ಶನಿವಾರ, ನವೆಂಬರ್ 16, 2019
21 °C

ಅಮೆರಿಕ ಕಂಪನಿ ಹೆಸರಿನಲ್ಲಿ ₹ 23.56 ಲಕ್ಷ ವಂಚನೆ

Published:
Updated:

ದಾವಣಗೆರೆ: ಅಮೆರಿಕ ಮೂಲದ ಕಂಪನಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ₹23.56 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ದಾವಣಗೆರೆಯ ವಿವೇಕಾನಂದ ಬಡಾವಣೆಯ ನಿವಾಸಿ ತನ್ಮಯ ಆರ್. ಶೆಟ್ಟಿ ವಂಚನೆಗೆ ಒಳದಾದವರು. ಬೆಂಗಳೂರಿನ ಕರೀಂ ವಹಾಬ್ ಹಾಗೂ ನಿಖೇಲೇಶ್ ಆಚಾರ್ಯ ವಂಚಿಸಿದವರು.

ತನ್ಮಯ ಅವರ ಸ್ನೇಹಿತನಾದ ಬಿಬಿಎಂ ವಿದ್ಯಾರ್ಥಿ ನಿಖಿಲೇಶ್ ಅಚಾರ್ಯ ‘ಅಮೇರಿಕ ಮೂಲದ ಕಂಪನಿಯೊಂದು ಇಂಡಿಯಾ ಮಾರ್ಟ್ ಕಂಪನಿಯ ಮೂಲಕ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಿತರಣೆ ಮಾಡಲು ಡಿಸ್ಟ್ರಿಬ್ಯೂಟರ್ ಅವಶ್ಯಕತೆ ಇದೆ. ನಾನು ಈ ಮೊದಲು ಆ ಕಂಪನಿಯಲ್ಲಿ ಕೆಲಸ ಮಾಡಿ ಈಗ ಬಿಟ್ಟಿದ್ದೇನೆ. ನನಗೆ ₹12 ಸಾವಿರ ವೇತನ ನೀಡುತ್ತಿದ್ದರು. ₹10 ಸಾವಿರ ಡೆಪಾಸಿಟ್ ಮಾಡಿದ್ದೆ, ನಾನು ಅಲ್ಲಿ ಕೆಲಸ ಬಿಟ್ಟ ಮೇಲೆ ನನಗೆ ಅವರು ಡೆಪಾಜಿಟ್ ಜೊತೆಗೆ ಬಡ್ಡಿ ಸಮೇತ ₹40 ಸಾವಿರ ವಾಪಸ್‌ ನೀಡಿದ್ದರು. ನಿನಗೂ ಕೆಲಸ ಬೇಕಿದ್ದರೆ ಕಂಪನಿಯ ಏಜೆಂಟ್‌ನೊಂದಿಗೆ ಮಾತನಾಡು’ ಎಂದು ಕರೀಮ್ ವಹಾಬ್‌ ನಂಬರ್ ನೀಡಿದ್ದಾನೆ.

ಇದನ್ನು ನಂಬಿದ ತನ್ಮಯ ಅವರು, ಏಜೆಂಟ್ ಕರೀಂ ವಾಹಬ್‌ಗೆ ಕರೆ ಮಾಡಿದ್ದಾರೆ, ಆತ ‘ಸೂಕ್‌ ಮಾರ್ಕ್‌ ಕಂಪನಿ ಲಿಮಿಟೆಡ್‌ ಅಮೆರಿಕಾ ಮೂಲದ್ದಾಗಿದ್ದು, ಅದರ ಈ ಕಂಪನಿಯು ಮೊಬೈಲ್ ಸ್ಮಾರ್ಟ್‌ ಫೋನ್ಸ್‌, ಲ್ಯಾಪ್‌ಟಾಪ್, ಕ್ಯಾಮೆರಾ ಹಾಗೂ ಉತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಭಾರತಕ್ಕೆ ಕಳುಹಿಸುತ್ತದೆ. ಈ ಪ್ರಾಡೆಕ್ಟ್ ಗಳನ್ನು ವಿತರಿಸಲು ಏಜೆಂಟ್‌ ಅವಶ್ಯಕತೆ ಇದೆ. ಪ್ರತಿ ತಿಂಗಳು ₹50 ಸಾವಿರದ ಜೊತೆಗೆ ₹40 ಸಾವಿರ ಭತ್ಯೆ ನೀಡಲಾಗುತ್ತದೆ’ ಎಂದು ಹೇಳಿ ನಂಬಿಸಿದ್ದಾನೆ.

ಆರಂಭದಲ್ಲಿ ₹10 ಸಾವಿರ ಠೇವಣಿ ಕಟ್ಟಬೇಕು. ಆನಂತರ 150 ಪ್ರಾಡೆಕ್ಟ್‌ಗಳನ್ನು ಕಳುಹಿಸುತ್ತೇವೆ. ಅವುಗಳ ಬೆಲೆ ₹20 ಲಕ್ಷವಾಗುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೆ ಒಪ್ಪಿದ ತನ್ಮಯ್  ಕರೀಂ ವಹಾಬ್‌ನ ಖಾತೆಗೆ ಹಣ ಹಾಕಿದ್ದಾರೆ. ಪ್ಯಾಕೇಜ್‌ ಸೆಕ್ಯುರಿಟಿಗೆ ಬೇಕು ಎಂದು ಹೇಳಿ ₹26 ಸಾವಿರ, ಉಪಕರಣಗಳ ಪ್ಯಾಕಿಂಗ್‌ಗೆ ಎಂದು ಹೇಳಿ ₹ 36 ಸಾವಿರವನ್ನು ವಹಾಬ್ ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾನೆ.

ಪ್ರಾಡೆಕ್ಟ್ಗಳು ಯುಎಸ್ಎ, ಫ್ರಾನ್ಸ್‌, ಬೆಲ್ಜಿಯಂ, ಟರ್ಕಿ, ಪಾಕೀಸ್ತಾನಗಳ ಮೂಲಕ ನವದೆಹಲಿ ಹಾಗೂ ಬೆಂಗಳೂರಿಗೆ ಬರುತ್ತದೆ ಎಂದು ತಿಳಿಸಿದ್ದು, ತನ್ಮಯ್ ಇದನ್ನು ನಂಬಿದ್ದಾರೆ. ಆನಂತರ ಇಸ್ಲಾಮಬಾದ್‌ನಲ್ಲಿ ಪಾಕೀಸ್ತಾನದ ಕಸ್ಟಂ ಸರ್ವೀಸ್‌ನವರು ಹಣ ಕೇಳುತ್ತಿದ್ದಾರೆ ₹1 ಲಕ್ಷ, ಅದೇ ರೀತಿ ನವದೆಹಲಿಯಲ್ಲಿ ಆಮದು ಲೈಸೆನ್ಸ್‌ ಇಲ್ಲದ ಕಾರಣ ಹಿಡಿದಿದ್ದಾರೆ ಎಂದು ₹2 ಲಕ್ಷವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.

‘ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ತೂಕದ ಪ್ರಮಾಣವು ಕಾನೂನುಬಾಹಿರವಾಗಿದೆ ಇದರಿಂದ ₹5 ಲಕ್ಷ ದಂಡ ಕಟ್ಟಬೇಕು, ಅದರಂತೆ ವ್ಯಾಟ್‌ ಡಿಕ್ಲರೇಷನ್‌ ಶುಲ್ಕ, ಏರ್‌ಪೋರ್ಟ್‌ ಹ್ಯಾಂಡ್ಲಿಂಗ್ ಚಾರ್ಜ್, ಬೆಂಗಳೂರು ಏರ್‌ಪೋರ್ಟ್‌ನಲ್ಲೂ ಇದೇ ರೀತಿ ದಂಡ ಕಟ್ಟಬೇಕು ಎಂದು ಹೇಳಿ ₹ 23. 56 ಲಕ್ಷದಷ್ಟು ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಉಪಕರಣಗಳು ತಲುಪಿದ ನಂತರ ಹಣವನ್ನು ಹಿಂದಿರಿಗಿಸುತ್ತೇನೆ ಎಂದು ಹೇಳಿ ವಂಚನೆ ಮಾಡಿದ್ದಾನೆ’ ಎಂದು ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)