‘ಸಾಂಸ್ಕೃತಿಕ ದಿವಾಳಿತನ ಅಪಾಯಕಾರಿ’

7

‘ಸಾಂಸ್ಕೃತಿಕ ದಿವಾಳಿತನ ಅಪಾಯಕಾರಿ’

Published:
Updated:
Deccan Herald

ಬೆಂಗಳೂರು: ‘ದೇಶದಲ್ಲಿ ಕೋಮು ವಾದ, ಭ್ರಷ್ಟಾಚಾರ, ಸಾಂಸ್ಕೃತಿಕ ದಿವಾಳಿತನ ಹೆಚ್ಚಾಗಲು ಬಿಟ್ಟರೆ, ಅರಾಜಕತೆ ಉಂಟಾಗುತ್ತದೆ. ಆಗ ಮೊದಲು ನ್ಯಾಯಮೂರ್ತಿಗಳೇ ಬಂಧನಕ್ಕೆ ಒಳಗಾಗುತ್ತಾರೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನ್‌ ದಾಸ್‌ ಆತಂಕ ವ್ಯಕ್ತಪಡಿಸಿದರು.

ದಲಿತ ಸಂಘಟನೆಗಳು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಂವಿಧಾನ ಸುಟ್ಟ ಬೆಂಕಿ, ದೇಶವನ್ನು ಸುಡುವುದು’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿನ ಹತ್ತಾರು ಧರ್ಮಗಳು, ನೂರಾರು ಪಕ್ಷಗಳು, ಸಾವಿರಾರು ಸಂಘಟನೆಗಳ ನಡುವೆ ಸಂಬಂಧ ಕಲ್ಪಿಸಿ, ಬಂಧುತ್ವ ಏರ್ಪಡಲು ಸಂವಿಧಾನ ನೆರವಾಗಿದೆ. ಆ ರಚನೆ ಎಲ್ಲರ ಧರ್ಮಗ್ರಂಥ ಇದ್ದಂತೆ. ಆದರೆ ಇಂದು ಅದರ ಸದಾಶಯಗಳನ್ನು ಅನುಷ್ಠಾನಕ್ಕೆ ತರುವವರು ಕೆಟ್ಟವರಾಗಿದ್ದರೆ, ಸಾಮಾಜಿಕ ಸ್ವಾಸ್ಥ್ಯವೂ ಹಾಳಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮ ರೆಡ್ಡಿ, ‘ಸಂವಿಧಾನ ರಚನೆಯ ಸಂದರ್ಭದಲ್ಲಿಯೇ ವಿರೋಧ ಮಾಡಿದವರು ಇಂದು ರಾಜಕೀಯ ಅಧಿಕಾರಕ್ಕೆ ಏರಿದ್ದಾರೆ. ಆರಂಭದಲ್ಲಿ ಎರಡು ಸಾವಿರ ಇದ್ದ ಆರ್‌ಎಸ್‌ಎಸ್ ಶಾಖೆಗಳು ಇಂದು 10 ಲಕ್ಷಕ್ಕೆ ತಲುಪಿವೆ. ಹಾಗಾಗಿ, ಫ್ಯಾಸಿಸ್ಟ್‌ ಶಕ್ತಿಗಳು ನಗ್ನವಾಗಿ ರಾರಾಜಿಸುತ್ತಿವೆ. 

ಆ ಶಕ್ತಿಗಳು ಗೋರಕ್ಷಣೆ ಮತ್ತು ದೇಶಭಕ್ತಿಯನ್ನು ಅಸ್ತ್ರವಾಗಿ ಬಳಸಿ ಕೆಳ ಸಮುದಾಯಗಳನ್ನು ಶೋಷಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೇಖಕಿ ಕೆ.ಷರೀಫಾ ಮಾತನಾಡಿ, ‘ಸಂವಿಧಾನ ಜಲಾವೊ, ದೇಶ್‌ ಬಚಾವೋ (ಸಂವಿಧಾನ ಸುಟ್ಟು ದೇಶ ರಕ್ಷಿಸಿ) ಘೋಷಣೆಗಳನ್ನು ನಡುರಸ್ತೆಯಲ್ಲಿ ಕೂಗುವವರು, ಗೌರಿ ಲಂಕೇಶ್‌ ಕೊಂದವರನ್ನು ಮುಗ್ಧರು ಎನ್ನುತ್ತಿದ್ದಾರೆ. ಮುಂದಿನ ಲೋಕಸಭೆಯಲ್ಲಿ ಇದೇ ಮುಸುಡಿಗಳನ್ನು ನೋಡುವಂತಾಗಬಾರದು. ಗೂಂಡಾಗಿರಿಯನ್ನು ಸಹಿಸಿಕೊಳ್ಳಬಾರದು. ಆ ಶಕ್ತಿಗಳಿಗೆ ಸಂವಿಧಾನ ಸುಡುವ ಪ್ರೇರಣೆ ಎಲ್ಲಿಂದ ಸಿಗುತ್ತಿದೆ ಎನ್ನುವುದನ್ನು ಯೋಚಿಸಿ, ಪ್ರಶ್ನಿಸಬೇಕಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !