ಕೊಪ್ಪಳ ಬೆಟಗೇರಿ ಗ್ರಾಮ: 10ಕ್ಕೂ ಹೆಚ್ಚು ಜಿಂಕೆ–ಕೃಷ್ಣಮೃಗ ಸಾವು

7
ಪ್ರಾಣಿಪ್ರಿಯರ ಬೇಸರ

ಕೊಪ್ಪಳ ಬೆಟಗೇರಿ ಗ್ರಾಮ: 10ಕ್ಕೂ ಹೆಚ್ಚು ಜಿಂಕೆ–ಕೃಷ್ಣಮೃಗ ಸಾವು

Published:
Updated:
Deccan Herald

ಕೊಪ್ಪಳ: ತಾಲ್ಲೂಕಿನ ಬೆಟಗೇರಿ ಹಾಗೂ ಅಳವಂಡಿ ಗ್ರಾಮಗಳಲ್ಲಿ ಮೂರು ದಿನಗಳಲ್ಲಿ ಹತ್ತಕ್ಕೂ ಹೆಚ್ಚು ಜಿಂಕೆ ಹಾಗೂ ಕೃಷ್ಣಮೃಗಗಳು ಮೃತಪಟ್ಟಿವೆ.

ಸೈನಿಕಹುಳು ರೋಗ ನಿಯಂತ್ರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಸಿಂಪರಣೆ ಮಾಡಿದ್ದ ಬೆಳೆ ಹಾಗೂ ಮೆಕ್ಕೆಜೋಳದ ಎಳೆಸುಳಿ ತಿಂದು ಈ ಪ್ರಾಣಿಗಳು ಮೃತಪಟ್ಟಿವೆ ಎನ್ನಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಶನಿವಾರ ಮತ್ತೆರೆಡು ಕೃಷ್ಣಮೃಗಗಳ ಮೃತದೇಹ ಪತ್ತೆಯಾಗಿದ್ದು, ಕಣ್ಣುಗುಡ್ಡೆಗಳು ಹೊರಗೆ ಬಿದ್ದಿದ್ದು, ದೇಹಗಳು ಊದಿಕೊಂಡಿವೆ. ಜಿಂಕೆಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಅರಣ್ಯ ಅಧಿಕಾರಿ ಯಶಪಾಲ್ ಕ್ಷೀರಸಾಗರ ಅವರನ್ನು ಸಂಪರ್ಕಿಸಿದಾಗ 'ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ' ಎಂದು ಹೇಳಿದರು.

‘ಈ ಭಾಗದಲ್ಲಿ ಜಿಂಕೆ–ಕೃಷ್ಣಮೃಗಗಳ ಹಾವಳಿ ಮಿತಿ ಮೀರಿದ್ದು, ಅಲ್ಪ ಮಳೆಯಲ್ಲಿಯೇ ರೈತರು ಬೆಳೆದಿದ್ದ ಮೆಕ್ಕೆಜೋಳ, ಶೇಂಗಾ ಮುಂತಾದ ಬೆಳೆಗಳನ್ನು ತಿಂದು ಹಾಳು ಮಾಡಿವೆ. ಯಾರೋ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ರಾಸಾಯನಿಕ ಮಿಶ್ರಣ ಮಾಡಿದ್ದರಿಂದ ಈ ರೀತಿ ಸತ್ತಿವೆ’ ಎಂದು ರೈತ ವಿರೂಪಾಕ್ಷಪ್ಪ ಅವರು ತಿಳಿಸಿದರು.

ಗ್ರಾಮಕ್ಕೆ ಭೇಟಿ ನೀಡಿದಾಗ ರಾಸಾಯನಿಕ ಸಿಂಪರಣೆ ಮಾಡಿದ ಹೊಲಗಳ ವ್ಯಾಪ್ತಿಯಲ್ಲಿ ಇವು ಸತ್ತು ಬಿದ್ದಿದ್ದು, ರೈತರ ಸಂಶಯಕ್ಕೆ ಪುಷ್ಟಿ ನೀಡಿದೆ. ಎಲ್ಲ ರೀತಿಯಿಂದಲೂ ತನಿಖೆ ನಡೆಸುತ್ತಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

**

ನರಿ, ತೋಳ, ಕತ್ತೆ ಕಿರುಬಗಳ ಉಗುರಿನ ಗುರುತು ಸತ್ತ ಪ್ರಾಣಿಗಳ ಮೇಲೆ ಕಂಡು ಬಂದಿದೆ. ವಿಷಪ್ರಾಶನವಾಗಿದೆಯೇ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತದೆ
- ಯಶಪಾಲ್ ಕ್ಷೀರಸಾಗ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಕೊಪ್ಪಳ

**

ರಾಸಾಯನಿಕ ಮಿಶ್ರಿತ ಬೆಳೆ ತಿಂದು ಸಾವು ಶಂಕೆ
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ
ಮರಣೋತ್ತರ ಪರೀಕ್ಷೆ ವರದಿ ನಂತರ ನಿಖರ ಕಾರಣ ಪತ್ತೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !