ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳದೆ ಮರೆಯಾದ ವೈದ್ಯ ದಂಪತಿ

Last Updated 28 ಮಾರ್ಚ್ 2018, 19:55 IST
ಅಕ್ಷರ ಗಾತ್ರ

ಮೈಸೂರು: ವೈದ್ಯ ದಂಪತಿ ಡಾ.ಎನ್‌.ಸತೀಶಕುಮಾರ್‌ (56) ಮತ್ತು ಡಾ.ಜಿ.ವೀಣಾ (57) ಒಂದೇ ಸೀರೆಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಗರದ ಸರಸ್ವತಿಪುರಂ 14ನೇ ಮುಖ್ಯರಸ್ತೆಯಲ್ಲಿರುವ ಮನೆಯ ಎರಡನೇ ಮಹಡಿಯ ಕೋಣೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾಗಿದ್ದಾರೆ. ಹೃದ್ರೋಗದಿಂದ ಬಳಲುತ್ತಿದ್ದ ಪತಿಯನ್ನು, ಪತ್ನಿ ಬೆಳಿಗ್ಗೆಯಷ್ಟೇ ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಮನೆಗೆ ಕರೆತಂದಿದ್ದರು.

‘ಸತೀಶಕುಮಾರ್‌ ಅವರಿಗೆ ಮಂಗಳವಾರ ಎದೆನೋವು ಕಾಣಿಸಿಕೊಂಡಿದ್ದರಿಂದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದಲ್ಲಿ ಮೂರು ರಂಧ್ರಗಳು ಇರುವುದು ಪರಿಶೀಲನೆಯ ವೇಳೆ ಖಚಿತವಾಗಿತ್ತು. ಹೀಗಾಗಿ, ತೆರೆದ ಹೃದಯ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದರು. ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿ ಬರುವುದಾಗಿ ಭರವಸೆ ನೀಡಿ ಮನೆಗೆ ಬಂದಿದ್ದರು’ ಎಂದು ಸರಸ್ವತಿಪುರಂ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಬೆಳಿಗ್ಗೆ 9.30ಕ್ಕೆ ಆಸ್ಪತ್ರೆಯಿಂದ ಮನೆಗೆ ಬಂದ ಅತ್ತಿಗೆ ಹಾಗೂ ಅಣ್ಣನನ್ನು ಮಾತನಾಡಿಸಿಕೊಂಡು 11ಕ್ಕೆ ಮನೆಗೆ ಮರಳಿದೆ. 45 ನಿಮಿಷ ಕಳೆದು ಟೀ ಸೇವಿಸಲು ಬರುವಂತೆ ಕೂಗಿ ಕರೆದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ವಿಶ್ರಾಂತಿ ಪಡೆಯುತ್ತಿರಬಹುದೆಂದು ಭಾವಿಸಿ ಮತ್ತೆ ಕರೆಯುವ ಪ್ರಯತ್ನ ಮಾಡಲಿಲ್ಲ. ಮಧ್ಯಾಹ್ನ 2ಕ್ಕೆ ಊಟಕ್ಕೆ ಕರೆತರಲು ಮನೆಯ ಬಾಗಿಲು ತೆರೆದಾಗಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದ್ದು’ ಎಂದು ಸಹೋದರ ಪಿ.ಎನ್‌.ಚಂದ್ರಶೇಖರ್‌ ಕಣ್ಣೀರಾದರು.

ಪಿರಿಯಾಪಟ್ಟಣದ ಕೋಟೆ ಬಡಾವಣೆಯ ಸತೀಶ, 30 ವರ್ಷಗಳ ಹಿಂದೆ ವಾಸಸ್ಥಾನವನ್ನು ಮೈಸೂರಿಗೆ ಬದಲಾಯಿಸಿದ್ದರು. ಸಹೋದರರೊಂದಿಗೆ ಒಂದೇ ಕಟ್ಟಡದಲ್ಲಿ ವಾಸವಾಗಿದ್ದರು. ನೆಲಮಹಡಿಯಲ್ಲಿ ಚಂದ್ರಶೇಖರ್‌, ಮಧ್ಯದಲ್ಲಿ ವೈದ್ಯ ದಂಪತಿ ಹಾಗೂ 2ನೇ ಮಹಡಿಯಲ್ಲಿ ಕಿರಿಯ ಸಹೋದರ ನೆಲೆಸಿದ್ದರು. ಕೂಡು ಕುಟುಂಬದ ರೀತಿಯಲ್ಲಿ ಎಲ್ಲರೂ ಒಟ್ಟಾಗಿದ್ದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಂಎಂಸಿಆರ್‌ಐ) ವೈದ್ಯಕೀಯ ಪದವಿ ಪಡೆದಿದ್ದ ಸತೀಶಕುಮಾರ್‌ ಹಾಗೂ ವೀಣಾ ಪ್ರೀತಿಸಿ ವಿವಾಹವಾಗಿದ್ದರು. ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದ ಇವರಿಗೆ ರಾಜಸ್ಥಾನದ ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮದಲ್ಲಿ ಕೆಲಸ ಸಿಕ್ಕಿತ್ತು. ಕೇಂದ್ರ ಸರ್ಕಾರದ ಉದ್ಯೋಗವನ್ನು ತೊರೆದು ಕಲಬುರ್ಗಿಯ ಬಿರ್ಲಾ ಸಿಮೆಂಟ್‌ ಕಾರ್ಖಾನೆಯಲ್ಲಿ ವೈದ್ಯರಾಗಿದ್ದರು.

ಪುತ್ರ ವಿಶಾಖಗೆ (20) ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಸಿಕ್ಕಿತ್ತು. ಹೀಗಾಗಿ, ಮೈಸೂರಿಗೆ ಮರಳಿ ಸರಸ್ವತಿಪುರಂನಲ್ಲಿ ಕ್ಲಿನಿಕ್‌ ತೆರೆದಿದ್ದರು. 2007ರ ಫೆ.27ರಂದು ಕುಕ್ಕರಹಳ್ಳಿಕೆರೆಯ ಪ್ರವೇಶದ್ವಾರದ ಬಳಿ ಸಂಭವಿಸಿದ ಅಪಘಾತದಲ್ಲಿ ಪುತ್ರ ಮೃತಪಟ್ಟಿದ್ದ. ಪೋಷಕರು ಕೊಡಿಸಿದ್ದ ಹೊಸ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವಿಶಾಖನಿಗೆ ಬಸ್‌ ಡಿಕ್ಕಿ ಹೊಡೆದಿತ್ತು. ಇದು ವೈದ್ಯ ದಂಪತಿಯ ಮಾನಸಿಕ ಆಘಾತಕ್ಕೂ ಕಾರಣವಾಗಿತ್ತು.

‘ಮಗನನ್ನು ಕಳೆದುಕೊಂಡ ನೋವು ಮರೆಯಲು ಅಣ್ಣ–ಅತ್ತಿಗೆಗೆ ಹಲವು ವರ್ಷ ಹಿಡಿಯಿತು. 2011ರಲ್ಲಿ ಕ್ಲಿನಿಕ್‌ ಬಾಗಿಲು ಮುಚ್ಚಿ ದೇಶ ಸಂಚಾರದಲ್ಲಿ ತೊಡಗಿದರು. ವರ್ಷದಲ್ಲಿ 8 ತಿಂಗಳು ಮನೆಯಿಂದ ಹೊರಗೇ ಇರುತ್ತಿದ್ದರು. ಯೂಥ್‌ ಹಾಸ್ಟೆಲ್‌ ಅಸೋಷಿಯೇಷನ್‌ ಆಫ್‌ ಇಂಡಿಯಾದಲ್ಲಿ ಸಕ್ರಿಯರಾಗಿದ್ದರು. ಬಹುತೇಕ ಸಮಯವನ್ನು ಹಿಮಾಲಯ ಪರ್ವತದಲ್ಲಿ ಕಳೆಯುತ್ತಿದ್ದರು. ಟ್ರಕಿಂಗ್‌ ತಂಡಗಳಿಗೆ ವೈದ್ಯಕೀಯ ನೆರವು ನೀಡುತ್ತಿದ್ದರು. ಮೂರು ತಿಂಗಳು ಮನಾಲಿಯಲ್ಲಿ ಕಳೆದು ಡಿಸೆಂಬರ್‌ನಲ್ಲಿ ಮೈಸೂರಿಗೆ ಮರಳಿದ್ದರು’ ಎಂದು ಚಂದ್ರಶೇಖರ್‌ ಗದ್ಗದಿತರಾದರು.

‘ಮುಂದಿನ ತಿಂಗಳು ಮತ್ತೆ ಟ್ರಕಿಂಗ್‌ ಹೊರಡಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಅಣ್ಣನಿಗೆ ಎದೆನೋವು ಕಾಣಿಸಿಕೊಂಡಿತ್ತು. ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಪ್ರವಾಸಕ್ಕೆ ಇದರಿಂದ ಅಡ್ಡಿಯಾಗುತ್ತದೆ ಎಂಬ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಸಂಶಯ ವ್ಯಕ್ತಪಡಿಸಿದರು. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT