ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಸ ಸಾಹಿತ್ಯವೇ ಕರ್ನಾಟಕ ಸಂಗೀತಕ್ಕೆ ಆಧಾರ’

ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಸಮ್ಮೇಳನ
Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಸಂಗೀತದ ಸಮಗ್ರ ಬೆಳವಣಿಗೆಗೆ ದಾಸ ಸಾಹಿತ್ಯದ ಕೊಡುಗೆ ಅನನ್ಯ’ ಎಂದು ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆರ್‌.ಎನ್‌.ತಾರಾನಾಥನ್‌ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮಹಾಲಕ್ಷ್ಮಿ ಬಡಾವಣೆಯ ಶಂಕರಮಠ ಉದ್ಯಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ದಾಸ ಪರಂಪರೆಯ ಅಧ್ಯಯನ, ಮನನ, ಚಿಂತನೆ ಇಂದಿನ ಕಾಲಕ್ಕೆ ಅಗತ್ಯ. ಸಂಸ್ಕೃತ, ವೇದಗಳಲ್ಲಿನ ವಿಚಾರಗಳನ್ನು ಸಾಮಾನ್ಯರಿಗೆ ಅರ್ಥೈಸುವ ಕೆಲಸವನ್ನು ದಾಸ ಪಂಥ ಮಾಡಿದೆ ಎಂದರು.

ನರಹರಿತೀರ್ಥರು, ಹರಿದಾಸರು, ವ್ಯಾಸತೀರ್ಥರು, ವಾದಿರಾಜರು ಕೀರ್ತನೆಗಳನ್ನು ರಚಿಸುವ ಮೂಲಕ ಸಂಗೀತ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪುರಂದರದಾಸರು ಈ ಹರಿದಾಸ ಪಂಥದಲ್ಲಿ ಅಗ್ರಗಣ್ಯರು. ಅವರು ಕರ್ನಾಟಕ ಸಂಗೀತಕ್ಕೊಂದು ಭದ್ರ ಬುನಾದಿ ಹಾಕಿದರು ಎಂದು ಹೇಳಿದರು.

ಭಾರತೀಯರ ಧರ್ಮ, ಸಂಸ್ಕೃತಿ, ಆಚಾರ, ಪದ್ಧತಿ ಎಲ್ಲವನ್ನೂ ಪಾಶ್ಚಾತ್ಯ ದೇಶಗಳು ಅನುಸರಿಸುತ್ತಿವೆ. ಆದರೆ, ನಮ್ಮ ಯುವಜನರೇ ಅವುಗಳನ್ನು ಮರೆಯುತ್ತಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ನಮ್ಮ ಸಂಸ್ಕೃತಿ ಬೇರೂರುವಂತೆ ಮಾಡುವ ಅಗತ್ಯವಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕವಿ ದೊಡ್ಡರಂಗೇಗೌಡ, ‘ಆಂಗ್ಲ ಸಾಹಿತ್ಯ ಓದಿಕೊಂಡಿರುವ, ಅರೆಬರೆ ಇಂಗ್ಲಿಷ್‌ ಮಾತನಾಡುವ ವಿದ್ಯಾವಂತರು ಕನ್ನಡ ಎಂದರೆ ಮೂಗು ಮುರಿಯುತ್ತಾರೆ. ಇಂಗ್ಲೆಂಡ್‌ನಲ್ಲಿ ಇಂಗ್ಲಿಷ್‌ ಭಾಷೆ ಕಣ್ಣು ಬಿಡುವ ಮೊದಲೇ ಕನ್ನಡದಲ್ಲಿ ಸಾಕಷ್ಟು ಕೃತಿಗಳು ಬಂದಿದ್ದವು ಎನ್ನುವುದನ್ನು ಅವರು ತಿಳಿಯಬೇಕು. ನಮ್ಮ ಭಾಷೆ ಕನ್ನಡವಾಗಿರುವುದಕ್ಕೆ ಹೆಮ್ಮೆ ಪಡಬೇಕು’ ಎಂದು ಹೇಳಿದರು.

ವಿಜ್ಞಾನ, ತಂತ್ರಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಬರೆಯಲು ಸಾಧ್ಯವಾಗಿದೆ. ಹೀಗೆಯೇ ವಿದ್ಯುನ್ಮಾನಗಳಲ್ಲಿ ಕನ್ನಡ ಹರಿದಾಡುವ ಪ್ರಮಾಣ ಹೆಚ್ಚಾಗಬೇಕು. ಯುವಜನರು ಕನ್ನಡವನ್ನು ಬೆಳೆಸುವ ಬಗ್ಗೆ ಆಲೋಚಿಸಬೇಕು ಎಂದು ಮನವಿ ಮಾಡಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಸಮ್ಮೇಳನಾಧ್ಯಕ್ಷ ಆರ್‌.ಎನ್‌.ತಾರಾನಾಥನ್‌ ಅವರನ್ನು ಕುರುಬರಹಳ್ಳಿ ವೃತ್ತದ ರಾಜ್‌ಕುಮಾರ್‌ ಪ್ರತಿಮೆ ಬಳಿಯಿಂದ ಕಾರ್ಯಕ್ರಮದ ಸಭಾಂಗಣದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಕವಿಗೋಷ್ಠಿ, ವಿಚಾರ ಸಂಕಿರಣ, ವಿವಿಧ ಜನಪದ ತಂಡಗಳಿಂದ ಕಲಾಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT