ಶನಿವಾರ, ಮಾರ್ಚ್ 28, 2020
19 °C

2666 ಜನರೊಂದಿಗೆ ಕೋವಿಡ್‌ ಸೋಂಕಿತ ಬೆಂಗಳೂರಿನ ಟೆಕ್ಕಿ ಸಂಪರ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಂಡ್‌ ಸೋಂಕಿಗೆ ಗುರಿಯಾಗಿರುವ ಟೆಕ್ಕಿ ಅಮೆರಿಕದಿಂದ ಬೆಂಗಳೂರಿಗೆ ಬಂದ ನಂತರ 2666 ಮಂದಿಯೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಪರ್ಕವಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಅವರು ತಿಳಿಸಿದ್ದಾರೆ. 

ಸದ್ಯ ಟೆಕಿಗೆ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪತ್ನಿ ಮತ್ತು ಮಕ್ಕಳಿಗೆ ಅಲ್ಲಿಯೇ ಪ್ರತ್ಯೇಕ ಕೊಠಡಿ ನಿಗದಿ ಮಾಡಲಾಗಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ. 

ಅಮೆರಿಕದಿಂದ ಮರಳಿದ ನಂತರ, ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವ ಎರಡು ದಿನಗಳಿಗೆ ಮೊದಲು ಟೆಕ್ಕಿ ಎರಡು ಬಾರಿ ಕಚೇರಿಗೆ ತೆರಳಿದ್ದರು. ಅವರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲು ಸರ್ಕಾರ ಮೂರು ತಂಡಗಳನ್ನು ರಚಿಸಿದೆ. ಒಂದು ತಂಡ ಟೆಕ್ಕಿಯ ನಿವಾಸದ ಬಳಿ ಇರುವವರನ್ನು ಪತ್ತೆ ಮಾಡುತ್ತಿದ್ದರೆ, ಇನ್ನೊಂದು ತಂಡ ಟೆಕಿಯ ಉದ್ಯೋಗ ಸ್ಥಳದಲ್ಲಿರುವವರನ್ನು ಪತ್ತೆ ಹಚ್ಚುತ್ತಿದೆ. ಮತ್ತೊಂದು ತಂಡ ಟೆಕಿಯ ಪ್ರಯಾಣದ ಪೂರ್ವಾಪರಗಳನ್ನು, ಅವರೊಂದಿಗೆ ಪ್ರಯಾಣಿಸಿದವರನ್ನು ಪತ್ತೆ ಮಾಡಲಿದೆ ಎಂದು ಸಚಿವ ಸುಧಾಕರ್‌ ತಿಳಿಸಿದ್ದಾರೆ. 

ಸೋಂಕಿಗೆ ಗುರಿಯಾಗಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ಪತ್ನಿ, ಪುತ್ರಿ ಹಾಗೂ ಸಹೋದ್ಯೋಗಿಗಳನ್ನು ರಾಜೀವ್‌ ಗಾಂಧಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಗಳಲ್ಲಿರುವಂತೆ ನಿರ್ಬಂಧಿಸಲಾಗಿದೆ. ಅಲ್ಲದೆ, ಅವರ ಕಾರು ಚಾಲಕ ಮತ್ತು ಅವರ ಕುಟುಂಬವನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

ಪ್ರಯಾಣದ ವೇಳೆ ಟೆಕಿಯ ಸೀಟಿನ ಹಿಂದೆ ಕುಳಿತಿದ್ದ ಎರಡು ಸಾಲಿನ ಪ್ರಯಾಣಿಕರು, ಮುಂದೆ ಕುಳಿತಿದ್ದ ಎರಡು ಸಾಲಿನ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದೆ. ಅವರನ್ನು ಅವರ ಮನೆಗಳಲ್ಲಿಯೇ ಇರುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ವಿಮಾನದಲ್ಲಿ ಅವರೊಂದಿಗೆ ಪ್ರಯಾಣಿಸಿದ್ದ 16 ಮಂದಿಯನ್ನು ಮನೆಗಳಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಸುಧಾಕರ್‌ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು