ಶುಕ್ರವಾರ, ನವೆಂಬರ್ 22, 2019
21 °C

ಭಾರತೀಯ ಜಲಗಡಿಯೊಳಗೆ ಪ್ರವೇಶ: ಇರಾನ್‌ನ 15 ಮೀನುಗಾರರ ಬಂಧನ

Published:
Updated:

ಮಂಗಳೂರು: ಭಾರತೀಯ ಜಲ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಲಕ್ಷದ್ವೀಪದ ಬಳಿಕ ಮೀನುಗಾರಿಕೆ ನಡೆಸುತ್ತಿದ್ದ ಇರಾನ್‌ ದೇಶದ 15 ಮೀನುಗಾರರನ್ನು ಅಕ್ಟೋಬರ್‌ 21ರಂದು ವಶಕ್ಕೆ ಪಡೆದಿದ್ದು, ಗುರುವಾರ ಅವರನ್ನು ಬಂಧಿಸಲಾಗಿದೆ.

ಅ.21ರಂದು ಭಾರತೀಯ ಕೋಸ್ಟ್‌ ಗಾರ್ಡ್‌ ನೌಕೆಗಳು ಗಸ್ತು ತಿರುಗುತ್ತಿದ್ದಾಗ ಲಕ್ಷದ್ವೀಪದ ಬಳಿ ಭಾರತೀಯ ಜಲ ಗಡಿಯೊಳಗೆ ಎರಡು ದೋಣಿಗಳು ಪತ್ತೆಯಾಗಿದ್ದವು. ಅವುಗಳನ್ನು ನಿಲ್ಲಿಸುವಂತೆ ಸೂಚಿಸಿದಾಗ ದೋಣಿಗಳ ನಾವಿಕರು ನೌಕೆಗಳೊಂದಿಗೆ ಪರಾರಿಯಾಗಲು ಯತ್ನಿಸಿದ್ದರು. ಬಳಿಕ ದೋಣಿಗಳು ಮತ್ತು ಮೀನುಗಾರರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಕರಾವಳಿ ಕಾವಲು ಪಡೆಯ ಎಸ್‌ಪಿ ಆರ್‌.ಚೇತನ್‌ ತಿಳಿಸಿದ್ದಾರೆ.

‘ಅವಿಧಿ’ ಮತ್ತು ‘ಇಶಾನ್‌’ ಎಂಬ ಹೆಸರಿನ ಇರಾನ್‌ನ ದೋಣಿಗಳು ಅಕ್ರಮವಾಗಿ ಭಾರತದ ಜಲ ಗಡಿಯೊಳಕ್ಕೆ ಬಂದಿದ್ದವು. ಅಲ್ಲಿ ಮೀನುಗಾರಿಕೆ ನಡೆಸಲು ಅವರು ಯಾವುದೇ ರೀತಿಯ ಪರವಾನಗಿ ಹೊಂದಿರಲಿಲ್ಲ. ದಾಖಲೆಗಳನ್ನೂ ಹಾಜರುಪಡಿಸಿರಲಿಲ್ಲ. ನೌಕಾಪಡೆಯ ಅಧಿಕಾರಿಗಳು ವಿಚಾರಣೆ ನಡೆಸುವುದಕ್ಕೆ ಅಡ್ಡಿಪಡಿಸಿದ್ದರು. ಈ ಕಾರಣದಿಂದ ಅವರನ್ನು ವಶಕ್ಕೆ ಪಡೆದು, ಕರೆತರಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಕೋಸ್ಟ್‌ ಗಾರ್ಡ್‌ನ ಡೆಪ್ಯೂಟಿ ಕಮಾಂಡೆಂಟ್‌ ಹಾಗೂ ಬೋರ್ಡಿಂಗ್‌ ಅಧಿಕಾರಿ ಕುಲದೀಪ್‌ ಶರ್ಮಾ ನೀಡಿರುವ ದೂರಿನಂತೆ ಭಾರತೀಯ ಜಲಗಡಿ ಕಾಯ್ದೆಯ ಅಡಿಯಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸ್‌ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ. ಅಬೂಬಕರ್‌ ಅನ್ಸಾರಿ ಮೀಯಾ, ಮೂಸಾ ದೆಹದಾನಿ, ಅಜಂ ಅನ್ಸಾರಿ, ಶಿದ್‌ ಬಾಚೂ, ಅಬ್ದುಲ್‌ ಮಜೀದ್‌, ಮಜೀದ್‌ ರೆಹಮಾನ್‌ ದಾವೂದ್‌, ಮಹಮ್ಮದ್ ಇಸಾಕ್‌, ಕರೀಂ ಬಕ್ಸ್‌ ದೂರ್‌ಜಾದೆ, ಮಹಮ್ಮದ್ ಬಲೂಚ್‌, ಬಮನ್‌, ಅಬ್ದುಲ್‌ ಗನಿ ಬಾಪೂರ್‌, ನಸೀರ್‌ ಭದ್ರುಚ್‌, ಅನ್ವರ್‌ ಬಲೂಚ್‌, ನಭೀ ಬಕ್ಷ ಮತ್ತು ಯೂಸುಫ್‌ ಜಹಾನಿ ಎಂಬ ಮೀನುಗಾರರನ್ನು ಬಂಧಿಸಲಾಗಿದೆ. ಎಲ್ಲರನ್ನೂ ಇದೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರತಿಕ್ರಿಯಿಸಿ (+)