ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶಿಲ– ಬೈರಾಪುರ ರಸ್ತೆ ಯೋಜನೆ: 20 ಲಕ್ಷ ಮರಗಳಿಗೆ ಕೊಡಲಿ?

ಅರಣ್ಯ ಇಲಾಖೆ ಒಪ್ಪಿಗೆ ಕೇಳಿದ ಎನ್‌ಎಚ್‌ಎಐ
Last Updated 16 ಜನವರಿ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ಅಭಿವೃದ್ಧಿಯ ಹೆಸರಿನಲ್ಲಿ ಜೀವ ವೈವಿಧ್ಯ ಪರಿಸರ ವಲಯ ಪಶ್ಚಿಮಘಟ್ಟದ ಅರಣ್ಯ ನಾಶಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲ ಹಾಗೂ ಚಿಕ್ಕಮಗಳೂರಿನ ಬೈರಾಪುರ ನಡುವಣ ರಸ್ತೆ ನಿರ್ಮಾಣ ಯೋಜನೆಗೆ 20ಲಕ್ಷ ಮರಗಳ ಕಡಿತಲೆಗೆ ಒಪ್ಪಿಗೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅರಣ್ಯ ಇಲಾಖೆಗೆ ಮನವಿ ಮಾಡಿದೆ.

ಸುವರ್ಣ ಚತುಷ್ಪಥ ರಸ್ತೆಗೆ ಸಂಪರ್ಕ ಕಲ್ಪಿಸುವ ಚಿತ್ರದುರ್ಗ– ಮಂಗಳೂರು ಮಧ್ಯೆ ಸರಕು ಸಾಗಣೆ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದಿಂದ ನಿರ್ಮಿಸುತ್ತಿರುವ ಹೆದ್ದಾರಿ ಸಂಖ್ಯೆ 173ರ ಭಾಗವಾದ 278ಕಿ.ಮೀ. ಉದ್ದದ ಈ ರಸ್ತೆಗೆ ದಕ್ಷಿಣ ಕನ್ನಡ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 20 ಲಕ್ಷ ಮರಗಳು ಬಲಿಯಾಗುವುದರ ಜತೆಗೆ, ಹಲವು ಹೆಕ್ಟೇರ್ ಅರಣ್ಯ ಮತ್ತು ಕೃಷಿ ಭೂಮಿ ಸ್ವಾಧೀನವಾಗಲಿದೆ. ಇದರಿಂದಾಗಿ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಮೂರೂ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಈ ಯೋಜನೆ ಕಾರ್ಯಗತವಾದರೆ ಬಾಳೂರು, ಮೀಯಾರು ಹಾಗೂ ಕಬ್ಬಿನಾಲೆಗಳಲ್ಲಿರುವ ನದಿ– ಝರಿಗಳು ಕಣ್ಮರೆಯಾಗ ಲಿದ್ದು, ಎತ್ತಿನಹೊಳೆ ಹಾಗೂ ನೇತ್ರಾವತಿ ನದಿಗಳೂ ಬತ್ತಿಹೋಗುವ ಅಪಾಯವಿದೆ ಎಂಬ ಆತಂಕ ಕಾಡುತ್ತಿದೆ. ಎನ್‌ಎಚ್‌ಎಐ ಸಮಗ್ರ ಯೋಜನಾ ವರದಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಹಾಸನದ ನಡುವೆ 60.13 ಹೆಕ್ಟೇರ್‌ ಮೀಸಲು ಅರಣ್ಯವನ್ನು ಅಧಿಸೂಚನೆಯಿಂದ ಕೈಬಿಡುವಂತೆ ಅರಣ್ಯ ಇಲಾಖೆಗೆ ಎನ್‌ಎಚ್‌ಎಐ ಮನವಿ ಮಾಡಿದೆ. 2018ರ ಪೂರ್ವಾರ್ಧದಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ವಿವರಗಳನ್ನು ಇತ್ತೀಚೆಗೆ ಕಳುಹಿಸಲಾಗಿದೆ ಅದರಂತೆ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಹೆಚ್ಚು ಅರಣ್ಯ ನಾಶವಾಗಲಿದೆ.

ಎನ್‌ಎಚ್‌ಎಐ ಪ್ರಸ್ತಾವನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44.83, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಕ್ರಮವಾಗಿ 7.95 ಮತ್ತು 7.35 ಹೆಕ್ಟೇರ್‌ ಅರಣ್ಯ ನಾಶವಾಗಲಿದೆ ಯೋಜನೆ ಬಗ್ಗೆ ಹಲವು ಆಕ್ಷೇಪಗಳನ್ನು ಎತ್ತಿರುವ ಅರಣ್ಯ ಇಲಾಖೆಯು ಪ್ರಸ್ತಾವನೆ ಅಪೂರ್ಣವಾಗಿದೆ ಎಂದು ಹೇಳಿ ಎನ್‌ಎಚ್‌ಎಐಗೆ ವಾಪಸ್‌ ಕಳುಹಿಸಿದೆ.

**

ಉದ್ದೇಶಿತ ರಸ್ತೆ ಮಾರ್ಗ

1 ಬಂಟ್ವಾಳ 2 ಉಜಿರೆ 3 ಚಾರ್ಮಾಡಿಘಾಟಿ ರಸ್ತೆ 4 ಮೂಡಿಗೆರೆ 5 ಚಿಕ್ಕಮಗಳೂರು 5 ಧರ್ಮಸ್ಥಳ 7 ಬೆಳ್ತಂಗಡಿ 8 ನೆಲ್ಯಾಡಿ 9 ಶಿಶಿಲ 10 ಬೈರೇಶ್ವರ 11 ಬೇಲೂರು 12 ಶಿರಾಡಿಘಾಟಿ ರಸ್ತೆ 13 ಹಾಸನ 14 ಚಿತ್ರದುರ್ಗ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT