ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಶೇ 21ರಷ್ಟು ಬಡವರು!

15ನೇ ಹಣಕಾಸು ಆಯೋಗ ಅಚ್ಚರಿ l ಶಿಕ್ಷಣ ಕ್ಷೇತ್ರದಲ್ಲಿ ಸಾಧ್ಯವಾಗದ ನಿರೀಕ್ಷಿತ ಪ್ರಗತಿ
Last Updated 25 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ತಲಾ ಆದಾಯದ ಪ್ರಮಾಣ ದೇಶದ ಸರಾಸರಿಗಿಂತಲೂ ಹೆಚ್ಚು ಇರುವ ಕರ್ನಾಟಕದಲ್ಲಿ ಶೇ 21ರಷ್ಟು ಮಂದಿ ಈಗಲೂ ಬಡತನ ರೇಖೆಯಿಂದ ಕೆಳಗಿರಲು ಹೇಗೆ ಸಾಧ್ಯ ಎಂದು 15ನೇ ಹಣಕಾಸು ಆಯೋಗ ಅಚ್ಚರಿ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಆಯೋಗದ ಅಧ್ಯಕ್ಷ ಎನ್‌.ಕೆ.ಸಿಂಗ್‌, ‘ದೇಶದ ಅಭಿವೃದ್ಧಿಯ ಎಂಜಿನ್‌ ಎಂದೇ ಗುರುತಿಸಿಕೊಂಡಿರುವ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರನ್ನು ಆಕರ್ಷಿಸುತ್ತಿರುವ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಶೇ 20ಕ್ಕಿಂತ ತುಂಬಾ ಕಡಿಮೆ ಇರಬೇಕಿತ್ತು. ಆದರೆ, ಇದು ನಿರೀಕ್ಷೆಗೂ ನಿಲುಕದಷ್ಟು ಹೆಚ್ಚು ಇದೆ. ಇಂಥ ವೈರುಧ್ಯ ಏಕೆ’ ಎಂದು ಪ್ರಶ್ನಿಸಿದರು.

‘ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ವಿಚಾರದಲ್ಲಿ ರಾಜ್ಯದ ಅಂಕಿ ಅಂಶಗಳು ತೃಪ್ತಿದಾಯಕವಾಗಿವೆ. ಆದರೆ, ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಗಣನೀಯ ಪ್ರಮಾಣದಲ್ಲಿದೆ. ಈ ಅಂಶಗಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ’ ಎಂದರು.

‘ರಾಜ್ಯವು 10 ವರ್ಷಗಳಲ್ಲಿ 8 ವರ್ಷ ಬರಗಾಲವನ್ನು ಎದುರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೂ ಅನೇಕ ನೀರಾವರಿ ಯೋಜನೆಗಳು ಇನ್ನೂ ಯಾಕೆ ಪೂರ್ಣಗೊಂಡಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಇವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಅವರು ಹೇಳಿದರು.

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಬಳಿಕ ರಾಜ್ಯದ ತೆರಿಗೆ ಆದಾಯ ಕುಸಿತವಾಗಿದೆ ಎಂಬ ವಿಚಾರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಮನಕ್ಕೆ ತಂದಿದ್ದಾರೆ. ಅನೇಕ ರಾಜ್ಯಗಳು ಅಳಲು ತೋಡಿಕೊಂಡಿವೆ. ಜಿಎಸ್‌ಟಿ ದರ ನಿಗದಿ ಗೊಂದಲಗಳ ಬಗ್ಗೆಯೂ ಗಮನ ಸೆಳೆದಿವೆ. ಜಿಎಸ್‌ಟಿ ಕೌನ್ಸಿಲ್‌ ಹಾಗೂ ಹಣಕಾಸು ಆಯೋಗಗಳು ಪರಸ್ಪರ ಚರ್ಚಿಸಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ತಿಳಿಸಿದರು.

ವಿದ್ಯುತ್ ಸಬ್ಸಿಡಿಗೆ ಆಕ್ಷೇಪ: ಇಂಧನ ಇಲಾಖೆ ಕಳೆದ ಆರ್ಥಿಕ ವರ್ಷದಲ್ಲಿ ವಿದ್ಯುತ್‌ ಸಬ್ಸಿಡಿ ಪಾವತಿಗೆ ₹ 12 ಸಾವಿರ ಕೋಟಿ ಬಳಸಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಲ್ಲೂ ನೇರ ನಗದು ವರ್ಗಾವಣೆಯಂತಹ ಸುಧಾರಣಾ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.

‘ಕೃಷಿ ಕ್ಷೇತ್ರದ ಅಭಿವೃದ್ಧಿ ಆಶಾದಾಯಕವಾಗಿಲ್ಲ. ರಾಜ್ಯದಲ್ಲಿ ಕೃಷಿ ಅಭಿವೃದ್ಧಿ ಬಹುತೇಕ ಸ್ಥಗಿತಗೊಂಡಿದೆ’ ಎಂದು ಎನ್‌.ಕೆ.ಸಿಂಗ್‌ ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಯೋಜನೆ: ಅನುದಾನ ಕಡಿತಕ್ಕೆ ಸಿ.ಎಂ ವಿರೋಧ

15ನೇ ಹಣಕಾಸು ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯಕ್ಕೆ ₹ 1.42 ಲಕ್ಷ ಕೋಟಿ ಹಂಚಿಕೆ ಮಾಡಬೇಕು. ಕೇಂದ್ರೀಯ ಪ್ರಾಯೋಜಿತ ಕಾರ್ಯಕ್ರಮಗಳಿಗೆ ನೀಡುವ ಹಣಕಾಸು ನೆರವು (ಸಿಎಸ್‌ಎಸ್‌) ಹಾಗೂ ರಾಜ್ಯ ಅನಾಹುತ ಸ್ಪಂದನ ನಿಧಿಯನ್ನು (ಎಸ್‌ಡಿಆರ್‌ಎಫ್‌) ಕಡಿತ ಮಾಡಬಾರದು ಎಂದು ಒತ್ತಾಯಿಸಿದರು.

ರಾಜ್ಯ ತೀವ್ರ ಬರಗಾಲದಿಂದ ತತ್ತರಿಸಿದೆ. ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯಕ್ಕೆ ದೊರೆತ ಕೇಂದ್ರದ ಪಾಲು ಕಡಿಮೆ. ಕರ್ನಾಟಕಕ್ಕೆ ಇದರಿಂದ ಭಾರಿ ಅನ್ಯಾಯ ಆಗಿದೆ. ಹೀಗಾಗಿ ಎಸ್‌ಡಿಆರ್‌ಎಫ್‌ ಹಂಚಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲೇಬೇಕು ಎಂದು ಅವರು ಹೇಳಿದರು.

ಅನುದಾನ ಹಂಚಿಕೆಯಲ್ಲಿ ಅನ್ಯಾಯ–ಆತಂಕ ಬೇಡ

‘ಆಯೋಗವು ಅನುದಾನ ಹಂಚಿಕೆಗೆ 2011ರ ಜನಗಣತಿಯ ಅಂಕಿಅಂಶಗಳನ್ನು ಆಧರಿಸಿ ಮೂಲವರ್ಷವನ್ನು ನಿಗದಿಪಡಿಸಿದರೆ, ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿರುವ ರಾಜ್ಯಗಳಿಗೆ ಅನ್ಯಾಯ ಆಗಲಿದೆ ಎಂಬ ಆತಂಕ ಬೇಡ. ಜನಸಂಖ್ಯೆ ನಿಯಂತ್ರಣಕ್ಕೆ ರಾಜ್ಯಗಳು ಮಾಡಿರುವ ಪ್ರಯತ್ನಕ್ಕೆ ಬೆಲೆ ಸಿಗಬೇಕು. ಅದರ ಜತೆಗೆ ಈಗಿರುವ ಜನರ ಅಗತ್ಯಗಳನ್ನು ಪೂರೈಸುವ ಸವಾಲೂ ನಮ್ಮ ಮುಂದಿದೆ’ ಎಂದು ಪ್ರಶ್ನೆಯೊಂದಕ್ಕೆ ಎನ್‌.ಕೆ.ಸಿಂಗ್‌ ಉತ್ತರಿಸಿದರು.

‘14ನೇ ಹಣಕಾಸು ಆಯೋಗವು ನಿಗದಿಪಡಿಸಿರುವ ಕೇಂದ್ರದ ಅನುದಾನ ಹಂಚಿಕೆ ಸೂತ್ರದಿಂದ ಅನ್ಯಾಯವಾಗಿದೆ ಎಂದು ಕೆಲವು ರಾಜ್ಯಗಳು ಗಮನ ಸೆಳೆದಿವೆ. ರಾಜ್ಯ ವಿಕೋಪ ಪರಿಹಾರ ನಿಧಿಗೆ ಕೇಂದ್ರದಿಂದ ಅನುದಾನ ಬರಬೇಕಾದಷ್ಟು ಬಂದಿಲ್ಲ. ಇದರಿಂದ ಬರ ನಿರ್ವಹಣೆಗೆ ಸಮಸ್ಯೆ ಆಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಬಾರಿ ಇಂತಹ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದರು. ಜನಸಂಖ್ಯೆ ನಿಯಂತ್ರಿಸುವಲ್ಲಿ ಕ್ರಮ ಕೈಗೊಂಡ ಯಾವ ರಾಜ್ಯಕ್ಕೂ ದಂಡ ವಿಧಿಸುವುದಿಲ್ಲ ಎಂದು ಎನ್‌.ಕೆ.ಸಿಂಗ್‌ ಭರವಸೆ ನೀಡಿದರು.

**

ಕರ್ನಾಟಕದೊಳಗೆ ಎರಡು ರಾಜ್ಯಗಳು ಇವೆ. ಒಂದು ಸಮೃದ್ಧಿಯಿಂದ ಕೂಡಿರುವಂತಹದ್ದು. ಇನ್ನೊಂದು ಬಡತನದಿಂದ ಬಳಲುವಂತಹದ್ದು. ಈ ತಾರತಮ್ಯ ನಿವಾರಿಸಬೇಕಿದೆ
– ಎನ್‌.ಕೆ.ಸಿಂಗ್‌, 15ನೇ ಹಣಕಾಸು ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT