಗೆ ಕರೆತರುವ ಜವಾಬ್ದಾರಿ ಆಶಾ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಗರ್ಭಿಣಿಯರು ಮತ್ತು ಬಾಣಂತಿಯರು ಮೊದಲಿಗೆ ಉತ್ಸಾಹದಿಂದಲೇ ಬರುತ್ತಿದ್ದರು, ಕ್ರಮೇಣ ಹಿಂದೇಟು ಹಾಕಲಾರಂಭಿಸಿದರು. ಇದರ ಪರಿಣಾಮ ಸರ್ಕಾರ ಕಳುಹಿಸುವ ಪಡಿತರ ಮತ್ತು ತರಕಾರಿಗಳಿಂದ ಅಡುಗೆ ಮಾಡಿದರೂ ಸೇವಿಸಲು ಮಹಿಳೆಯರು ಬಾರದ ಕಾರಣ  ಆಹಾರವನ್ನು ಸಿಕ್ಕ– ಸಿಕ್ಕವರಿಗೆ ಕೊಟ್ಟು ಖಾಲಿ ಮಾಡಬೇಕಾಗಿದೆ. ಇಲ್ಲವೇ ತಿಪ್ಪೆಗೆ ಎಸೆಯಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಯೋಜನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಜಾರಿ ಮಾಡಲಾಗಿದೆ. ಈ ಯೋಜನೆಗೆಂದು ರಾಜ್ಯ ಸರ್ಕಾರ ₹ 202 ಕೋಟಿ ನಿಗದಿ ಮಾಡಿತ್ತು.

ರಾಜ್ಯದಲ್ಲಿ ಬಡತನ ಪ್ರಮಾಣ ಹೆಚ್ಚು ಇರುವ ಜಿಲ್ಲೆಗಳನ್ನು ಬಿಟ್ಟರೆ, ಉಳಿದ ಎಲ್ಲ ಜಿಲ್ಲೆಗಳಲ್ಲೂ ಈ ಸಮಸ್ಯೆ ವ್ಯಾಪಕವಾಗಿದೆ. ಅಂಗನವಾಡಿಗಳಲ್ಲಿ ದಲಿತರು ಅಥವಾ ಕೆಳ ಜಾತಿಯವರು ಅಡುಗೆ ಮಾಡುತ್ತಾರೆ ಎನ್ನುವುದು ಪ್ರಮುಖ ಕಾರಣವಾದರೆ, ಗರ್ಭಿಣಿಯರು ಮನೆಯಿಂದ ಹೊರಗೆ ತಿರುಗಾಡಬಾರದು, ದೃಷ್ಟಿ ಆಗುತ್ತದೆ. ಹಳ್ಳಿಗಳಲ್ಲಿ ಪುರುಷರು ಇರುವಾಗ ಅವರ ಮುಂದೆ ಹಾದು ಹೋಗಬಾರದು ಎಂಬ ಸಾಮಾಜಿಕ ಅಪನಂಬಿಕೆಗಳು ಪ್ರಬಲವಾಗಿವೆ. ಇದರ ನಿವಾರಣೆ ಕಷ್ಟ ಎನಿಸಿದೆ ಎಂದು ಅವರು ತಿಳಿಸಿದರು.

ಈ ಅಪನಂಬಿಕೆಯನ್ನು ತೊಡೆದು ಹಾಕಲು ಆಶಾ ಕಾರ್ಯಕರ್ತೆಯರು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇವರು ಉತ್ತೇಜನ ನೀಡಿ ಅಂಗನವಾಡಿಗಳಿಗೆ ಕರೆದುಕೊಂಡು ಬರುತ್ತಿದ್ದಾರೆ. ಆದರೆ, ಗರ್ಭಿಣಿ ಅಥವಾ ಬಾಣಂತಿಯರ ಮನೆಯಲ್ಲಿನ ಹಿರಿಯರು ಇದಕ್ಕೆ ಆಕ್ಷೇಪ ಮಾಡುವುದರಿಂದ ಒಮ್ಮೆ ಬಂದವರು ಮತ್ತೆ  ಅಂಗನವಾಡಿಗಳತ್ತ ತಲೆ ಹಾಕುತ್ತಿಲ್ಲ. ವಿವಿಧ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ವಿಷಯ ಸಾಕಷ್ಟು ಬಾರಿ ಚರ್ಚೆ ಆಗಿದೆ. ಹೆಚ್ಚಿನ ಪ್ರಯೋಜನ ಆಗಿಲ್ಲ ಎಂದೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

‘ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಬಹಳಷ್ಟು ಸಂದರ್ಭದಲ್ಲಿ ಅಡುಗೆ ಮಾಡಿಕೊಳ್ಳುವುದು ಕಷ್ಟ. ಆದರೆ, ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶವುಳ್ಳ ಸಿದ್ಧ ಆಹಾರವೇ ಸಿಗುತ್ತದೆ. ಇದರಿಂದ ತಾಯಿ ಮಕ್ಕಳ ಆರೋಗ್ಯ ವೃದ್ಧಿಯೂ ಆಗುತ್ತದೆ. ಅಪನಂಬಿಕೆಗಳನ್ನು ಬಿಟ್ಟು ಯೋಜನೆಯ ಪ್ರಯೋಜನ ಪಡೆಯಬೇಕು’ ಎನ್ನುತ್ತಾರೆ ರಾಜ್ಯ ಸಂತಾನೋತ್ಪತ್ತಿ, ಮಕ್ಕಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್‌.ಎನ್‌.ಲಕ್ಷ್ಮಿಪತಿ. 

* ರಾಮನಗರ ಜಿಲ್ಲೆಯಲ್ಲಿ 1500 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ ಶೇ 50 ಕ್ಕೂ ಹೆಚ್ಚು ಕೇಂದ್ರಗಳಿಗೆ ಗರ್ಭಿಣಿಯರು, ಬಾಣಂತಿಯರು ಬರುವುದಿಲ್ಲ. ಉಳಿದ ಕಡೆಗಳಲ್ಲಿ ಬಂದರೂ ಊಟ ಮಾಡದೇ ಹಾಲು ಮತ್ತು ಮೊಟ್ಟೆ ಪಡೆದುಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಮನೆಗೇ ಕಳಿಸಿಕೊಡಿ ಎಂಬ ಬೇಡಿಕೆ ಸಲ್ಲಿಸುತ್ತಾರೆ.

* ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲೂಕುಗಳಲ್ಲಿ ಒಬ್ಬರೂ ಮಾತೃಪೂರ್ಣ ಪ್ರಯೋಜನ ಪಡೆಯಲು ಮುಂದೆ ಬರುತ್ತಿಲ್ಲ. ಹಾಸನ, ಹೊಳೆನರಸಿಪುರ, ಅರಕಲಗೂಡು, ಚೆನ್ನರಾಯಪಟ್ಟಣ, ಅರಸಿಕೆರೆ ತಾಲೂಕುಗಳಲ್ಲಿ  ಈ ಸೌಲಭ್ಯವನ್ನು ಭಾಗಶಃ ಪಡೆಯುತ್ತಿದ್ದಾರೆ.

* ಆರಂಭದಲ್ಲಿ ಆಹಾರ ಉಳಿದಾಗ ಎಸೆಯಲಾಗುತ್ತಿತ್ತು. ಈಗ ಎಷ್ಟು ಜನ ಬರುತ್ತಾರೋ ಅಷ್ಟು ಜನಕ್ಕೆ ಮಾತ್ರ ಅಡುಗೆ ತಯಾರಿಸುವ ವ್ಯವಸ್ಥೆ ಮಾಡಲಾಗಿದೆ.

ಏನಿದು ಮಾತೃಪೂರ್ಣ ಯೋಜನೆ

ರಾಜ್ಯದಲ್ಲಿ ಬಡ ವರ್ಗಕ್ಕೆ ಸೇರಿದ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ನೀಡುವ ಯೋಜನೆ ಇದಾಗಿದೆ. ತಿಂಗಳಲ್ಲಿ 25 ದಿನಗಳ ಕಾಲ ಈ ಸೌಲಭ್ಯ ನೀಡಲಾಗುತ್ತದೆ. ಗರ್ಭ ಧರಿಸಿದ ದಿನದಿಂದ ಹೆರಿಗೆ ನಂತರದ ಆರು ತಿಂಗಳವರೆಗೆ ಅನ್ನ, ತರಕಾರಿ, ಬೇಯಿಸಿದ ಮೊಟ್ಟೆ, 200 ಎಂ.ಎಲ್‌ ಹಾಲು, ಕಡಲೆ ಬೀಜ, ಬೆಲ್ಲದಿಂದ ಮಾಡಿದ ಚಿಕ್ಕಿ ಸೇರಿದಂತೆ ಪರಿಪೂರ್ಣ ಆಹಾರ ನೀಡಲಾಗುತ್ತಿದೆ.

ಮುಖ್ಯಾಂಶಗಳು

* 65,919 ಅಂಗನವಾಡಿಗಳಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ

* 30 ಲಕ್ಷ ಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದೆ

* ತಿಂಗಳಲ್ಲಿ 25 ದಿನ ಪೌಷ್ಟಿಕ ಆಹಾರ ವಿತರಣೆ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !