ಜೀವ ವಿಜ್ಞಾನ ನವೋದ್ಯಮಗಳಿಗೆ ನೆರವು: ಸರ್ಕಾರದ ನೆರವಿನ ಹಸ್ತ

7

ಜೀವ ವಿಜ್ಞಾನ ನವೋದ್ಯಮಗಳಿಗೆ ನೆರವು: ಸರ್ಕಾರದ ನೆರವಿನ ಹಸ್ತ

Published:
Updated:
Deccan Herald

ಬೆಂಗಳೂರು: ಜೀವ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 100 ಕ್ಕೂ ಹೆಚ್ಚು ನವೋದ್ಯಮಗಳು ಜಾಗತಿಕ ಮಟ್ಟದಲ್ಲಿ ನೆಲೆ ಕಂಡುಕೊಳ್ಳಲು ನೆರವು ನೀಡುವ ಉದ್ದೇಶದಿಂದ ‘ಸೆಂಟರ್‌ ಫಾರ್‌ ಸೆಲ್ಯುಲಾರ್‌ ಅಂಡ್‌ ಮಾಲೆಕ್ಯುಲಾರ್‌ ಪ್ಲಾಟ್‌ಫಾರ್ಮ್‌’ (ಸಿ–ಸಿಎಎಂಪಿ) ಗೆ ರಾಜ್ಯ ಸರ್ಕಾರ ನೆರವಿನ ಹಸ್ತ ಚಾಚಿದೆ.

ಈ ಸಂಬಂಧ ರಾಜ್ಯ ಸರ್ಕಾರ ಮೂರು ಕೇಂದ್ರಗಳನ್ನು ಆರಂಭಿಸಿದೆ. ಗುರುವಾರ ಈ ಕೇಂದ್ರಗಳ ಉದ್ಘಾಟನೆ ನೆರವೇರಿತು. ಕರ್ನಾಟಕ ಸ್ಟಾರ್ಟ್‌ಅಪ್ ಅಡ್ವಾನ್ಸ್‌ಮೆಂಟ್‌ ಪ್ರೋಗ್ರಾಂ (ಕೆಸ್ಯಾಪ್‌), ಟೆಕ್ನಾಲಜಿ ಬಿಜಿನೆಸ್‌ ಇನ್‌ಕ್ಯುಬೇಟರ್‌(ಟಿಬಿಐ) ಮತ್ತು ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಫಾರ್‌ ಇನ್ನೊವೇಷನ್‌ ಸ್ಥಾಪನೆಗೊಂಡ ಕೇಂದ್ರಗಳು.

ರಾಜ್ಯದಲ್ಲಿ ಸಾಕಷ್ಟು ನವೋದ್ಯಮಗಳು ಹುಟ್ಟಿಕೊಂಡಿವೆ. ಇವು ಸಾಕಷ್ಟು ಅದ್ಭುತ ಎನಿಸುವ ಸಂಶೋಧನೆಗಳನ್ನು ಆಧರಿಸಿದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿವೆ. ಆದರೆ, ಆ ಹಂತದಿಂದ ಮುಂದಕ್ಕೆ ಹೋಗಲಾಗದೇ ಅವು ಸಂಕಷ್ಟಕ್ಕೆ ತುತ್ತಾಗಿವೆ. ಇಂತಹ ನವೋದ್ಯಮಗಳ ಕೈಹಿಡಿದು ಮೇಲಕ್ಕೆತ್ತಿ ಮುನ್ನಡೆಸುವ ಉದ್ದೇಶ ಈ ಕೇಂದ್ರಗಳದ್ದು ಎಂದು ಸಿ–ಸಿಎಎಂಪಿ ನಿರ್ದೇಶಕ ಡಾ.ತಸ್ಲಿಮಾರಿಫ್‌ ಸೈಯದ್‌ ಹೇಳಿದರು.

ಜೀವ ವಿಜ್ಞಾನಕ್ಕೆ ಸಂಬಂಧಿಸಿದಂತೆ 100 ಕ್ಕೂ ಹೆಚ್ಚು ನವೋದ್ಯಮಗಳಿಗೆ ಹಣಕಾಸು ನೆರವು ನೀಡಿ ಪೋಷಿಸಲಾಗಿದೆ. ಸಿ–ಸಿಎಎಂಪಿ ನವೋದ್ಯಮಗಳಿಗೆ ₹ 250 ಕೋಟಿ ಹಣಕಾಸು ನೆರವು ಸಿಕ್ಕಿದೆ. ಇವುಗಳಲ್ಲಿ 450 ಕ್ಕೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 65 ನವೋದ್ಯಮಗಳು ತಮ್ಮ ಸಂಶೋಧನೆಗಳಿಗೆ ಪೇಟೆಂಟ್‌ ಪಡೆದಿವೆ. ಈಗಾಗಲೇ 10 ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಿವೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್‌, ವಿಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲ ರೀತಿ ನೆರವುಗಳನ್ನು ನೀಡಲು ಸರ್ಕಾರ ಸಿದ್ಧವಿದೆ. ಮುಖ್ಯವಾಗಿ ರೈತರು ಮತ್ತು ಜನ ಸಾಮಾನ್ಯರ ಬದುಕು ಹಸನಾಗಬೇಕು. ಇದಕ್ಕಾಗಿ ವಿಜ್ಞಾನಿಗಳು ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.

ಕೃಷಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಆದರೆ,ಗ್ರಾಹಕರು ಅತಿ ಹೆಚ್ಚು ದರ ನೀಡಿ ಕೃಷಿ ಉತ್ಪನ್ನ ಖರೀದಿಸುವ ಸ್ಥಿತಿ ಇದೆ. ಇದನ್ನು ಸರಿಪಡಿಸಬೇಕಾಗಿದೆ. ಇದಕ್ಕಾಗಿ ಉತ್ತಮ ತಳಿಯ  ಆಹಾರ ಧಾನ್ಯ ಬೆಳೆಯಬೇಕು. ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳೂ ಕೈ ಜೋಡಿಸಬೇಕು ಎಂದರು.

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !