7
ಜಿಲ್ಲಾ ಪಂಚಾಯ್ತಿ ಸಿಇಒಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

‘10 ಕೋಟಿ ಮಾನವ ದಿನ ಸೃಜಿಸಲು ಗುರಿ’

Published:
Updated:

ಬೆಂಗಳೂರು: ‘ನರೇಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಯಡಿ ಪ್ರಸಕ್ತ ವರ್ಷ 10 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ ಮೂಲಕ ₹ 3,500 ಕೋಟಿ ಮೌಲ್ಯದ ಆಸ್ತಿ ನಿರ್ಮಾಣ ಹಾಗೂ ಕಾಮಗಾರಿ ಕೈಗೆತ್ತಿಕೊಳ್ಳಲುಉದ್ದೇಶಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ’ ಎಂದರು.

‘ರಾಜ್ಯದಲ್ಲಿ 17 ಸಾವಿರ ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಈ ಹಿಂದೆಯೇ ಮಂಜೂರಾತಿ ನೀಡಲಾಗಿತ್ತು. ಆ ಪೈಕಿ 13,967 ಸಾವಿರ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, 1,100 ಘಟಕಗಳನ್ನು ಕಾರ್ಯನಿರ್ವಹಿಸುತ್ತಿಲ್ಲ. ಅಂಥ ಘಟಕಗಳನ್ನು ವಾರದೊಳಗೆ ಗುರುತಿಸಿ ಸಮಗ್ರ ವರದಿ ನೀಡಲು ಕಾರ್ಯಪಡೆ ರಚಿಸಲಾಗುವುದು’ ಎಂದರು.

‘ಕೆಟ್ಟು ನಿಂತಿರುವ ಘಟಕಗಳು ಜುಲೈ 15ರ ಒಳಗೆ ಕಾರ್ಯನಿರ್ವಹಿಸುವಂತೆ ಮಾಡಬೇಕು. ಇನ್ನೂ 3 ಸಾವಿರ ಘಟಕಗಳ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಕುಡಿಯುವ ನೀರು ಪೂರೈಕೆ ಸಂಬಂಧಿಸಿದ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಜುಲೈ 1ರ ಒಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಸಚಿವರು ವಿವರಿಸಿದರು.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಸ್ವಚ್ಛ ಭಾರತ್ ಅಭಿಯಾನದಡಿ ಅ. 2ರ ಒಳಗೆ ರಾಜ್ಯವನ್ನು ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಬೇಕಿದೆ. 6–7 ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಆಮೆಗತಿಯಲ್ಲಿದೆ. ಅದಕ್ಕೆ ಕಾರಣವೇನೆಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ’ ಎಂದರು.

‘ಕೇಂದ್ರದ ₹ 1,050 ಕೋಟಿ ಬಾಕಿ’
‘ನರೇಗಾ ಯೋಜನೆಯ ಅನುದಾನ ₹ 1,550 ಕೋಟಿ ಕೇಂದ್ರ ಸರ್ಕಾರದಿಂದ ಬರಬೇಕಿತ್ತು. ಆ ಹಣ ಬರುವ ಮೊದಲೇ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ರಾಜ್ಯ ಸರ್ಕಾರ ಮುಂಗಡವಾಗಿ ಹಣ ನೀಡಿದೆ. ಆದರೆ, ಕೇಂದ್ರದಿಂದ ₹ 450 ಕೋಟಿ ಮಾತ್ರ ಬಂದಿದ್ದು, ಬಾಕಿ ₹ 1,050 ಕೋಟಿ ಬರಬೇಕಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಲಿದ್ದು, ಬಾಕಿ ಹಣ ತಕ್ಷಣ ಬಿಡುಗಡೆ ಮಾಡುವಂತೆ ಆ ವೇಳೆ ಆಗ್ರಹಿಸುತ್ತೇನೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !