ಮಂಗಳವಾರ, ಜೂನ್ 2, 2020
27 °C
ಸಚಿವರು, ಶಾಸಕರ ಶೇ 30ರಷ್ಟು ವೇತನ ಕಡಿತ

15 ದಿನ ಕಠಿಣ ಲಾಕ್‌ಡೌನ್‌? ಪ್ರಧಾನಿ ಜತೆ ಚರ್ಚಿಸಿ ಅಂತಿಮ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಜನರು ಇನ್ನೂ 15 ದಿನಗಳ ಕಠಿಣ ಲಾಕ್‌ಡೌನ್‌ಗೆ ಸಿದ್ಧರಾಗಬೇಕಾದ ಸಾಧ್ಯತೆ ಇದೆ.

ಗುರುವಾರ ನಡೆದ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಏ.14 ರ ಬಳಿಕವೂ ಲಾಕ್‌ಡೌನ್‌ ಮುಂದುವರಿಸಬೇಕು ಎಂದು ಬಹುತೇಕ ಸಚಿವರು ಒತ್ತಾಯ ಮಾಡಿದ್ದಾರೆ. ತೀರ್ಮಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಇದೇ ನಿಲುವು ತಾಳಿದರೆ 15 ದಿನ ಲಾಕ್ ಡೌನ್‌ ವಿಸ್ತರಣೆಯಾಗುವುದು ಖಚಿತ.

‘ಇಡೀ ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರಿಸಬೇಕೆ ಅಥವಾ ರೆಡ್‌ ಅರ್ಲಟ್‌ ಇರುವ ಜಿಲ್ಲೆಗಳಲ್ಲಿ ಮಾತ್ರ ಉಳಿಸಿಕೊಳ್ಳಬೇಕೆ ಎಂಬ ಬಗ್ಗೆ ಪ್ರಧಾನಿ ಮೋದಿ ಅವರು  ಶನಿವಾರ ನಡೆಸಲಿರುವ ವಿಡಿಯೊ ಸಂವಾದದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಬಿ.ಎಸ್‌.ಯಡಿಯೂರಪ್ಪ ಅವರು ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ರೆಡ್‌ ಅಲರ್ಟ್‌ ಜಿಲ್ಲೆಗಳಲ್ಲಿ ಮಾತ್ರ ಲಾಕ್‌ಡೌನ್‌ ಮುಂದುವರಿಸಿ ಉಳಿದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಲಾಕ್‌ಡೌನ್‌ ನಿರ್ಬಂಧ ತೆಗೆಯ
ಬೇಕು ಎಂದು ಸಂಪುಟ ಸಭೆಯಲ್ಲಿ ಕೆಲವು ಸಚಿವರು ಸಲಹೆ ನೀಡಿದರು. ಪರಿಸ್ಥಿತಿ ಗಂಭೀರವಾಗುತ್ತಿರುವುದರಿಂದ ಎಲ್ಲ ಜಿಲ್ಲೆಗಳಲ್ಲೂ ಲಾಕ್‌ಡೌನ್‌ ಮುಂದುವರಿಸಬೇಕು ಎಂದು ಹೆಚ್ಚಿನ ಸಂಖ್ಯೆ  ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್‌–19 ಪ್ರಕರಣ ಕಾಣಿಸಿಕೊಂಡಿರುವ 14 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿಸಿ, ಉಳಿದ ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳೊಡನೆ ಲಾಕ್‌ಡೌನ್‌ ತೆಗೆಯುವ ಬಗ್ಗೆ ಒಲವು ಹೊಂದಿದ್ದಾರೆ ಎಂದೂ ಮೂಲಗಳು ಹೇಳಿವೆ.

ಪ್ರಧಾನಿಯವರು ಶನಿವಾರ ವಿಡಿಯೋ ಸಂವಾದದ ಸಂದರ್ಭದಲ್ಲಿ ಲಾಕ್‌ಡೌನ್‌ ವಿಸ್ತರಿಸುವ ಹೊಣೆಗಾರಿಕೆ ರಾಜ್ಯಗಳ ವಿವೇಚನೆಗೇ ಬಿಟ್ಟರೆ ಆಗ ಮುಖ್ಯಮಂತ್ರಿಯವರು ಅಧಿಕಾರಿಗಳ ಜತೆಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ, ಕೋವಿಡ್‌–19 ಬಾಧಿತವಲ್ಲದ ಜಿಲ್ಲೆಗಳಿಗೆ
ರಿಯಾಯ್ತಿ ನೀಡಲೂಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

***

ಲಾಕ್‌ಡೌನ್‌ ಅನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

2.50 ಲಕ್ಷ ಬಡವರಿಗೆ ಪಡಿತರ

ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿಲ್ಲದ ಮತ್ತು ಹೆಸರು ನೋಂದಾಯಿಸಿರುವ 2.50 ಲಕ್ಷ ಬಡವರಿಗೆ ತಕ್ಷಣವೇ ಪಡಿತರ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇವರಿಗೆ ಎರಡು ತಿಂಗಳ ಪಡಿತರವನ್ನು ನೀಡಲಾಗುವುದು ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು