‘108’ ಸೇವೆಗೆ ‘ಲಾಬಿ’ ಕವಚ!

7
ಜಿವಿಕೆ–ಇಎಂಆರ್‌ಐ ಒಪ್ಪಂದ ಮತ್ತೊಂದು ವರ್ಷ ವಿಸ್ತರಣೆ

‘108’ ಸೇವೆಗೆ ‘ಲಾಬಿ’ ಕವಚ!

Published:
Updated:

ಬೆಂಗಳೂರು: ಆರೋಗ್ಯ ಇಲಾಖೆಯ ಬಲವಾದ ಲಾಬಿಗೆ ಮಣಿದು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವು ‘108’ ಆರೋಗ್ಯ ಕವಚ ಆಂಬುಲೆನ್ಸ್ ಸೇವೆಗಾಗಿ ಜಿವಿಕೆ–ಇಎಂಆರ್‌ಐ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಮತ್ತೆ ಒಂದು ವರ್ಷ ವಿಸ್ತರಿಸಿದೆ ಎಂಬ ಆರೋಪ ವ್ಯಕ್ತವಾಗಿದೆ.

ಜಿವಿಕೆ– ಇಎಂಆರ್‌ಐ ಜೊತೆ 2008ರ ಆ.14ರಂದು 10 ವರ್ಷ ಅವಧಿಗೆ ಟೆಂಡರ್‌ ಇಲ್ಲದೆ ಸೇವೆ ನೀಡಲು ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ‘10 ವರ್ಷಗಳು ಮುಗಿದ ನಂತರ ಜಿವಿಕೆ ಸಂಸ್ಥೆಯ ಜತೆಗೆ ಒಪ್ಪಂದ ಮುಂದುವರಿಸುವುದು ಬೇಡ. ಹೊಸಬರಿಗೆ ಅವಕಾಶ ಕೊಡೋಣ. ಇದಕ್ಕಾಗಿ ಟೆಂಡರ್ ಕರೆಯಿರಿ’ ಎಂದು ಆರೋಗ್ಯ ಸಚಿವರು 2017ರ ಡಿಸೆಂಬರ್‌ನಲ್ಲೇ ನಿರ್ದೇಶನ ನೀಡಿದ್ದರು.

ಆದರೆ, ಹೊಸ ಸಂಸ್ಥೆಯ ಆಯ್ಕೆಗೆ ಇಲಾಖೆಯ ಅಧಿಕಾರಿಗಳು ಟೆಂಡರ್‌ ಕರೆಯುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಒಪ್ಪಂದ ರದ್ದುಪಡಿಸಿದ ಬಳಿಕವೂ ಸೇವೆ ಮುಂದುವರಿಸಲು ಅವಕಾಶ ಮಾಡಿಕೊಡಲಾಗಿತ್ತು. ಜಿವಿಕೆ ಸಂಸ್ಥೆಗೆ ರಕ್ಷಾ ಕವಚವಾಗಿ ಕೆಲವು ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂಬ ಆರೋಪಗಳೂ ಇವೆ.

ಗುರುವಾರ (ಅ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದು ವರ್ಷ ಅವಧಿ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ.

ಆಂಬುಲೆನ್ಸ್ ಸೇವೆ ನೀಡದೇ ಬಿಲ್‌ ಪಡೆದಿರುವುದು, ತಪ್ಪು ಲೆಕ್ಕ ತೋರಿಸಿರುವುದು, ಟೆಂಡರ್ ಇಲ್ಲದೇ ಟೈರ್, ಔಷಧ ಖರೀದಿ ಮಾಡಿದೆ ಎಂಬ ದೂರುಗಳು ಜಿವಿಕೆ ವಿರುದ್ಧ ಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಸಮಗ್ರ ವರದಿ ನೀಡಿತ್ತು.

ಅದರ ಆಧಾರದ ಮೇಲೆ, 2017ರ ಜುಲೈ 14ರಂದು ಒಪ್ಪಂದ ರದ್ದುಪಡಿಸಿದ್ದ ಇಲಾಖೆ, ಮೂರು ತಿಂಗಳ (ಅ.13ರವರೆಗೆ) ಅವಧಿಯ ನೋಟಿಸ್‌ ಅವಧಿ ನೀಡಿತ್ತು. ಅದಕ್ಕೂ ಮೊದಲೇ ಸಚಿವ ಸಂಪುಟದ ಅನುಮೋದನೆಯಂತೆ, ಹೊಸ ಸಂಸ್ಥೆಯನ್ನು ನೇಮಿಸಲು ಆರೋಗ್ಯ ಇಲಾಖೆ (2017ರ ಜುಲೈ 1) ಆದೇಶ ಹೊರಡಿಸಿತ್ತು.

‘ಒಪ್ಪಂದ ರದ್ದುಪಡಿಸಿದರೆ  ಜನರಿಗೆ ತೊಂದರೆಯಾಗಲಿದೆ. 2018ರ ಆಗಸ್ಟ್‌ಗೆ ಸಂಸ್ಥೆಯ ಜತೆಗಿನ ಒಪ್ಪಂದದ ಅವಧಿ ಮುಗಿಯುತ್ತದೆ. ಅದಕ್ಕೆ ಟೆಂಡರ್‌ ಕರೆದು ಹೊಸ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳಬೇಕು. ಅಲ್ಲಿಯವರೆಗೆ ಜಿವಿಕೆ ಗ್ರೂಪ್ ಜತೆಗಿನ ಒಪ್ಪಂದ ಮುಂದುವರಿಸಿ’ ಎಂದು ಆರೋಗ್ಯ ಸಚಿವರಾಗಿದ್ದ ಕೆ.ಆರ್‌.ರಮೇಶ್‌ ಕುಮಾರ್ ಸೂಚಿಸಿದ್ದರು.

‘ಯಾವುದೇ ಒತ್ತಡಕ್ಕೆ ಮಣಿದು ಅವಧಿ ವಿಸ್ತರಣೆ ಮಾಡಿಲ್ಲ.  ಆರು ತಿಂಗಳೊಳಗೆ ಹೊಸ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಸಂಸ್ಥೆಗೆ ಹೊಣೆ ವಹಿಸುತ್ತೇವೆ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಜಿವಿಕೆ ವಿರುದ್ಧದ ಆರೋಪಗಳೇನು?

ಇಲಾಖೆಯ ಅಧಿಕಾರಿಗಳ ತನಿಖಾ ತಂಡವು ಬೆಂಗಳೂರು, ಚಿತ್ರದುರ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ 2017ರ ಜುಲೈನಲ್ಲಿ ಪರಿಶೀಲನೆ ನಡೆಸಿ ಅಕ್ರಮಗಳನ್ನು ಬಯಲಿಗೆ ಎಳೆದಿತ್ತು. ‘ಸಂಸ್ಥೆಯ ಅಧಿಕಾರಿಗಳಿಗೆ ಪಂಚತಾರಾ ಹೋಟೆಲ್‌ಗಳಲ್ಲಿ ನೀಡಿದ್ದ ರಾಜಾತಿಥ್ಯಕ್ಕೆ ಸರ್ಕಾರದ ಅನುದಾನ ಬಳಕೆ ಮಾಡಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

‘108 ಸೇವೆಯ ರಾತ್ರಿ ಪಾಳಿಯಲ್ಲಿ ಕೆಲಸ ಮಾಡದೆ ಇದ್ದರೂ ಸಿಬ್ಬಂದಿ ಬಿಲ್‌ ಸಲ್ಲಿಸಿದ್ದಾರೆ. ಸುಳ್ಳು ಪ್ರಕರಣಗಳನ್ನು ಹೇಗೆ ಸೃಷ್ಟಿಸಬೇಕು ಎಂಬ ಬಗ್ಗೆ ಜಿಲ್ಲಾ ಮಟ್ಟದ ಸಿಬ್ಬಂದಿಗೆ ರಾಜ್ಯ ಮಟ್ಟದ 108 ಕರೆ ಕೇಂದ್ರದಿಂದ ಸೂಚಿಸಲಾಗಿತ್ತು. ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಹಣ ಪಡೆಯಲಾಗಿತ್ತು’‌ ಎಂಬ ಅಂಶಗಳು ವರದಿಯಲ್ಲಿದ್ದವು.

‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಆಂಬ್ಯುಲೆನ್ಸ್‌ಗಳ ಕಾರ್ಯಾಚರಣೆ ವೆಚ್ಚ ಕಡಿಮೆ ಇದೆ. ಆದರೆ, ಆಂಬುಲೆನ್ಸ್‌ಗಳಿಗೆ ಜಿಪಿಎಸ್‌ ಅಳವಡಿಸಿಲ್ಲ. ಇದರಿಂದ ಅವುಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತಿಲ್ಲ. ಇದು ಸಹ ಅಕ್ರಮಕ್ಕೆ ಕಾರಣ’ ಎಂದು ಅಧಿಕಾರಿಯೊಬ್ಬರು ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !