ಕೊಪ್ಪ: ಯೂರಿಯಾ ಮಿಶ್ರಿತ ಹಾಲು ಕುಡಿದು 18 ಮಕ್ಕಳು ಅಸ್ವಸ್ಥ

7
ನಿಲುವಾಗಿಲು ಪ್ರಾಥಮಿಕ ಶಾಲೆಯಲ್ಲಿ ಘಟನೆ

ಕೊಪ್ಪ: ಯೂರಿಯಾ ಮಿಶ್ರಿತ ಹಾಲು ಕುಡಿದು 18 ಮಕ್ಕಳು ಅಸ್ವಸ್ಥ

Published:
Updated:
Deccan Herald

ಕೊಪ್ಪ: ತಾಲ್ಲೂಕಿನ ನಿಲುವಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೂರಿಯಾ ಮಿಶ್ರಿತ ಹಾಲು ಕುಡಿದು 18 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡಲಾಗುತ್ತಿರುವ ಹಾಲಿಗೆ ಶಾಲೆಯ ಅಡುಗೆ ಸಹಾಯಕಿಯರು ಸಕ್ಕರೆಯ ಬದಲು ಯೂರಿಯಾ ಬೆರೆಸಿರುವುದೇ ಈ ದುರ್ಘಟನೆಗೆ ಕಾರಣವೆಂದು ಮೇಲ್ನೋಟದ ತನಿಖೆಯಿಂದ ತಿಳಿದು ಬಂದಿದೆ. ಈ ಆರೋಪದಲ್ಲಿ ಮುಖ್ಯ ಶಿಕ್ಷಕ ಅಶೋಕ, ಅಡುಗೆ ಮುಖ್ಯ ಸಿಬ್ಬಂದಿ ಯಶೋದಮ್ಮ, ಸಹಾಯಕಿಯರಾದ ಶಾರದ ಮತ್ತು ಗುಲಾಬಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಕರ್ತವ್ಯಕ್ಕೆ ರಜೆ ಹಾಕಿ ಹೆಬ್ರಿಗೆ ತೆರಳಿದ್ದ ಯಶೋದಮ್ಮ ಅವರು, ಶುಕ್ರವಾರ ಅಡುಗೆ ಸಹಾಯಕಿಯರಾದ ಶಾರದ ಮತ್ತು ಗುಲಾಬಿ ಅವರಲ್ಲಿ ‘ನಾಳೆ ದಿನ ಮಕ್ಕಳಿಗೆ ನೀಡುವ ಹಾಲಿಗೆ ಈ ಪ್ಯಾಕೆಟ್ ನ ಸಕ್ಕರೆಯನ್ನೇ ಹಾಕಬೇಕು’ ಎಂದು ಹೇಳಿದ್ದರೆನ್ನಲಾಗಿದೆ. ಆದರೆ, ಆ ಪ್ಯಾಕೆಟ್‌ನಲ್ಲಿರುವುದು ಸಕ್ಕರೆಯ ಬದಲು ಯೂರಿಯಾ ಎಂಬುದನ್ನು ಅರಿಯದ ಶಾರದ ಮತ್ತು ಗುಲಾಬಿ ಶನಿವಾರ ಅದನ್ನೇ ಹಾಲಿಗೆ ಬೆರೆಸಿ ಮಕ್ಕಳಿಗೆ ನೀಡಿದ್ದಾರೆ.

ಮಕ್ಕಳಿಗಿಂತ ಮೊದಲು ಹಾಲನ್ನು ಕುಡಿದು ನೋಡಿದ ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಅವರು ‘ಹಾಲು ಕಹಿಯಾಗಿದೆ’ ಎಂದು ತಿಳಿಸಿದಾಗ, ಸ್ಥಳದಲ್ಲಿದ್ದ ಮುಖ್ಯಶಿಕ್ಷಕ ಎ.ಈ. ಅಶೋಕ್, ‘ಬಹುಶಃ ಹಾಲು ಕೆಟ್ಟಿರಬೇಕು. ಮಕ್ಕಳಿಗೆ ನೀಡುವುದು ಬೇಡ’ ಎಂದು ಅಡುಗೆ ಸಹಾಯಕಿಯರಿಗೆ ಸೂಚಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅಲ್ಪಸ್ವಲ್ಪ ಹಾಲು ಕುಡಿದಿದ್ದ 18 ಮಕ್ಕಳು ಅಸ್ವಸ್ಥಗೊಂಡು ವಾಂತಿ ಮಾಡತೊಡಗಿದ್ದಾರೆ. ತಕ್ಷಣವೇ ಅವರನ್ನು ಹರಿಹರಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

ಅಲ್ಲಿನ ವೈದ್ಯಾಧಿಕಾರಿ ಡಾ.ಕೃಷ್ಣ ಮತ್ತು ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿದ್ದು, ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಶಾಸಕ ಟಿ.ಡಿ. ರಾಜೇಗೌಡ ಅವರ ಸೂಚನೆಯಂತೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಮಕ್ಕಳ ವೈದ್ಯ ಡಾ.ಪ್ರಭಾಕರ್ ಅವರನ್ನು ಕರೆಸಿ ಚಿಕಿತ್ಸೆ ನೀಡಲಾಯಿತು. ಮಧ್ಯಾಹ್ನದ ನಂತರ ಎಲ್ಲ ಮಕ್ಕಳು ಗುಣಮುಖರಾಗಿ ಮನೆಗೆ ತೆರಳಿದರು.

ಮಾಜಿ ಸಚಿವ ಡಿ.ಎನ್. ಜೀವರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಸದಸ್ಯ ಎಸ್.ಎನ್. ರಾಮಸ್ವಾಮಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಕಿರಣ್, ಸದಸ್ಯ ಹಣಗಲು ಪ್ರವೀಣ್, ಡಿಡಿಪಿಐ ರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಗಣಪತಿ, ತಾಲ್ಲೂಕು ಆರೋಗ್ಯಾಧಿಕಾರಿ ಮಹೇಂದ್ರ ಕಿರೀಟಿ, ಡಿವೈಎಸ್ಪಿ ರವೀಂದ್ರ ಎಸ್. ಜಹಗೀರದಾರ್, ಸರ್ಕಲ್ ಇನ್‌ಸ್ಪೆಕ್ಟರ್ ಕೆ. ಸತ್ಯನಾರಾಯಣಸ್ವಾಮಿ, ಹರಿಹರಪುರ ಠಾಣಾಧಿಕಾರಿ ರಘುನಾಥ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಸಾಂತ್ವನ ಹೇಳಿದರು.

ಮಕ್ಕಳ ಆರೋಗ್ಯ ಹದಗೆಟ್ಟಿರುವ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ನೂರಾರು ಪೋಷಕರು, ತಮ್ಮ ಮಕ್ಕಳು ಗುಣಮುಖರಾಗಿದ್ದರಿಂದ ನಿರಾಳರಾದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !