ಬುಧವಾರ, ನವೆಂಬರ್ 13, 2019
28 °C
ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

3 ವರ್ಷಗಳಲ್ಲಿ 16ಸಾವಿರ ಸಿಬ್ಬಂದಿ ನೇಮಕ

Published:
Updated:
Prajavani

ಹಿರೇಬಾಗೇವಾಡಿ (ಬೆಳಗಾವಿ ಜಿಲ್ಲೆ): ‘ಪೊಲೀಸ್‌ ಇಲಾಖೆಗೆ ಮುಂದಿನ 3 ರ್ಷಗಳಲ್ಲಿ 16ಸಾವಿರ ಸಿಬ್ಬಂದಿ ಹಾಗೂ ಸಾವಿರಕ್ಕೂ ಅಧಿಕ ಪಿಎಸ್‌ಐ ಹುದ್ದೆಗಳ ನೇಮಕಾತಿ ಗುರಿ ಹೊಂದಲಾಗಿದೆ. ಈ ವರ್ಷ 6ಸಾವಿರ ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಲ್ಲಿ ₹ 6.64 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 36 ಪೊಲೀಸ್ ವಸತಿಗೃಹಗಳನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪೊಲೀ‌ಸ್‌ ಅಧಿಕಾರಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಅರಿತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅವರಿಗೆ ಅಮೆರಿಕ, ಆಸ್ಟ್ರೇಲಿಯಾ, ಸ್ಕಾಟ್ಲೆಂಡ್ ಮೊದಲಾದ ವಿದೇಶಗಳಲ್ಲಿ ವಿಶೇಷ ತರಬೇತಿ ಕೊಡಿಸಲು ಯೋಜಿಸಲಾಗಿದೆ. ತಂತ್ರಜ್ಞಾನಗಳು ಬದಲಾದಂತೆ ಅಪರಾಧದ ಸ್ವರೂಪವೂ ಬದಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ತನಿಖೆ ನಡೆಸುವುದಕ್ಕಾಗಿ ಸೈಬರ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ. ಪೊಲೀಸ್ ವ್ಯವಸ್ಥೆ ಜನಸ್ನೇಹಿಗೊಳಿಸಲಾಗುತ್ತಿದೆ. ಅಪರಾಧಗಳ ತನಿಖೆಯ ಸ್ವರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಲಾಗುತ್ತಿದೆ. ವಿಶ್ವದಲ್ಲೇ ಶ್ರೇಷ್ಠ ಪೊಲೀಸ್ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹಳೆ ಠಾಣೆಗಳನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಬಂದರೆ, ಮುಂದಿನ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು’ ಎಂದು ಹೇಳಿದರು.

ಹೆಚ್ಚಿನವು ರಾಜ್ಯದಲ್ಲಿವೆ: ‘ಭಾರತದಲ್ಲಿಯೇ ಅತಿ ಹೆಚ್ಚು ಪೊಲೀಸ್ ವಸತಿ ಗೃಹಗಳು ನಿರ್ಮಾಣವಾಗಿರುವುದು ಕರ್ನಾಟಕದಲ್ಲಿ. ಇದು ಇದು ಹೆಮ್ಮೆಯ ವಿಷಯ. ಇಲಾಖೆಯ ಕಾರ್ಯವ್ಯಾಪ್ತಿ ವಿಶಾಲವಾಗಿದೆ. ಸಿಬ್ಬಂದಿಗೆ ನಿಗದಿತ ಸಮಯವಿಲ್ಲ; ಯಾವಗಲೂ ಒತ್ತಡದ ಪರಿಸ್ಥಿಯಲ್ಲಿರುತ್ತಾರೆ’ ಎಂದರು.

‘ಯುವಕರು ಜೀವನದಲ್ಲಿ ಶಿಸ್ತು ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬರಬೇಕು. ಈ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಪೊಲೀಸ್ ಇಲಾಖೆಯ ಬಗ್ಗೆ ಜನರಲ್ಲಿರುವ ಭಾವನೆಗಳನ್ನು ಉತ್ತಮಗೊಳಿಸುವ, ಗೌರವ ಮತ್ತು ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಠಾಣೆಗಳ ವಾತಾವರಣ ಬದಲಾವಣೆ ಮಾಡಬೇಕು. ಜನಸ್ನೇಹಿಯನ್ನಾಗಿಸಬೇಕು. ಯಾರೇ ಬಂದು ದೂರು ನೀಡಿದರೂ ಅವರಿಗೆ ಸ್ಪಂದಿಸಬೇಕು’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಂಕರಗೌಡ ಪಾಟೀಲ, ‘ಹಗಲಿರುಳು ಜನಸೇವೆಯಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿಗೆ ವಸತಿಗೃಹಗಳನ್ನು ಒದಗಿಸಿರುವುದು ಸಂತೋಷದ ವಿಷಯವಾಗಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಲಾವತಿ ಧರೆಣ್ಣವ, ಉತ್ತರ ವಲಯ ಐಜಿಪಿ ಎಚ್.ಜಿ. ರಾಘವೇಂದ್ರ ಸುಹಾಸ್, ಎಸ್ಪಿ ಲಕ್ಷ್ಮಣ ನಿಂಬರಗಿ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ. ಪಾಟೀಲ, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಬಾಳಕ ಇದ್ದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್ ಸ್ವಾಗತಿಸಿದರು. ಡಿಸಿಪಿ ಯಶೋದಾ ವಂದಿಸಿದರು.

‘ರೈತರ ಮೇಲಿನ ಪ್ರಕರಣ ವಾಪಸ್ ಪಡೆಯಿರಿ’

ಹೋರಾಟಗಳ ಸಂದರ್ಭಗಳಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಉಪ ಸಮಿತಿಯು ಆಯಾ ಎಸ್ಪಿಗಳಿಂದ ಮಾಹಿತಿ ಪಡೆಯುತ್ತಿದೆ. ವರದಿ ಸಲ್ಲಿಸಿದ ತಕ್ಷಣ ಸಕರಾತ್ಮಕ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಬ್ಬಾಯಿ ಭರವಸೆ ನೀಡಿದರು.

ಇಲ್ಲಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ‘ಆದಷ್ಟು ಬೇಗ ಈ ಪ್ರಕ್ರಿಯೆಯ ಪೂರ್ಣಗೊಳಿಸಲಾಗುವುದು’ ಎಂದರು.

ಸಂಘಟನೆ ಮಾಧ್ಯಮ ವಕ್ತಾರ ಆರ್.ಎಸ್. ದರ್ಗೆ, ಜಿಲ್ಲಾ ಘಟಕದ ಅಧ್ಯಕ್ಷ ದುಂಡಯ್ಯ ಪೂಜಾರ, ಯುವ ಘಟಕ ಜಿಲ್ಲಾಧ್ಯಕ್ಷ ಸನೀಲ ಹಂಪಣ್ಣವರ, ಖಾನಾಪುರ ಅಧ್ಯಕ್ಷ ಶ್ರೀಧರ ಬಾಫನಾ, ಈರಪ್ಪ ಲಕಮೋಜಿ ಇದ್ದರು.

ಪ್ರತಿಕ್ರಿಯಿಸಿ (+)