ಗುರುವಾರ , ಅಕ್ಟೋಬರ್ 17, 2019
27 °C
ದುರ್ಗಾದೇವಿ ಮೆರವಣಿಗೆ ತೆರಳುತ್ತಿದ್ದಾಗ ಭೀಕರ ಅಪಘಾತ

ಕಾಗವಾಡ: ಲಾರಿ ಹರಿದು ಮೂವರು ಸಾವು, ಇಬ್ಬರು ಗಂಭೀರ

Published:
Updated:
Prajavani

ಮೋಳೆ (ಬೆಳಗಾವಿ ಜಿಲ್ಲೆ): ಕಾಗವಾಡದ ಗಣೇಶವಾಡಿ ರಸ್ತೆಯಲ್ಲಿ ಬುಧವಾರ ರಾತ್ರಿ ದುರ್ಗಾದೇವಿ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರ ಮೇಲೆ ಸಿಮೆಂಟ್ ತುಂಬಿದ ಲಾರಿ ಹರಿದು ಮಗು ಸೇರಿ ಮೂವರು ಸ್ಥಳದಲ್ಲೇ ಸಾವಿಗೀಡಾದರು. ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಗವಾಡದ ಸಂಜೀವ ರಾವಸಾಹೇಬ ಪಾಟೀಲ (40), ಸಚಿನ ಕಲ್ಲಪ್ಪ ಪಾಟೀಲ (38), ನದಿಇಂಗಳಗಾಂವದ ಅಭಿಲಾಷ ಅಶೋಕ ಗುಳಪನ್ನವರ(2) ಮೃತರು. ರಾಜಶ್ರೀ ಪ್ರಕಾಶ ಪಾಟೀಲ (40), ಅಭಿಷೇಕ ಶಾಂತಿನಾಥ ಮಾಲಗಾಂವೆ (20) ಗಂಭೀರವಾಗಿ ಗಾಯಗೊಂಡಿದ್ದು, ಮೀರಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಕಾಗವಾಡದಿಂದ ಕಿ.ಮೀ. ಅಂತರದಲ್ಲಿರುವ ಗಣೇಶವಾಡಿ ತೋಟದ ಮನೆಗಳಲ್ಲಿ ವಾಸಿಸುವವರು ಪ್ರತಿ ವರ್ಷದಂತೆ ನವರಾತ್ರಿ ಉತ್ಸವ ಅಂಗವಾಗಿ ದುರ್ಗಾ ಮೂರ್ತಿ ಪ್ರತಿಷ್ಠಾಪಿಸಿದ್ದರು. 9 ದಿನಗಳಿಂದ ನೈವೇದ್ಯ ಅರ್ಪಿಸಿ, ರಾತ್ರಿ ದಾಂಡಿಯಾ ನೃತ್ಯ ಮಾಡಿ ಸಂಭ್ರಮಿಸಿದ್ದರು. ಬುಧವಾರ ಮಹಾಪ್ರಸಾದ ಬಳಿಕ ಗಣೇಶವಾಡಿ ಸಮೀಪ ಕೃಷ್ಣಾ ನದಿಯಲ್ಲಿ ದೇವಿ ವಿಸರ್ಜಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಟ್ರ್ಯಾಕ್ಟರ್‌ನಲ್ಲಿ ಮೂರ್ತಿ ಇಟ್ಟು ಕುಣಿಯುತ್ತಾ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಲಾರಿ ಭಕ್ತರ ಮೇಲೆ ಹರಿದು ಟ್ರ್ಯಾಕ್ಟರ್‌ಗೂ ಗುದ್ದಿದೆ.

ಲಾರಿಯು ದೇಹಗಳನ್ನು ಸುಮಾರು 15 ಅಡಿಗಳವರೆಗೆ ಎಳೆದುಕೊಂಡು ಹೋಗಿದೆ. ರಸ್ತೆ ತುಂಬೆಲ್ಲಾ ರಕ್ತ ಚೆಲ್ಲಿತ್ತು. ಸ್ಥಳೀಯರು ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ‘ಅಪಘಾತವಾದಾಗ 12 ಮಂದಿಯಷ್ಟೇ ಇದ್ದರು. ಕುಣಿದು ಸುಸ್ತಾದ ಬಹುತೇಕರು ನೀರು ಕುಡಿಯಲೆಂದು ಸಮೀಪದ ಮನೆಗೆ ಹೋಗಿದ್ದರು. ಹೀಗಾಗಿ, ದೊಡ್ಡ ಅನಾಹುತ ತಪ್ಪಿತು’ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)