ಜೀತಗಿದ್ದ 135 ಕಾರ್ಮಿಕರು ಬಂಧಮುಕ್ತ

ಶನಿವಾರ, ಏಪ್ರಿಲ್ 20, 2019
27 °C
ಬೆಂಗಳೂರು, ರಾಮನಗರ ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ * ಮೂರು ತಿಂಗಳಿನಲ್ಲಿ ಐದು ಕಡೆ ಕಾರ್ಯಾಚರಣೆ

ಜೀತಗಿದ್ದ 135 ಕಾರ್ಮಿಕರು ಬಂಧಮುಕ್ತ

Published:
Updated:

ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದ್ದು, ಆ ಜಾಲದೊಳಗೆ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದ 135 ಮಂದಿ ಜೀತದಾಳುಗಳನ್ನು ರಕ್ಷಿಸಿ ಬಂಧಮುಕ್ತಗೊಳಿಸಲಾಗಿದೆ.

ಆರ್ಥಿಕ ಸಂಕಷ್ಟ ಹಾಗೂ ಅನಕ್ಷರತೆಯಿಂದಾಗಿ ಬಹುಪಾಲು ಕಾರ್ಮಿಕರು, ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ. ಆ ಪೈಕಿ 135 ಮಂದಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಇಂಟರ್‌ನ್ಯಾಷನಲ್‌ ಜಸ್ಟಿಸ್‌ ಮಿಷನ್‌ (ಐಜೆಎಂ) ಸ್ವಯಂ ಸೇವಾ ಸಂಸ್ಥೆಯ ಸದಸ್ಯರು, ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿ ಕಾರ್ಮಿಕರಿಗೆ ಜೀತ ಪದ್ಧತಿಯಿಂದ ಮುಕ್ತಿ ಕೊಡಿಸಿದ್ದಾರೆ.

‘ಪ್ರಸಕ್ತ ವರ್ಷದ ಜನವರಿಯಿಂದ ಮಾರ್ಚ್‌ವರೆಗೆ ಮೂರು ಜಿಲ್ಲೆಗಳ 5 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ರಕ್ಷಿಸಲ್ಪಟ್ಟ ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ’ ಎಂದು ಐಜೆಎಂ ಸಹ ನಿರ್ದೇಶಕಿ ಎಂ. ಪ್ರತಿಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೀತದಾಳುಗಳನ್ನು ದುಡಿಸಿಕೊಳ್ಳುತ್ತಿದ್ದ ಕಾರ್ಖಾನೆಗಳ ಮಾಲೀಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 10 ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಎಲ್ಲ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸದ್ಯದಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ’ ಎಂದರು. 

4,306 ಕಾರ್ಮಿಕರ ಸಂದರ್ಶಿಸಿ ಸಮೀಕ್ಷೆ: ‘ಜೀತ ಪದ್ಧತಿ ಸಂಬಂಧ 2018ರಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಮೂರು ಜಿಲ್ಲೆಗಳ 3,765 ಕೆಲಸದ ಸ್ಥಳಗಳಲ್ಲಿ ಕೆಲಸ ಮಾಡುವ 4,306 ಕಾರ್ಮಿಕರನ್ನು ಸಂದರ್ಶಿಸಿ ವರದಿ ಸಿದ್ಧಪಡಿಸಲಾಯಿತು. ಆ ವರದಿಯನ್ನು ಸೆಪ್ಟೆಂಬರ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಲ್ಲಿಸಲಾಗಿದೆ’ ಎಂದು ಪ್ರತಿಮಾ ಹೇಳಿದರು.

‘ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಬಿಹಾರ ಹಾಗೂ ಉತ್ತರ ಕರ್ನಾಟಕದಿಂದ ಹೆಚ್ಚು ಮಂದಿ ಈ ಜಿಲ್ಲೆಗಳಿಗೆ ವಲಸೆ ಬರುತ್ತಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಜೀತದಾಳುಗಳಾಗಿ ಕೆಲಸ ಮಾಡುತ್ತಿರುವುದು ಸಮೀಕ್ಷೆಯಿಂದ ಗೊತ್ತಾಯಿತು’ ಎಂದು ತಿಳಿಸಿದರು.

‘ಇಟ್ಟಿಗೆ ತಯಾರಿಕೆ, ಮೀನು ಹಾಗೂ ಕೋಳಿ ಫಾರಂಗಳು, ತೋಟಗಾರಿಕೆ, ಕಲ್ಲು ಗಣಿಗಾರಿಕೆ, ಅಕ್ಕಿ ಗಿರಣಿ, ತಂಬಾಕು ಉತ್ಪನ್ನಗಳ ತಯಾರಿಕೆ ಕಾರ್ಖಾನೆಗಳಲ್ಲಿ ಜೀತ ಪದ್ಧತಿ ಇದೆ. ಅಂಥ ಕೆಲಸದ ಸ್ಥಳದಲ್ಲಿ ಜೀತ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ’ ಎಂದರು.

ಮಾನವ ಕಳ್ಳ ಸಾಗಣೆ ಅವ್ಯಾಹತ: ‘ಕಾರ್ಮಿಕರನ್ನು ಮಾನವ ಕಳ್ಳ ಸಾಗಣೆ ಮೂಲಕ ಕೆಲಸಕ್ಕೆ ಕರೆತಂದು ಜೀತ ಪದ್ಧತಿಯೊಳಗೆ ನೂಕಲಾಗುತ್ತಿದೆ. ಮೂರು ಜಿಲ್ಲೆಗಳಲ್ಲಿರುವ ಜೀತದಾಳುಗಳ ಪೈಕಿ ಶೇ 59.30ರಷ್ಟು ಮಂದಿಯನ್ನು ಮಾನವ ಕಳ್ಳ ಸಾಗಣೆ ಮೂಲಕ ಕರೆತಂದಿರುವುದು ಸಮೀಕ್ಷೆಯಿಂದ ತಿಳಿಯಿತು’ ಎಂದು ಪ್ರತಿಮಾ ಹೇಳಿದರು.

‘ಮುಂಗಡವಾಗಿ ಹಣ ಕೊಟ್ಟು ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಳ್ಳಲಾಗುತ್ತಿದೆ. ಮುಂಗಡ ಹಣ ಬಡ್ಡಿ ಸಮೇತ ತೀರುವವರೆಗೂ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಹಣ ತೀರಿದ ಬಳಿಕವೂ ದುಡಿಸಿಕೊಳ್ಳುವ ಮಾಲೀಕರು ಇದ್ದಾರೆ. ಜೀತ ಕಾರ್ಮಿಕರನ್ನು ವಾರದ ಏಳು ದಿನವೂ ದುಡಿಸಿಕೊಳ್ಳಲಾಗುತ್ತಿದ್ದು, ಯಾವುದೇ ರಜೆ ನೀಡುತ್ತಿಲ್ಲ. ಹಬ್ಬ–ಹರಿದಿನವನ್ನೂ ಆಚರಿಸಲು ಬಿಡುತ್ತಿಲ್ಲ’ ಎಂದರು.

‘ಜೀತ ಪದ್ಧತಿ ನಿರ್ಮೂಲನೆಗಾಗಿ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿಗಳಿದ್ದು, ಅಷ್ಟಾದರೂ ಈ ಪದ್ಧತಿ ಇನ್ನೂ ಜೀವಂತವಾಗಿದೆ. ಆ ಸಮಿತಿಗಳು ಮತ್ತಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕಾಗಿದೆ’ ಎಂದು ಹೇಳಿದರು.

‘₹18 ಸಾವಿರ ಮುಂಗಡ ಹಣಕ್ಕೆ 10 ವರ್ಷ ಕೆಲಸ’

ಇತ್ತೀಚೆಗಷ್ಟೇ ನಡೆಸಿದ್ದ ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ ಜೀತದಾಳು ಒಬ್ಬರಿಗೆ, ₹18 ಸಾವಿರವನ್ನು ಮುಂಗಡವಾಗಿ ಕೊಟ್ಟು 10 ವರ್ಷಗಳಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು.

ಆ ಬಗ್ಗೆ ಮಾತನಾಡಿದ ಜೀತದಾಳು, ‘ಮಾಲೀಕರು ನಮ್ಮನ್ನೂ ಹೊರಗೆಯೇ ಬಿಡುತ್ತಿರಲಿಲ್ಲ. 10 ವರ್ಷಗಳಿಂದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ಹೊರಗಿನ ಪ್ರಪಂಚ ಹೇಗಿದೆ ಎಂಬುದೇ ನನಗೆ ಗೊತ್ತಿರಲಿಲ್ಲ’ ಎಂದರು.

ಇನ್ನೊಬ್ಬ ಜೀತದಾಳು, ‘ಆರೋಗ್ಯ ಹದಗೆಟ್ಟು ಹೋಯಿತು. ಕೆಲಸ ಬಿಡುವುದಾಗಿ ಹೇಳಿದ್ದಕ್ಕೆ ಮಾಲೀಕರು, ನನ್ನ ಮೇಲೆಯೇ ದಬ್ಬಾಳಿಕೆ ಮಾಡಿದರು. ಕೆಲಸದ ಸ್ಥಳದಲ್ಲಿದ್ದ ಮಹಿಳೆಯರಿಗೆ ಮಾಲೀಕರು ಕಿರುಕುಳ ನೀಡುತ್ತಿದ್ದರು’ ಎಂದು ಅಳಲು ತೋಡಿಕೊಂಡರು.

ಜೀತ ಕಾರ್ಮಿಕರು ಯಾರು?

‘ಕೈ–ಕಾಲಿಗೆ ಕೊಳ ಹಾಕಿ ದುಡಿಸಿಕೊಳ್ಳುವುದಷ್ಟೇ ಜೀತ ಪದ್ಧತಿಯಲ್ಲ. ಅದರ ಹೊರತಾಗಿ ಹಲವು ಅಂಶಗಳಿಂದ ಜೀತ ಪದ್ಧತಿಯನ್ನು ಗುರುತಿಸಲಾಗುತ್ತದೆ. ಆ ಅಂಶಗಳನ್ನು ‘ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆ–1976’ರಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪ್ರತಿಮಾ ಹೇಳಿದರು.

ನಿಯಮದ ಅಂಶಗಳು:

* ಕನಿಷ್ಠ ಕೂಲಿ ಸಿಗದೇ ಕೆಲಸ ಮಾಡುತ್ತಿರುವವರು ಜೀತ ಕಾರ್ಮಿಕರು.

* ಮುಂಗಡ ಹಣವನ್ನು ಪಡೆದುಕೊಂಡು ಅದನ್ನು ತೀರಿಸುವುದಕ್ಕಾಗಿ ದುಡಿಯುವವರು

* ಒಂದೇ ಸ್ಥಳದಲ್ಲಿ ಕೂಡಿ ಹಾಕಿ, ಹೊರಗೆ ಹೋಗಲು ಸ್ವಾತಂತ್ರ್ಯ ಇಲ್ಲದೇ ಕೆಲಸ ಮಾಡುವವರು

* ಮಾಲೀಕರ ಅಕ್ರಮ ಬಂಧನದಲ್ಲಿದ್ದು ದುಡಿಯುವ ಕಾರ್ಮಿಕ ವರ್ಗ

***

16,70,734 ಮೂರು ಜಿಲ್ಲೆಗಳಲ್ಲಿರುವ ಕಾರ್ಮಿಕರು

 5,58,334 ಜೀತ ಪದ್ಧತಿಯಲ್ಲಿ ಸಿಲುಕಿದ್ದಾರೆ ಎನ್ನಲಾದ ಕಾರ್ಮಿಕರು

 (ಆಧಾರ: ಇಂಟರ್‌ನ್ಯಾಷನಲ್‌ ಜಸ್ಟಿಸ್‌ ಮಿಷನ್‌ (ಐಜೆಎಂ) ಸ್ವಯಂ ಸೇವಾ ಸಂಸ್ಥೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೀಡಿರುವ ಸಮೀಕ್ಷಾ ವರದಿ)

**

ಜೀತ ಪದ್ಧತಿ ವಿರುದ್ಧದ ಕಾರ್ಯಾಚರಣೆ ವಿವರ

ವರ್ಷ       ಕಾರ್ಯಾಚರಣೆ    ರಕ್ಷಿಸಲ್ಪಟ್ಟ ಜೀತದಾಳುಗಳು

2014          9                           113

2015          8                           483

2016          6                            40

2017         14                           273

2018         18                            240

–––––

2005ರಿಂದ 2019ರವರೆಗಿನ ಅಂಕಿ–ಅಂಶ

129 - ಒಟ್ಟು ಕಾರ್ಯಾಚರಣೆಗಳು

2435 - ರಕ್ಷಿಸಲ್ಪಟ್ಟ ಜೀತ ಕಾರ್ಮಿಕರು

54 - ಮಾಲೀಕರ ಬಂಧನ

126 ಮಾಲೀಕರ ವಿರುದ್ಧ ಪ್ರಕರಣ

8 ಶಿಕ್ಷೆಗೆ ಗುರಿಯಾದ ಮಾಲೀಕರು

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !