ಮಂಗಳವಾರ, ನವೆಂಬರ್ 19, 2019
28 °C
ಆಪ್ಟೊ ಸರ್ಕ್ಯೂಟ್ಸ್‌ ಕಂಪನಿ ಮಾಲೀಕರ ಮೇಲೆ ಸಿಬಿಐ ಎಫ್‌ಐಆರ್‌

ಎಸ್‌ಬಿಐಗೆ ₹ 354 ಕೋಟಿ ವಂಚನೆ

Published:
Updated:

ಬೆಂಗಳೂರು: ನಕಲಿ ಹಾಗೂ ತಿರುಚಿದ ದಾಖಲೆ ನೀಡಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ₹ 354 ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಆಪ್ಟೊ ಸರ್ಕ್ಯೂಟ್‌ (ಇಂಡಿಯಾ) ಲಿ. ಮತ್ತು ಅದರ ಮಾಲೀಕರ ವಿರುದ್ಧ ಸಿಬಿಐ ಸ್ಥಳೀಯ ಕೋರ್ಟ್‌ನಲ್ಲಿ ಎಫ್‌ಐಆರ್‌ ದಾಖಲಿಸಿದೆ.

ಈ ವಂಚನೆ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಮಂಗಳವಾರ ಕೆಲವು ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ಕಂಪನಿ ಅಧ್ಯಕ್ಷ, ಪ್ರವರ್ತಕ ನಿರ್ದೇಶಕ ವಿನೋದ್‌ ರಮ್ನಾನಿ, ಪತ್ನಿ ಪ್ರವರ್ತಕ ನಿರ್ದೇಶಕಿ ಉಷಾ ರಮ್ನಾನಿ, ಅಮೆರಿಕ ನಿವಾಸಿಗಳಾದ ಜಯೇಶ್‌ ಪಟೇಲ್‌, ಥಾಮಸ್‌ ಡೈಟಿಕರ್‌ ಹಾಗೂ ಇತರರನ್ನು ಎಫ್ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಮನುಷ್ಯನ ದೇಹದೊಳಗೆ ತೂರಿಸಬಹುದಾದ ವೈದ್ಯಕೀಯ ಉಪಕರಣ ತಯಾರಿಸಿ, ರಫ್ತು ಮಾಡುವ ‘ಒಸಿಲ್‌’ (ಓಸಿಐಎಲ್‌) ನಗದು ಸಾಲ ಸೌಲಭ್ಯ ಪಡೆದಿತ್ತು. ಇದು 2017ರ ಫೆಬ್ರುವರಿ 27ರಿಂದ ಈ ವರ್ಷದ ಜೂನ್‌ವರೆಗೆ ವಸೂಲಾಗದೆ (ಎನ್‌ಪಿಎ) ಉಳಿದಿದೆ. ಈ ಪೈಕಿ ಸಾಲದ ಮೊತ್ತವೇ ₹ 155 ಕೋಟಿ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಕಂಪನಿ ಲೆಕ್ಕಪತ್ರಗಳನ್ನು ‍ಪರಿಶೀಲಿಸಿದಾಗ ಬ್ಯಾಂಕಿನಿಂದ ಪಡೆದಿರುವ ಸಾಲವನ್ನು ಬೇರೆ ಉದ್ದೇಶಗಳಿಗೆ ಬಳಕೆಯಾಗಿರುವುದು ಪತ್ತೆಯಾಗಿದೆ. 2010–11ರಲ್ಲಿ ಕಂಪನಿ ₹ 6 ಕೋಟಿಗೆ ಎಸ್‌.ಎಸ್‌.ರೆಮಿಡಿಸ್‌ ಪ್ರೈವೇಟ್‌ ಲಿ., ₹ 45 ಕೋಟಿಗೆ ಯುನಿಟೆಕ್ಸಿಸ್‌ ವೆಸ್ಕುಲರ್‌ ಇಂಕ್‌, ₹ 409 ಕೋಟಿಗೆ ಕಾರ್ಡಿಯಾಕ್‌ ಸೈನ್ಸಸ್‌ ಕಾರ್ಪೊರೇಷನ್‌ ಇಂಕ್‌ ಕಂಪನಿಗಳನ್ನು ಖರೀದಿಸಿದೆ. ಇದಕ್ಕೆ ಬ್ಯಾಂಕಿನ ಒಪ್ಪಿಗೆ ಪಡೆದಿಲ್ಲ ಎಂದು ಸಿಬಿಐ ದೂರಿದೆ.

ಅಲ್ಲದೆ, ಹೊರ ದೇಶಗಳಲ್ಲಿರುವ ಅಧೀನ ಕಂಪನಿಗಳ ಪುನರ್‌ರಚನೆ ಹಾಗೂ ಒಸಿಲ್‌ನ ಭಾರತೀಯ ಅಧೀನ ಕಂಪನಿಗಳಿಗೆ ₹ 723 ಕೋಟಿ ಹೂಡಿಕೆ ಮಾಡಲಾಗಿದೆ. ಇದು ಅಲ್ಪಾವಧಿ ಸಾಲ ಮತ್ತು ಮುಂಗಡವಾಗಿದ್ದರೂ ವರ್ಷ ಕಳೆದರೂ ವಸೂಲಾತಿಗೆ ಕ್ರಮ ಕೈಗೊಂಡಿಲ್ಲ. 2011– 12ರಲ್ಲಿ ಅಲ್ಪಾವಧಿ ಮೂಲಗಳಿಂದ ದೀರ್ಘಾವಧಿ ಬಳಕೆಗೆ ಪಡೆದ ₹ 732 ಕೋಟಿ ದುಡಿಯುವ ಬಂಡವಾಳವನ್ನು ಬ್ಯಾಂಕ್‌ ಅನುಮತಿ ಪಡೆಯದೆ ಬೇರೆ ಉದ್ದೇಶಗಳಿಗೆ ವರ್ಗಾಯಿಸಲಾಗಿದೆ. 

ಕಂಪನಿ ಉಪಕರಣಗಳು ಮಾರಾಟವಾಗದೆ ಉಳಿದಿದ್ದರೂ, ಲೆಕ್ಕಪತ್ರಗಳಲ್ಲಿ ಕಂಪನಿಯ ಹಣಕಾಸು ಸ್ಥಿತಿ ಉತ್ತಮವಾಗಿದೆ ಎಂದು ಬಿಂಬಿಸಲಾಗಿದೆ. 180 ದಿನ ಮೀರಿದ್ದರೂ ವ್ಯಾಪಾರ ಮೂಲಗಳಿಂದ ವಸೂಲಾಗದ ಬಾಕಿ 2015–16ರವರೆಗೆ ₹ 585 ಕೋಟಿ ಆಗಿದೆ. ಆದರೆ, ಬಾಕಿ ಉಳಿಸಿಕೊಂಡವರ ವಿವರಗಳು, ‘ನಿಮ್ಮ ಗ್ರಾಹಕರನ್ನು ಅರಿಯಿರಿ’ (ಕೆವೈಸಿ) ದಾಖಲೆ ಜೊತೆ ಹೋಲಿಕೆ ಆಗಿಲ್ಲ ಎಂದು ಆರೋಪಿಸಿದೆ.

ಮೇಲ್ನೋಟಕ್ಕೆ ಈ ಆರೋಪಗಳಲ್ಲಿ ಸತ್ಯಾಂಶ ಕಂಡುಬಂದಿದೆ ಎಂದು ಕೇಂದ್ರ ತನಿಖಾ ದಳ ತಿಳಿಸಿದೆ.

ಪ್ರತಿಕ್ರಿಯಿಸಿ (+)