ಶಾಲಾ ಜಮೀನು ಹಕ್ಕಿಗೆ 25 ವರ್ಷ ಹೋರಾಟ

7

ಶಾಲಾ ಜಮೀನು ಹಕ್ಕಿಗೆ 25 ವರ್ಷ ಹೋರಾಟ

Published:
Updated:
Deccan Herald

ಶಿವಮೊಗ್ಗ: ಉಳುವವನೇ ಹೊಲದೊಡೆಯ ಸಿದ್ಧಾಂತದಡಿ ಭೂ ವಿದ್ಯಾದಾನದ ಶಾಲಾ ಜಮೀನು ಗೇಣಿದಾರರಿಗೆ ಭೂಮಿ ದೊರಕಿಸಲು 1990ರಲ್ಲಿ ಹೋರಾಟಕ್ಕೆ ಇಳಿದವರು ಹೊಸನಗರ ತಾಲ್ಲೂಕು ಹೆದ್ದಾರಿಪುರದ ಕಲ್ಲೂರು ಮೇಘರಾಜ.

ದೇಶದಲ್ಲಿ ವಿನೋಬಬಾವೆ ಅವರು ಆರಂಭಿಸಿದ್ದ ಭೂದಾನ ಚಳವಳಿ, ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಅವರ ಭೂ ವಿದ್ಯಾದಾನ ಚಳವಳಿ ಫಲವಾಗಿ ಅಂದು ಸರ್ಕಾರಿ ಶಾಲೆಗಳ ನಿರ್ವಹಣೆಗೆ ಹಲವು ಭೂಮಾಲೀಕರು ಸುಮಾರು 20 ಸಾವಿರ ಎಕರೆಗೂ ಹೆಚ್ಚು ಭೂಮಿ ದಾನ ನೀಡಿದ್ದರು. 

ಸರ್ಕಾರ ಈ ಜಮೀನು ಗೇಣಿದಾರರಿಗೆ ನೀಡಿ, ಅದರಿಂದ ಬಂದ ಗೇಣಿ ಹಣದಲ್ಲಿ ಶಿಕ್ಷಕರ ವೇತನ, ಪೀಠೋಪಕರಣ, ಆಟದ ಸಾಮಗ್ರಿಗಳು, ಶಾಲಾ ಕಟ್ಟಡ ನಿರ್ಮಾಣದ ವೆಚ್ಚಗಳನ್ನು ಭರಿಸಲಾಗುತ್ತಿತ್ತು. ಕಾಲ ಬದಲಾದಂತೆ ಶಾಲೆಗಳ ಅಭಿವೃದ್ಧಿಗೆ ಬೇರೆಬೇರೆ ಮೂಲಗಳಿಂದ ಸಾಕಷ್ಟು ಹಣ ಹರಿದುಬರಲು ಆರಂಭಿಸಿತ್ತು. ಶಿಕ್ಷಕರ ವೇತನ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸರ್ಕಾರದ ಅನುದಾನ ಬಿಡುಗಡೆ ಮಾಡುತ್ತಾ ಬಂತು. ಆಗ ದಾನವಾಗಿ ನೀಡಿದ್ದ ಜಮೀನುಗಳು ವ್ಯರ್ಥವಾದವು. ಅಂತಹ ಜಮೀನುಗಳನ್ನು ಉಳುಮೆ ಮಾಡಲು ಸಣ್ಣ, ಅತಿ ಸಣ್ಣ ರೈತರಿಗೆ ನೀಡಲಾಗಿತ್ತು.

ದಶಕಗಳು ಕಳೆದ ನಂತರ ಈ ಜಮೀನುಗಳನ್ನೇ ಅವಲಂಬಿಸಿದ್ದ ಕುಟುಂಬಗಳಿಗೆ ಸಂಕಷ್ಟ ಎದುರಾಗಿತ್ತು. ಶಾಲಾ ಜಮೀನುಗಳನ್ನು ಮರಳಿ ಪಡೆದು, ಹರಾಜು ಮೂಲಕ ಗೇಣಿದಾರರಿಗೆ ಪ್ರತಿವರ್ಷ ನೀಡಲು 90ರ ದಶಕದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು ಅದುವರೆಗೂ ಶಾಲಾ ಜಮೀನಿನ ಮೇಲೆ ಅವಲಂಬಿತರಾಗಿದ್ದವರು ಬೀದಿಗೆ ಬೀಳುವಂತಾಗಿತ್ತು.  ಇಂತಹ ಸಮಯದಲ್ಲಿ ಅವರ ಪರ ಹೋರಾಟಕ್ಕೆ ಇಳಿದವರು ಕಲ್ಲೂರು ಮೇಘರಾಜ.

ರಾಜ್ಯ ಭೂ ವಿದ್ಯಾದಾನದ ಶಾಲಾ ಜಮೀನು ಗೇಣಿದಾರರ ಹೋರಾಟ ಸಮಿತಿ ರಚಿಸಿಕೊಂಡು ರಾಜ್ಯ ಸುತ್ತಿದರು. ಇದರ ಮೇಲೆ ಅವಲಂಬಿತರಾದ ಸುಮಾರು 4 ಸಾವಿರ ಕುಟುಂಬಗಳು ಸಂಘಟಿಸಿದರು. ಮೂರ‍್ನಾಲ್ಕು ತಲೆಮಾರು ಅದೇ ಜಮೀನು ನಂಬಿಕೊಂಡು ಬಂದಿದ್ದ ಕುಟುಂಬಗಳಿಗೆ ಧೈರ್ಯ ತುಂಬಿದರು. ಅವರಿಗೆ ಸಾಗುವಳಿ ಹಕ್ಕು ನೀಡಲು ನೂರಾರು ಹೋರಾಟ ನಡೆಸಿದರು. 

ಇಂದಿಗೂ ಈ ಎಲ್ಲ ಜಮೀನುಗಳೂ ರಾಜ್ಯಪಾಲರ ಹೆಸರಿನಲ್ಲಿವೆ. ಅವುಗಳನ್ನು ಗೇಣಿದಾರರ ‌ಹೆಸರಿಗೆ ಖಾತೆ, ಪಹಣಿ ಮಾಡಿಕೊಡುವಂತೆ ಒತ್ತಡ ಹಾಕುತ್ತಾ ಬಂದಿದ್ದಾರೆ. ಬೆಂಗಳೂರಿಗೆ ಹಲವು ಬಾರಿ ತೆರಳಿ ಧರಣಿ ನಡೆಸಿದ್ದಾರೆ. ಅನೇಕ ಬಾರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧಕ್ಕೆ ಕರೆಸಿ ಚರ್ಚಿಸಿದ್ದರು. 2002ರಲ್ಲಿ ನಡೆದ ಕಾಗೋಡು ಸತ್ಯಾಗ್ರಹದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಶಾಲಾ ಜಮೀನು ಗೇಣಿದಾರರಿಗೆ ನೀಡುವುದಾಗಿ ಘೋಷಿಸಿದ್ದರು. ಆದರೆ, ಈ ಘೋಷಣೆ ಕಾರ್ಯಗತವಾಗಲೇ ಇಲ್ಲ. ನಂತರ ಬಂದ ಎಲ್ಲ ಮುಖ್ಯಮಂತ್ರಿಗಳೂ ಭರವಸೆ ನೀಡುತ್ತಾ ಬಂದಿದ್ದಾರೆ. ಇಂದಿಗೂ ಬೇಡಿಕೆ ಈಡೇರಿಲ್ಲ. ಶಾಲಾ ಜಮೀನು ಗೇಣಿದಾರರ ಸ್ವಾಧೀನದಲ್ಲೇ ಇವೆ.

‘ಸಮಾಜವಾದಿ ಹಿನ್ನೆಲೆಯ ನಾಯಕರು ರಾಜ್ಯದ ಮುಖ್ಯಮಂತ್ರಿಗಳಾದರೂ ಶಾಲಾ ಜಮೀನು ಗೇಣಿದಾರರ ಸಮಸ್ಯೆ ಬಗೆಹರಿಸಿಲ್ಲ. ಭೂರಹಿತರಿಗೆ ಭೂಮಿ ದೊರಕಿಸುವ ಕಾಗೋಡು ಚಳವಳಿಯ ಆಶಯ ಇಂದು ಉಳಿದಿಲ್ಲ. ಗೇಣಿದಾರರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎನ್ನುತ್ತಾರೆ ಕಲ್ಲೂರು ಮೇಘರಾಜ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !